
ಬಂಟ್ವಾಳ : ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಬುಧವಾರ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಈ ವೇಳೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸನ್ಮಾನ ಹಾಗೂ ಗುರುತುಚೀಟಿ ವಿತರಣೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಬಂಟ್ವಾಳ ನಗರ ಪೊಲೀಸ್ ಠಾಣಾ ನಿರೀಕ್ಷಕ ಅನಂತಪದ್ಮನಾಭ, ಪತ್ರಕರ್ತರ ವರದಿಗಳಿಂದ ಸಮಾಜಕ್ಕೆ ಮಾಹಿತಿ, ಜಾಗೃತಿ ದೊರಕುವುದಲ್ಲದೆ, ದಿಕ್ಕನ್ನು ಬದಲಿಸುವ ಅವಕಾಶ ಇದೆ ಎಂದರು. ಕಣ್ಣು, ಕಿವಿಗಳು ಎಷ್ಟು ಜಾಗೃತವಾಗಿದ್ದರೂ ಸಮಾಜ ಜಾಗೃತವಾಗಿರುತ್ತದೆ. ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಗಳಿದ್ದಂತೆ, ಪೊಲೀಸರು ಮತ್ತು ಪತ್ರಿಕಾರಂಗ ಜತೆಯಾದರೆ ಅಪರಾಧ ತಡೆ, ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು. ಸೋಶಿಯಲ್ ಮೀಡಿಯಾ ಇವತ್ತು ಅಂತರ್ಜಾಲ ಮೂಲಕ ತೆರೆದುಕೊಂಡಿದೆ. ಸತ್ಯಾಂಶವನ್ನು ಮನದಟ್ಟು ಮಾಡುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿದ್ದು ಪ್ರಬುದ್ಧತೆ ಮೆರೆದಿದೆ. ಸಾರ್ವಜನಿಕರು 112 ಬಳಕೆ ಮಾಡುವಂತೆ ಜಾಗೃತಿ ಮೂಡಿಸಬೇಕು. ಸೈಬರ್ ಕ್ರೈಮ್ ಇಂದು ಜಾಸ್ತಿ ಇದ್ದು, ಈ ಕುರಿತು ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ಸಮಾಜದ ಆಗುಹೋಗುಗಳ ಬಗ್ಗೆ ಗಮನಹರಿಸುವ ಪತ್ರಕರ್ತರಿಗೆ ನಿವೃತ್ತಿಯ ಕಾಲಕ್ಕೆ ಪಿಂಚಣಿ ಸಹಿತ ಯಾವುದೇ ಸವಲತ್ತು ಸಿಗುವುದಿಲ್ಲ. ಇದರಲ್ಲಿ ದೊಡ್ಡ ಬದಲಾವಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವು ಮುಂದಡಿ ಇಡೋಣ ಎಂದರು.

ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಬಸ್ ಪಾಸ್ ಸಹಿತ ಪತ್ರಕರ್ತರಿಗೆ ದೊರಕುವ ಸವಲತ್ತುಗಳ ಕುರಿತು ನಡೆಸಿದ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.

ಕಾಸರಗೋಡು ಕ್ಷೇಮಾಭಿವೃದ್ಧಿ ಕನ್ನಡ ಸಂಘದ ಕೆಯುಡಬ್ಲುಜೆ ದತ್ತಿ ಪ್ರಶಸ್ತಿ ಪುರಸ್ಕೃತ ಹರೀಶ ಮಾಂಬಾಡಿ ಮತ್ತು ಉತ್ತಮ ವರದಿಗಾಗಿ 2024ನೇ ಸಾಲಿನ ಕೆಯುಡಬ್ಲುಜೆ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಅಬ್ದುಲ್ ರಹಿಮಾನ್ ತಲಪಾಡಿ ಅವರನ್ನು ಸನ್ಮಾನಿಸಲಾಯಿತು.

ಪುತ್ತೂರಿಗೆ ವರ್ಗಾವಣೆಗೊಂಡಿರುವ ಉದಯವಾಣಿ ಹಿರಿಯ ವರದಿಗಾರ ಕಿರಣ್ ಸರಪಾಡಿ ಅವರಿಗೆ ಬೀಳ್ಕೊಡುಗೆ ಹಾಗೂ ಬಂಟ್ವಾಳಕ್ಕೆ ಉದಯವಾಣಿ ಹಿರಿಯ ವರದಿಗಾರರಾಗಿ ಆಗಮಿಸಿದ ದಿನೇಶ್ ಇರಾ ಅವರನ್ನು ಸ್ವಾಗತಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸ್ವಾಗತಿಸಿದರು.

ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆಲಿ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಹರೀಶ್ ಮಾಂಬಾಡಿ ವಂದಿಸಿದರು. ಉಪಾಧ್ಯಕ್ಷ ರಮೇಶ್ ಕೆ. ಪುಣಚ, ಕೋಶಾಧಿಕಾರಿ ಚಂದ್ರಶೇಖರ ಕಲ್ಮಲೆ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಉದಯಶಂಕರ ನೀರ್ಪಾಜೆ, ರತ್ನದೇವ್ ಪುಂಜಾಲಕಟ್ಟೆ, ವೆಂಕಟೇಶ ಬಂಟ್ವಾಳ, ಸದಸ್ಯರಾದ ಗಣೇಶ ಪ್ರಸಾದ ಪಾಂಡೇಲು, ಯಾದವ ಅಗ್ರಬೈಲ್, ಕಿಶೋರ್ ಪೆರಾಜೆ, ನಿಶಾಕಿರಣ್ ಬಾಳೆಪುಣಿ ಉಪಸ್ಥಿತರಿದ್ದರು.


Be the first to comment on "ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ"