
ಬಿ.ಸಿ.ರೋಡ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರುವೃತ್ತ ನವೀನ ವಿನ್ಯಾಸದೊಂದಿಗೆ ಮರುನಿರ್ಮಾಣವಾಗುತ್ತಿದ್ದು, ಭರದಿಂದ ಕೆಲಸ ಸಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಬಿ.ಸಿ.ರೋಡ್ ಅಡ್ಡಹೊಳೆ ಅಭಿವೃದ್ಧಿ ವೇಳೆ ಇಲ್ಲಿದ್ದ ವೃತ್ತವನ್ನು ತೆರವುಗೊಳಿಸಲಾಗಿತ್ತು. ಇದೀಗ ಪ್ರಾಧಿಕಾರದಿಂದಲೇ ಕಾಮಗಾರಿ ಆರಂಭಗೊಂಡಿದೆ. ಒಂದು ಭಾಗದಲ್ಲಿ ಬಂಟ್ವಾಳ ಪೇಟೆ, ಮೂಡುಬಿದಿರೆ, ಪುಂಜಾಲಕಟ್ಟೆ ಕಡೆಗಳಿಂದ ಈ ರಸ್ತೆ ಕವಲೊಡೆದರೆ, ಮತ್ತೊಂದು ಭಾಗದಲ್ಲಿ ಹಾಸನ, ಇನ್ನೊಂದು ಭಾಗದಲ್ಲಿ ಗೂಡಿನಬಳಿ, ಪಾಣೆಮಂಗಳೂರು ಕಡೆಗಳಿಗೆ ಬಿ.ಸಿ.ರೋಡ್ ಹಾಗೂ ಮಂಗಳೂರು ರಸ್ತೆ ಸಂಪರ್ಕಗೊಳ್ಳುತ್ತದೆ. ಹೋಗುವುದು, ಬರುವುದು ಸೇರಿ ಒಟ್ಟು ಏಳು ರಸ್ತೆಗಳು ಇಲ್ಲಿ ಸಂಧಿಸುತ್ತವೆ. ಇವುಗಳ ಮಧ್ಯೆ ಈ ವೃತ್ತ ನಿರ್ಮಾಣವಾಗುತ್ತಿದೆ.

ವಾಹನಗಳಿಗೆ ಅಡ್ಡವಾಗುವುದಿಲ್ಲ:
ಪ್ರಾರಂಭದಲ್ಲಿ ಬಲು ವಿಸ್ತಾರದ ವೃತ್ತ ಮರು ನಿರ್ಮಾಣದ ಉದ್ದೇಶವಿತ್ತು. ಆದರೆ, ಆಗ ಪ್ರಯಾಣಿಕ ವಾಹನಗಳಿಗೆ ಕೊಂಚ ಸಮಸ್ಯೆ ಆಗಬಹುದು ಎಂಬ ಕಾರಣದಿಂದ ಬಹು ವಿಸ್ತಾರವನ್ನು ಕಿರಿದು ಮಾಡಿ ಈಗ 30 ಮೀ.ಗೆ ಸೀಮಿತಗೊಳಿಸಲಾಗಿದೆ.
ಹೆದ್ದಾರಿ ಅಭಿವೃದ್ದಿಗೊಳಿಸುವ ಸಂದರ್ಭ ಬಿ.ಸಿ ರೋಡ್ ನ ವೃತ್ತವೂ ತೆರವುಗೊಳ್ಳುವ ಕಾಲದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಬಿಲ್ಲವ ಸಂಘದ ಪ್ರಮುಖರ ಜತೆಗೆ ಚರ್ಚಿಸಿದ್ದರು. ವೃತ್ತ ಮರು ನಿರ್ಮಾಣದ ಕುರಿತು ಅಧಿಕಾರಿಗಳಲ್ಲಿ ಅಗ ವಿವರ ಪಡೆಯಲಾಗಿತ್ತು. ಬಳಿಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಈ ನಿಟ್ಟಿನಲ್ಲಿ ಬಿಲ್ಲವ ಸಂಘಕ್ಕೆ ಬಂದು ಎಲ್ಲರ ಅಭಿಪ್ರಾಯ ಪಡೆದು ವೃತ್ತ ನಿರ್ಮಿಸುವ ಬಗ್ಗೆ ಸಮಾಲೋಚನೆಯನ್ನೂ ನಡೆಸಿದ್ದರು. ಇದರಂತೆ ವೃತ್ತ ನಿರ್ಮಾಣವಾಗುತ್ತಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಜ್ಞಾನದ ಬೆಳಕು ಸಂಕೇತಿಸುವ ದೀಪದ ಮಾದರಿ:
ಬ್ರಹ್ಮಶ್ರೀ ನಾರಾಯಣ ಗುರು ವೃತ್ತವನ್ನು ನಾರಾಯಣ ಗುರುಗಳ ಸಂದೇಶದ ಪ್ರಕಾರ ಡಿಸೈನ್ ಮಾಡಲಾಗಿದೆ. ಜಾತಿ ಮತದ ಬಗ್ಗೆ ಜನರಿಗೆ ಜ್ಞಾನೋದಯ ಹಾಗೂ ವಿದ್ಯೆಯಿಂದ ಸ್ವತಂತ್ರ ಎಂಬ ಗುರುಗಳ ಆಶಯದಂತೆ ವೃತ್ತದ ಡಿಸೈನ್ ರೂಪಿಸಲಾಗಿದೆ. ವಿದ್ಯೆ ಅಂದರೆ ಬೆಳಕು ಎಂಬ ಆಧಾರದಲ್ಲಿ ದೀಪದ ಮಾದರಿ ಇದಕ್ಕಾಗಿ ರೂಪಿಸಲಾಗಿದೆ. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ತತ್ವವನ್ನು ದ್ಯೋತಕವಾಗಿಟ್ಟು ದೀಪವನ್ನು ಮೂರು ಭಾಗಗಳಾಗಿ ರಚಿಸಲಾಗುತ್ತದೆ. ಇದು 16 ಫೀಟ್ ಎತ್ತರವಿರಲಿದೆ. 30 ಮೀ. ವಿಸ್ತೀರ್ಣದಲ್ಲಿ ವೃತ್ತ ರೂಪುಗೊಳ್ಳಲಿದೆ
ಈ ಹಿಂದೆ ಬಿ.ಸಿ ರೋಡಿನಲ್ಲಿದ್ದ ನಾರಾಯಣ ಗುರು ವೃತ್ತ ಹೆದ್ದಾರಿ ಕಾಮಗಾರಿ ಕಾರಣದಿಂದ ತೆರವಾಗಿತ್ತು. ಅದೀಗ ಪ್ರಾಧಿಕಾರದಿಂದ ಮರುನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ. ಸಮಾಜದ ಮುಖಂಡರೊಂದಿಗೆ ಸಂಸದರು, ಶಾಸಕರು ಚರ್ಚಿಸಿ ನವವಿನ್ಯಾಸದೊಂದಿಗೆ ಮೂಡಿಬರಲಿದೆ ಎನ್ನುತ್ತಾರೆ ಭುವನೇಶ್ ಪಚ್ಚಿನಡ್ಕ, ಅಧ್ಯಕ್ಷರು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ


Be the first to comment on "ನವವಿನ್ಯಾಸದಲ್ಲಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ | ಬಿ.ಸಿ.ರೋಡ್ ಗೆ ಮೆರುಗು | ಜ್ಞಾನದ ಬೆಳಕು ಪಸರಿಸುವ ಸಂದೇಶ"