ಕಲ್ಲಡ್ಕ ಪೇಟೆಯಲ್ಲಿ ಬುಧವಾರ ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿದ್ದ ವಾಹನಗಳನ್ನು ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಉಪನಿರೀಕ್ಷಕ ಆದರ್ಶ್ ನೇತೃತ್ವದಲ್ಲಿ ತೆರವುಗೊಳಿಸುವ ಕಾರ್ಯ ನಡೆಸಿ, ನಿಯಮಬದ್ಧ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಿದರು.

ಈ ಸಂದರ್ಭ ಬಲಭಾಗದಲ್ಲಿ ವಾಹನ ನಿಲ್ಲಿಸಿದ್ದವರು ಇನ್ನು ತಮ್ಮ ವಾಹನಗಳನ್ನು ಎಲ್ಲಿಡಲಿ ಎಂದು ಪ್ರಶ್ನಿಸುತ್ತಿದ್ದು, ಈ ಸಂದರ್ಭ ಪೊಲೀಸರು ಸಂಚಾರ ನಿಯಮಗಳನ್ನು ವಿವರಿಸಿದರು. ವಾಹನಗಳನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿದರೆ, ಯಾರಿಗೂ ತೊಂದರೆ ಆಗುವುದಿಲ್ಲ. ಎರಡೂ ಕಡೆಗಳಲ್ಲಿ ನಿಲ್ಲಿಸಿದರೆ, ರಸ್ತೆಯಲ್ಲಿ ಸಂಚರಿಸುವವರಿಗೆ ಕಷ್ಟವಾಗುತ್ತದೆ. ಹಾಗೆಯೇ ಇದು ಸರಿಯಾದ ಕ್ರಮವೂ ಅಲ್ಲ ಎಂದು ಪೊಲೀಸರು ತಿಳುವಳಿಕೆ ಹೇಳಿದರು. ಗೂಡ್ಸ್ ಟೆಂಪೊ, ಆಟೊ ಸ್ಟ್ಯಾಂಡ್ ಗಳನ್ನು ಫ್ಲೈಓವರ್ ಅಡಿಭಾಗದಲ್ಲಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಪಾಯಕಾರಿ ಪಾದಚಾರಿ ಮಾರ್ಗ:
ಫ್ಲೈ ಓವರ್ ಕೆಳಗೆ ರಸ್ತೆಬದಿಯ ಪಾದಚಾರಿ ಮಾರ್ಗ ಬಹಳ ಅಪಾಯಕಾರಿಯಾಗಿದೆ. ಅಲ್ಲಿ ಬೀದಿ ದೀಪ ಇಲ್ಲ. ಅಂಗಡಿಯ ಬೆಳಕು, ಚಲಿಸುವ ವಾಹನಗಳ ಬೆಳಕು ಮಾತ್ರ ಕಾಣಿಸುತ್ತದೆ. ಸ್ಲ್ಯಾಬ್ ಮೇಲೆ ನಡೆದಾಗ ಎಲ್ಲಿ ಕಬ್ಬಿಣದ ಸರಳು ಕಾಲಿಗೆ ಸಿಲುಕಿ ಅಥವಾ ಕಾಲು ಸರಳಿಗೆ ಸಿಲುಕಿ ಮುಗ್ಗರಿಸಿ ಬೀಳುತ್ತೇವೋ ಅನ್ನುವ ಭಯ. ಜತೆಗೆ ಅಲ್ಲಲ್ಲಿ ಆ ಸ್ಲ್ಯಾಬ್ ಒಡೆದಿದೆ. ನಡೆಯುವಾಗ ಸ್ವಲ್ಪ ಗಮನ ತಪ್ಪಿದರೂ ಕಾಲು ಗುಂಡಿಯಲ್ಲಿ ಬೀಳಬಹುದು ಎಂದು ಓದುಗರೊಬ್ಬರು ಪ್ರತಿಕ್ರಿಯಿಸಿದ್ದರು.

ಫ್ಲೈಓವರ್ ಅಡಿ ಖಾಲಿ ಬಿಡಬೇಡಿ
ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಾಣವಾದ ಬಳಿಕದ ಸಮಸ್ಯೆಗಳ ಪಟ್ಟಿಯನ್ನು ವಿಕ ಪ್ರಕಟಿಸಿತ್ತು. ಇದರಲ್ಲಿ ಟ್ರಾಫಿಕ್ ಅವ್ಯವಸ್ಥೆಯೀಗ ಸರಿಯಾಗಿದೆ. ಆದರೆ ಫ್ಲೈಓವರ್ ಅಡಿ ಖಾಲಿ ಜಾಗ ಬಿಟ್ಟು ವಾಹನ ನಿಲುಗಡೆಗೆ ಊರೆಲ್ಲಾ ಸುತ್ತಾಡುವುದೂ ಸಮಂಜಸವಲ್ಲ. ಹೀಗಾಗಿ ಕಲ್ಲಡ್ಕದ ಹಿರಿಯರು, ಪ್ರಮುಖರು, ಜನಪ್ರತಿನಿಧಿಗಳು, ಪಂಚಾಯಿತಿ, ಇಲಾಖೆ ಜೊತೆ ಸಮನ್ವಯ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅವಶ್ಯ.


Be the first to comment on "ಕಲ್ಲಡ್ಕದಲ್ಲಿ ನಿಯಮಬದ್ಧ ಪಾರ್ಕಿಂಗ್ ಜಾರಿ – details"