ಮಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಭೂಕೈಲಾಸವೆಂದೇ ಪ್ರಸಿದ್ಧವಾದ ಐತಿಹಾಸಿಕ ಶ್ರೀ ಕ್ಷೇತ್ರ ಕಾರಿಂಜೇಶ್ವರ ಬೆಟ್ಟದ ಆವರಣದಲ್ಲಿ 3ನೇ ಆವೃತ್ತಿಯ ’ಯೋಗ ವಿದ್ ಯೋಧ’ ಬೃಹತ್ ಯೋಗಾಭ್ಯಾಸ ಕಾರ್ಯಕ್ರಮವು ನಡೆಯಿತು.

ಪ್ರಕೃತಿ ಹಾಗೂ ದೈವಿಕತೆಯ ಮಡಿಲಲ್ಲಿ ಮನಸ್ಸನ್ನು ಶಾಂತಗೊಳಿಸಿ, ದೇಹವನ್ನು ಹತೋಟಿಗೆ ತರುವ ಈ ಅಪೂರ್ವ ಯೋಗಾಭ್ಯಾಸಕ್ಕೆ ಪ್ರಕೃತಿ ರುದ್ರ ರಮಣೀಯ ಕೊಡ್ಯಾಮಲೆ ಬೆಟ್ಟಗಳ ಶ್ರೇಣಿ ಸಾಕ್ಷಿಯಾಯಿತು.

ದ.ಕ. ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಡೆದ ಯೋಗಾಭ್ಯಾಸದಲ್ಲಿ ನೂರಾರು ಯೋಗಾಸಕ್ತರು ಉತ್ಸಾಹದಿಂದ ಭಾಗವಹಿಸಿದ್ದರು. ಈ ಬಾರಿಯ ವಿಶ್ವ ಯೋಗ ದಿನದ ಧ್ಯೇಯವಾಕ್ಯವಾದ “ಆರೋಗ್ಯಕರ ವಯಸ್ಸಿಗೆ ಯೋಗ” (Yoga for Healthy Ageing) ಪರಿಕಲ್ಪನೆಗೆ ಪೂರಕವಾಗಿ, ಯೋಗಪಟು ಗೋಪಾಲಕೃಷ್ಣ ದೇಲಂಪಾಡಿ ಅವರ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನ ಹಾಗೂ ಪ್ರಾಣಾಯಾಮ ಪ್ರದರ್ಶಿಸಲಾಯಿತು.

ವಿದ್ಯಾರ್ಥಿಗಳು, ಯುವಕರು, ನಟ-ನಟಿಯರು ಹಾಗೂ ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಮಹತ್ವವನ್ನು ಸಾರಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಸ್ಕಾಲರ್‌ಶಿಪ್ ವಿತರಿಸಿ ಗೌರವಿಸಲಾಯಿತು.

ಸಾಧಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಸದರು ಹಾಗೂ ಗಣ್ಯರು ಶುಭ ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ‘ಯೋಗ ವಿದ್ ಯೋಧ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೊದಲ ವರ್ಷ ಸಸಿಹಿತ್ಲುವಿನ ಕಡಲ ಕಿನಾರೆಯಲ್ಲಿ ಹಾಗೂ ಕಳೆದ ಬಾರಿ ಐತಿಹಾಸಿಕ ಸೋಮೇಶ್ವರ ದೇಗುಲದ ಅಂಗಣದಲ್ಲಿ ನಡೆದಿತ್ತು



Be the first to comment on "ಶ್ರೀ ಕ್ಷೇತ್ರ ಕಾರಿಂಜದಲ್ಲಿ ಸಂಸದ ಕ್ಯಾ. ಚೌಟ ನೇತೃತ್ವದ 3ನೇ ಆವೃತ್ತಿಯ ʼಯೋಗ ವಿದ್ ಯೋಧʼ ಕಾರ್ಯಕ್ರಮ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣೆ"