ಬಂಟ್ವಾಳ: ಕಲ್ಲಡ್ಕದಿಂದ ಮಾಣಿಗೆ ತೆರಳುತ್ತಿದ್ದ ಬೈಕ್ ಗೆ ಸ್ಕೂಟರ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಹತ್ತು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಬಾಳ್ತಿಲ ಗ್ರಾಮದ ಹೇಮಂತ್ ಕುಮಾರ್ ಎಂಬವರ ಪುತ್ರಿ ನೈರುತಿ ಎಂ. ಸುವರ್ಣ (10) ಮೃತಪಟ್ಟ ಬಾಲಕಿ.

ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿಯ ವೇಳೆ ಮೃತಪಟ್ಟಿದ್ದಾಳೆ. ನೆಟ್ಲ ಸದಾಶಿವ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಪತ್ನಿ ಮತ್ತು ಮಕ್ಕಳಾದ ನೈರುತಿ ಮತ್ತು ಆಕೆಯ ತಂಗಿಯೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ಹೇಮಂತ್ ಅವರಿದ್ದ ಬೈಕ್ ಗೆ ಸ್ಕೂಟರ್ ಒಂದು ಡಿಕ್ಕಿ ಹೊಡೆದಿದೆ. ಸೂರಿಕುಮೇರು ಸಮೀಪ ಈ ಘಟನೆ ನಡೆದಿದೆ. ಡಿಕ್ಕಿ ಹೊಡೆದ ಪರಿಣಾಮ, ಕಾಂಕ್ರೀಟ್ ರಸ್ತೆಗೆ ನೈರಿತಿ ಬಿದ್ದಿದ್ದಾಳೆ. ಈ ಸಂದರ್ಭ ತಲೆಗೆ ಗಂಭೀರ ಪೆಟ್ಟಾಗಿದೆ. ಕೂಡಲೇ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಈಕೆ ಸ್ಥಳೀಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದು, ಭಜನಾ ತರಬೇತಿಯನ್ನೂ ಪಡೆಯುತ್ತಿದ್ದಳು. ಉತ್ತಮ ಭಜನಾಪಟುವೂ ಆಗಿದ್ದಳು.ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ. ಆದರ್ಶ್ ಸಹಿತ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.



Be the first to comment on "ಸೂರಿಕುಮೇರುವಿನಲ್ಲಿ ಬೈಕ್, ಸ್ಕೂಟರ್ ಡಿಕ್ಕಿ, ಬಾಲಕಿ ಸಾವು"