ವಿಧಾನಸಭೆಯ ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಜಲಜೀವನ್ ಮಿಷನ್ ಬಹುಗ್ರಾಮ ಯೋಜನೆ ಸಮಸ್ಯೆಯಿಂದ ಲಭ್ಯತೆಯಲ್ಲಿ ಅಡಚಣೆ ಉಂಟಾಗಿರುವ ಕುರಿತು ಬಂಟ್ವಾಳ ತಾಪಂ ಸಭಾಂಗಣದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಕಲ್ಪಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಮಾಹಿತಿ ಪಡೆದ ಶಾಸಕ ರಾಜೇಶ್ ನಾಯ್ಕ್, ಪ್ರಗತಿ ವರದಿ ನೀಡಲು ಅಧಿಕಾರಿಗಳುಗೆ ಸೂಚಿಸಿದರು.
ಕುಡಿಯುವ ನೀರು ಪೂರೈಕೆಯನ್ನು ಪ್ರಥಮ ಆದ್ಯತೆ ನೆಲೆಯಲ್ಲಿ ಮಾಡಬೇಕು, ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕ್ರಮ ಕೈಗೊಳ್ಳಲು ಸೂಚಿಸಿದರು.
ತಾಲೂಕಿನ ಪ್ರತಿಯೊಂದು ಗ್ರಾಮಾಡಳಿತ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ ಶಾಸಕ ರಾಜೇಶ್ ನಾಯ್ಕ್, ನೀರಿನ ವಿಚಾರದಲ್ಲಿ ಯಾವುದೇ ಕೊರತೆಯಾಗದಂತೆ ಹಾಗೂ ಲಭ್ಯ ಅನುದಾನ ಬಳಸಿಕೊಂಡು ತುರ್ತು ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು. ಬಂಟ್ವಾಳ ತಹಸೀಲ್ದಾರ್ ಮಂಜುನಾಥ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಗ್ರಾಪಂ ಆಡಳಿತಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಆಗಮಿಸಿ ಪೂರಕ ಮಾಹಿತಿ ನೀಡಿದರು.
ಗೋಳ್ತಮಜಲು, ಬಾಳ್ತಿಲ ಸಹಿತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ವ್ಯಾಪ್ತಿ ಗ್ರಾಪಂಗಳಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಕಾಮಗಾರಿಯಿಂದ ಅಡಚಣೆ ಉಂಟಾದರೆ ಗಮನಕ್ಕೆ ತನ್ನಿ, ಜಲಜೀವನ್ ಮಿಷನ್ ಮತ್ತು ಮೆಸ್ಕಾಂ ಅಧಿಕಾರಿಗಳು ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಎಂದು ಶಾಸಕರು ಸೂಚಿಸಿದರು.ಜಕ್ರಿಬೆಟ್ಟು ಡ್ಯಾಂ ಮಾಡಿದ ಬಳಿಕ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ, ಹಿಂದೆಲ್ಲಾ ನೀರಿಗಾಗಿ ಸಮಸ್ಯೆ ಇದ್ದುದನ್ನು ನೆನಪಿಸಿದ ಅವರು, ಈಗ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು. ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಪಂ ವ್ಯಾಪ್ತಿಗಳಲ್ಲಿನ ಸಮಸ್ಯೆಗಳ ಕುರಿತು ಗಮನ ಸೆಳೆದರು.