ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ವತಿಯಿಂದ ಆ.18ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.
ಬಿ.ಸಿ ರೋಡ್ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಎಸ್ ಐ ವೇತನ ಮಿತಿಯನ್ನು ಪ್ರಸ್ತುತ 21 ಸಾವಿರ ರೂ.ಗಳಿಂದ 42 ಸಾವಿರ ರೂ.ಗೆ ಏರಿಸಬೇಕು, ಕನಿಷ್ಠ ಮಾಸಿಕ ಪಿಂಚಣಿಯನ್ನು ಪ್ರಸ್ತುತ 1 ಸಾವಿರ ರೂ.ಗಳಿಂದ 7500 ರೂ.ಗೆ ಏರಿಸಿ ಪಿಂಚಣಿದಾರರಿಗೆ ಡಿಎ ಹಾಗೂ ಸಮಗ್ರ ಆರೋಗ್ಯ ಸೌಲಭ್ಯ ಒದಗಿಸಬೇಕು. ಇಪಿಎಫ್ ವೇತನ ಮಿತಿಯನ್ನು ಪ್ರಸ್ತುತ 15 ಸಾವಿರ ರೂ.ಗಳಿಂದ 30 ಸಾವಿರ ರೂ.ಗೆ ಹೆಚ್ಚಿಸಬೇಕು, ಆಶಾ, ಅಂಗನವಾಡಿ ಸಹಿತ ಎಲ್ಲಾ ಯೋಜನಾ ನೌಕರರ ಗೌರವಧನವನ್ನು ಸಮರ್ಪಕವಾಗಿ ಹೆಚ್ಚಿಸಬೇಕು. ಗುತ್ತಿಗೆ, ಹೊರಗುತ್ತಿಗೆ ಸಹಿತ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು ಸಹಿತ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ, ಮೋಟಾರ್ ಮಹ್ದೂರ್ ಸಂಘ (ಬಿಎಂಎಸ್) ಜಿಲ್ಲೆ ಉಪಾಧ್ಯಕ್ಷ ನಾರಾಯಣ ಪೂಜಾರಿ, ದ.ಕ.ಜಿಲ್ಲಾ ಬೀಡಿ ಮಜ್ದೂರ್ ಸಂಘ ಪ್ರಧಾನ ಕಾರ್ಯದರ್ಶಿ ನಳಿನಿ ಅಡ್ಯಾರು, ಬಂಟ್ವಾಳ ಆಶಾ ಮಜ್ದೂರ್ ಸಂಘ ಗೌರವಾಧ್ಯಕ್ಷೆ ಗಿರಿಜಾ, ಆಶಾ ಕಾರ್ಯಕರ್ತೆಯರ ಮಜ್ದೂರ್ ಸಂಘ ಬಂಟ್ವಾಳ ಅಧ್ಯಕ್ಷೆ ತುಳಸಿ ದೇವರಾಜ, ಆಟೊ ರಿಕ್ಷಾ ಚಾಲಕ ಮಾಲೀಕರ ಸಂಘ (ಬಿಎಂಎಸ್) ಬಂಟ್ವಾಳ ಗೌರವಾಧ್ಯಕ್ಷ ಸದಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಪಾನೇರ್, ಪ್ರಮುಖರಾದ ಸತೀಶ್ ಭಂಡಾರಿಬೆಟ್ಟು ಉಪಸ್ಥಿತರಿದ್ದರು.