| ದ್ವಿತೀಯ ಪಿಯುಸಿ: ಸರಕಾರಿ ಕಾಲೇಜುಗಳ ಸಾಧಕರಿಗೆ ಸನ್ಮಾನ

ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆಗೈದ ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯುವ ಮೂಲಕ ತಮ್ಮ ಪೋಷಕರಿಗೆ ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮಕ್ಕಳ ಸಾಧನೆ ಹಿಂದೆ ಪೋಷಕರ ಕೊಡುಗೆ ಇದೆ. ವಿದ್ಯಾರ್ಥಿಗಳು ವಿದ್ಯೆಯ ಹಿಂದೆ ಹೋಗಬೇಕು, ಹಣದ ಹಿಂದೆ ಹೋಗಬಾರದು. ವಿದ್ಯೆಯ ಹಿಂದೆ ಹೋದರೆ ಹಣ ತಾನಾಗಿಯೇ ಬರುತ್ತದೆ ಎಂದರು. ಸರಕಾರಿ ಕಾಲೇಜುಗಳ ಸೀಮಿತ ಸವಲತ್ತುಗಳ ಮಧ್ಯೆ ವಿದ್ಯಾರ್ಥಿಗಳು ಸಾಧನೆ ಗೈದಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಸನ್ಮಾನಿತ ವಿದ್ಯಾರ್ಥಿಗಳ ವಿವರ: ಕಲಾ ವಿಭಾಗದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಶ್ಮಿತಾ – 582 ಅಂಕ ವಾಣಿಜ್ಯ ವಿಭಾಗದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನೇಹಾ ಎಂ. ಡಿ – 591, ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ದಕ್ಷಾ – 591, ಬಲ್ಮಠ ಸರಕಾರಿ ಪದವಿ ಪೂರ್ವ ಕಾಲೇಜಿನ ಮಾನ್ವಿಕಾ – 589 ಅಂಕ
ವಿಜ್ಞಾನ ವಿಭಾಗದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪವಿತ್ರ ಎಸ್. ಪಿ – 586, ಪುಂಜಾಲಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಸಾತ್ವಿ ಬಾಳಿಗ- 583
ಪ್ರಾಂಶುಪಾಲರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಜಿಲ್ಲೆಯ 5 ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರ. ಬೆಳ್ಳಾರೆ, ಗುತ್ತಿಗಾರು, ಕೊಯ್ಯೂರು, ಐವರ್ನಾಡು ಮತ್ತು ನಾಲ್ಯಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ರಾಜು ಕೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ರಾಜೇಶ್ವರಿ ಮತ್ತಿತ್ತರರು ಉಪಸ್ಥಿತರಿದ್ದರು.


Be the first to comment on "ಸರಕಾರಿ ಪದವಿಪೂರ್ವ ಕಾಲೇಜುಗಳ ಸಾಧಕರ ಶ್ಲಾಘಿಸಿದ ಜಿಲ್ಲಾಧಿಕಾರಿ"