
ಶಾಲೆ ಮುಗಿಯಿತು, ಬೇಸಗೆ ರಜೆ ಸಿಕ್ಕಾಯಿತು. ಬಂಟ್ವಾಳ ತಾಲೂಕಿನ 34 ಶಾಲೆಗಳ ಮಕ್ಕಳಿಗೆ ಪಾದರಕ್ಷೆಗಳು ಇನ್ನೂ ದೊರಕಿಲ್ಲ. ಇದಕ್ಕೆ ಪೂರ್ತಿಯಾಗಿ ಅನುದಾನ ಬಾರದೇ ಇರುವುದೇ ಕಾರಣ.
ಶೇಕಡಾ 40 ಅಥವಾ ಶೇಕಡಾ 20ರಷ್ಟು ಮಾತ್ರ ಹಣ ಬಂದಿರುವುದರಿಂದ ಪೂರ್ಣ ಪ್ರಮಾಣದ ಖರೀದಿ ಸಾಧ್ಯವಾಗುತ್ತಿಲ್ಲ. ಶೀಘ್ರ ಅನುದಾನ ಬಿಡುಗಡೆಗೆ ಒತ್ತಾಯಿಸಲಾಗುತ್ತಿದ್ದರೂ ಇನ್ನೂ ಬಂದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕೊಂದರಲ್ಲೇ, 194 ಪ್ರಾಥಮಿಕ, 39 ಸರಕಾರಿ ಹೈಸ್ಕೂಲ್ ಗಳಿವೆ. ಇವುಗಳಲ್ಲಿ 34 ಶಾಲೆಗಳ ಮಕ್ಕಳಿಗೆ ಪಾದರಕ್ಷೆ ಬಂದಿಲ್ಲ, ಕಾರಣ ಪೂರ್ಣ ಪ್ರಮಾಣದ ಹಣ ಬಂದಿಲ್ಲ. ಇದೇ ರೀತಿ ರಾಜ್ಯದ ಹಲವೆಡೆ ಸಮಸ್ಯೆಗಳು ತಲೆದೋರಿವೆ. ಆಗಸ್ಟ್ ನಲ್ಲಿ ಕೊಡಬೇಕಾದ ಹಣವನ್ನು ನವೆಂಬರ್ ನಲ್ಲಿ ಪಾವತಿಸಲಾಗಿತ್ತು. ಆದರೆ ಅಲ್ಲೂ ಪೂರ್ಣಪ್ರಮಾಣದ ಹಣ ಪಾವತಿಯಾಗದ ಕಾರಣ ವಿತರಕರೂ ತೊಂದರೆ ಅನುಭವಿಸುವಂತಾಯಿತು. ಶಾಲೆಗಳ ಅಕೌಂಟ್ ಗೆ ಶೇ.100ರಷ್ಟು ಹಣ ಬಾರದೇ ಇರುವ ಕಾರಣ ಚಪ್ಪಲಿ ವಿತರಿಸಲು ಡೀಲರ್ ಗಳು ಹಿಂದೇಟು ಹಾಕಿದರು.
1-5ನೇ ತರಗತಿಯ ವಿದ್ಯಾರ್ಥಿಗಳಿಗೆ 265 ರೂ., 6-8ನೇ ತರಗತಿಗೆ 295 ರೂ. ಮತ್ತು 9-10ನೇ ತರಗತಿಗೆ 325 ರೂ. ಹಣ ನಿಗದಿಯಾಗಿತ್ತು. ಮಾರ್ಚ್ ಅಂತ್ಯಗೊಂಡರೂ ಪೂರ್ತಿ ಹಣ ಅಕೌಂಟ್ ಗೆ ಬಿದ್ದಿಲ್ಲ.
ಶೂ, ಸಾಕ್ಸ್‌ಅಥವಾ ಪಾದರಕ್ಷೆ ಖರೀದಿಗೆಂದು ಶಿಕ್ಷಣ ಇಲಾಖೆ ಕೆಲ ಶಾಲೆಗಳಿಗೆ ಶೇ. 40ರಷ್ಟು, ಕೆಲ ಶಾಲೆಗಳಿಗೆ ಶೇ. 20ರಷ್ಟು ಹಣವನ್ನು ಆನ್‌ಲೈನ್‌ಮೂಲಕ ಎಸ್‌ಡಿಎಮ್‌ಸಿ ಖಾತೆಗೆ ಜಮಾ ಮಾಡಲಾಗಿದೆ. ಬಂದ ಹಣದಲ್ಲಿ ಕೆಲವರಿಗಷ್ಟೇ ಕೊಡಿಸಿದರೆ ತಾರತಮ್ಯ ಮಾಡಿದಂತಾಗುತ್ತದೆ. ಪೂರ್ಣ ಪ್ರಮಾಣ ಅನುದಾನ ಸಿಕ್ಕರೆ ಮಾತ್ರ ಶೂ, ಸಾಕ್ಸ್‌ಖರೀದಿಸಲು ಸಾಧ್ಯವಿದೆ. ಹೀಗಾಗಿ ಸರಕಾರ ಮಂಜೂರು ಮಾಡಿದ ಅನುದಾನ ಬ್ಯಾಂಕ್‌ನಲ್ಲೇ ಇರುವಂತಾಗಿದೆ. ಪೂರ್ಣ ಹಣ ಕೊಡದೆ ವಿತರಕರೂ ಚಪ್ಪಲಿಯನ್ನು ಒದಗಿಸಲು ಹಿಂದೇಟು ಹಾಕುತ್ತಾರೆ.
ಆಗಷ್ಟ್ ಮಧ್ಯಭಾಗದಲ್ಲೇ ಹಣಕಾಸಿನ ನೆರವು ಬರಬೇಕಿತ್ತು. ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಲೆಕ್ಕಶೀರ್ಷಿಕೆಯಲ್ಲಿ ಮೂರು ವಿಭಾಗಗಳಲ್ಲಿ ನೇರವಾಗಿ ಆನ್ ಲೈನ್ ಮೂಲಕ ಎಚ್.ಎಂ ಮತ್ತು ಎಸ್.ಡಿ.ಎಂ.ಸಿ. ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಎಸ್.ಸಿ, ಎಸ್.ಟಿ. ಮತ್ತು ಸಾಮಾನ್ಯ ವಿಭಾಗದ ಮಕ್ಕಳಿಗೆ ಪ್ರತ್ಯೇಕವಾಗಿ ಹಣವನ್ನು ಜಮಾ ಮಾಡಲಾಗುತ್ತದೆ. ಇಲ್ಲೇ ಸಮಸ್ಯೆ ಉದ್ಭವವಾಗಿದೆ. ಕೆಲವು ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಹಣ ಬಂದಿದ್ದರೆ, ಕೆಲವು ಕಡೆ ಸಾಮಾನ್ಯ, ಕೆಲವೆಡೆ ಎಸ್.ಸಿ, ಎಸ್.ಟಿ. ಖಾತೆಗಳಿಗೆ ಮಾತ್ರ ಹಣ ಬಿದ್ದಿದೆ. ಪೂರ್ಣ ಹಣ ಬಾರದೆ ವಿತರಕರಲ್ಲಿ ಚಪ್ಪಲಿ ಖರೀದಿಸಲು ಕೋರಿದರೆ, ಅವರಿಗೂ ಹಣ ಬರುವ ಧೈರ್ಯ ಇರದ ಕಾರಣ ಸಮಸ್ಯೆಯಾಗುತ್ತದೆ. ಹೀಗಾಗಿ ಬಂದ ಹಣ ಅಕೌಂಟ್ ನಲ್ಲೇ ಉಳಿಯಿತು. ಪೂರ್ಣ ಹಣ ಬಾರದೆ ವಿತರಣೆಗೂ ತೊಡಕು. ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶಾಲಾ ಮಕ್ಕಳು ಕಳೆದ ವರ್ಷ ಕೊಟ್ಟ ಚಪ್ಪಲನ್ನೇ ಹಾಕಿಕೊಂಡು ಇಡೀ ವರ್ಷ ಬರಬೇಕಾಯಿತು.


Be the first to comment on "ಬಂಟ್ವಾಳ ತಾಲೂಕಿನ 34 ಶಾಲೆಗಳ ಮಕ್ಕಳಿಗೆ ಬಾರದ ಪಾದರಕ್ಷೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ಬಾರದ ಅನುದಾನ"