ಬಂಟ್ವಾಳ ತಾಲೂಕು ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್ ವರೆಗೆ ಇರುವ ಲೋಕೋಪಯೋಗಿ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ಡಾಂಬರು ಹಾಕಲು ಸಚಿವರಿಗೆ ಮನವಿಯನ್ನು ಸ್ಥಳೀಯ ಪುರಸಭಾ ಸದಸ್ಯ ಅಬುಬಕರ್ ಸಿದ್ದೀಕ್ ಮಾಡಿದ್ದಾರೆ.

ಈ ಕುರಿತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿರುವ ಅವರು, ರಸ್ತೆ ಸುರತ್ಕಲ್ ಕಬಕ ರಾಜ್ಯ ಹೆದ್ದಾರಿಯಾಗಿದ್ದು, ಲೋಕೋಪಯೋಗಿ ಇಲಾಖೆಗೆ ಸೇರಿದೆ. ಪಾಣೆಮಂಗಳೂರು ಪೇಟೆ ಭಾಗದಲ್ಲಿ ಸುಮಾರು 800 ಮೀಟರ್ ಉದ್ದ ರಸ್ತೆ ಡಾಂಬರು ಮೇಲ್ಮೈ ಸಂಪೂರ್ಣ ಕಿತ್ತು ಹೋಗಿದೆ. ಹಾಗು ನಡೆದಾಡಲು ಕಷ್ಟಕರವಾಗಿದೆ ಈ ಹಿನ್ನೆಲೆಯಲ್ಲಿ ದುರಸ್ತಿಪಡಿಸಲು ಅನುದಾನ ಮೀಸಲಿಡುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿದ್ದೀಕ್ ಹೇಳಿದ್ದಾರೆ.
ಈ ರಸ್ತೆ ಹದಗೆಟ್ಟು ತಿಂಗಳುಗಳು ಕಳೆದಿದ್ದು, ಕಳೆದ ಜನವರಿಯಲ್ಲೇ ಲೋಕೋಪಯೋಗಿ ಇಲಾಖೆ ಇಂಜನಿಯರುಗಳು ಪುರಸಭೆ ಸದಸ್ಯ ಸಿದ್ದೀಕ್ ಮನವಿಯಂತೆ ಪರಿಶೀಲಿಸಿದ್ದರು. ಈ ವೇಳೆ ಪೂರ್ಣ ಡಾಮರೀಕರಣವಾಗಬೇಕು ಎಂದು ಒತ್ತಾಯಿಸಲಾಗಿತ್ತು. ಆ ಸಂದರ್ಭ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಗಳೂರಿನ ಮೇಲಧಿಕಾರಿಗೆ ಪತ್ರ ಬರೆದು, ಅನುದಾನಕ್ಕೆ ವಿನಂತಿಸಿದ್ದರು. ಇದುವರೆಗೂ ಈ ಕಾರ್ಯದಲ್ಲಿ ಪ್ರಗತಿಯಾಗದೇ ಉಳಿದಿರುವ ಹಿನ್ನೆಲೆಯಲ್ಲಿ ಕೂಡಲೇ ಅನುದಾನ ಬಿಡುಗಡೆ ಮಾಡಿ ರಸ್ತೆಯನ್ನು ಸುಸ್ಥಿತಿಗೆ ತರುವಂತೆ ಸಿದ್ದೀಕ್ ಒತ್ತಾಯಿಸಿದ್ದಾರೆ.


Be the first to comment on "ಪಾಣೆಮಂಗಳೂರು ಪೇಟೆ ರಸ್ತೆ ಪೂರ್ಣ ಅಭಿವೃದ್ಧಿ: ಸಚಿವರಿಗೆ ಮನವಿ"