Bantwal Hospital: ಹೆರಿಗೆ ಮಾಡಿಸುವುದೇ ದೊಡ್ಡ ಸವಾಲು

ಬಂಟ್ವಾಳ ತಾಲೂಕಾಸ್ಪತ್ರೆಯ ಸಮಸ್ಯೆ |   ಲ್ಯಾಬ್ ಸಹಿತ ಟೆಕ್ನಿಶಿಯನ್ನುಗಳ ಕೊರತೆ | ವಾಹನ ನಿಲುಗಡೆಗೂ ಸರಿಯಾಗಿ ಜಾಗವಿಲ್ಲ

BANTWAL HOSPITAL

ಹರೀಶ ಮಾಂಬಾಡಿ

ಗ್ರಾಮೀಣ ಭಾಗವೇ ಜಾಸ್ತಿ ಇರುವ ಬಂಟ್ವಾಳ ತಾಲೂಕಿನಲ್ಲಿ ಖಾಸಗಿ ಆಸ್ಪತ್ರೆಗಳಷ್ಟೇ ಸರಕಾರಿ ಆಸ್ಪತ್ರೆಯೂ ಜನಪ್ರಿಯ. ಉಳಿದೆಲ್ಲಾ ವಿಚಾರಕ್ಕೆ ಮೇಲುಗೈ ಹೊಂದಿರುವ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದು ದೊಡ್ಡ ಸವಾಲು. ಹಳ್ಳಿಯಿಂದ ಬಂದವರು ಗರ್ಭಿಣಿಯರನ್ನು ಇಲ್ಲಿಗೆ ಸೇರಿಸಲು ಮನಸ್ಸಾಗದೆ, ಬೇರೆ ಖಾಸಗಿ ಆಸ್ಪತ್ರೆಗಳನ್ನು ಹುಡುಕಿ, ಹಣ ತೆರುವ ಪರಿಸ್ಥಿತಿ. ಮೂರು ವರ್ಷಗಳಿಂದ ಬಂಟ್ವಾಳ ಸರಕಾರಿ ಆಸ್ಪತ್ರೆ ಈ ಒಂದೇ ಕಾರಣಕ್ಕೆ ಸುದ್ದಿಯಲ್ಲಿದೆ. ಹೆರಿಗೆಯ ಪ್ರಮಾಣ ಇಲ್ಲಿ ಇಳಿಮುಖವಾಗುತ್ತಿದೆ.

ಹಾಗೆ ನೋಡಿದರೆ, ಬಂಟ್ವಾಳ ಪೇಟೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಬರಲು ಅನುಕೂಲಗಳು ಹಲವಿದೆ. ಬಸ್ಸುಗಳಿವೆ, ಪೇಟೆಯ ರಸ್ತೆ ಪಕ್ಕದಲ್ಲೇ ಸರಕಾರಿ ಆಸ್ಪತ್ರೆ ಇದೆ. ಇಲ್ಲಿ ಇಕ್ಕಟ್ಟಾದ ಮಾರ್ಗದಲ್ಲಿ ಪ್ರವೇಶಿಸಿದರೆ, ಆಸ್ಪತ್ರೆ ದೊರಕುತ್ತದೆ. ಮೇಲ್ನೋಟಕ್ಕೆ ವೈದ್ಯರ ಸಂಖ್ಯೆ ಎಲ್ಲಾ ವಿಭಾಗಗಳಲ್ಲಿ ಭರ್ತಿಯಾಗಿದ್ದರೂ ಹೆರಿಗೆ ಮತ್ತು ಅರಿವಳಿಕೆ ವಿಚಾರದಲ್ಲಿ ಹಾಗೆ ಹೇಳುವಂತಿಲ್ಲ. ಕಳೆದ ಮೂರು ವರ್ಷಗಳಿಂದ ಇಲ್ಲಿ ಗೈನಕಾಲಜಿಸ್ಟ್ ಬಂದಿಲ್ಲ. ಹಾಗೆಯೇ ಯಾವುದೇ ಶಸ್ತ್ರಚಿಕಿತ್ಸೆ ಸಂದರ್ಭ ಅರಿವಳಿಕೆ ತಜ್ಞರು ಖಾಯಂ ಆಗಿ ಇಲ್ಲಿರುವುದಿಲ್ಲ.

ಹೆರಿಗೆ ಪ್ರಮಾಣ ಇಳಿಮುಖ:

ಎರಡುವರೆ ವರ್ಷಗಳ ಹಿಂದೆ ತಿಂಗಳಿಗೆ 50ರಷ್ಟು ಹೆರಿಗೆ ಪ್ರಕ್ರಿಯೆಗಳು ಉಚಿತವಾಗಿ ನಡೆಯುತ್ತಿದ್ದ ಬಂಟ್ವಾಳದ ತಾಲೂಕು ಮಟ್ಟದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲೀಗ ಏಳೆಂಟು ಮಂದಿಯಷ್ಟೇ ಶಿಶುಗಳ ಜನನವಾಗುತ್ತಿದೆ. ಜನನ ಪ್ರಮಾಣ ಇಳಿಕೆಯಾಗುವುದು ಇದಕ್ಕೆ ಕಾರಣವಲ್ಲ, ಸರಕಾರಿ ಆಸ್ಪತ್ರೆಗೆಂದು ಬರುವ ಬಡವರು, ಬೇರೆ ಆಸ್ಪತ್ರೆ ನೋಡುತ್ತಿದ್ದಾರೆ.

ತಾಲೂಕಿನ ಗ್ರಾಮೀಣ ಭಾಗದ ಮಂದಿ ಹೆರಿಗೆ ಹಾಗೂ ಸ್ತ್ರೀಯರ ಇನ್ನಿತರ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆ ಅಥವಾ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಅಂದಾಜು ೬೦ರಷ್ಟು ಹೆರಿಗೆ ಪ್ರಕರಣಗಳು ಆಗುತ್ತಿದ್ದುದು, ಈಗ 10 ಅಥವಾ 9ಕ್ಕೆ ಇಳಿದಿದೆ. 2022ರ ಆಗಸ್ಟ್ ವರೆಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಅವರು ರಾಜೀನಾಮೆ ನೀಡಿದ್ದರು. ಹೀಗಾಗಿ ಸೆಪ್ಟೆಂಬರ್ ಪ್ರಾರಂಭದಿಂದ (2022) ಇಲ್ಲಿ ವೈದ್ಯರ ಕೊರತೆ ಉಂಟಾಯಿತು. ಆದರೂ ಮಹಿಳೆಯ ಸಂಬಂಧಿಕರ ಒಪ್ಪಿಗೆ ಪಡೆದು, ಇಲ್ಲಿನ ವೈದ್ಯರು ಅನುಭವದ ಆಧಾರದಲ್ಲಿ ಆಸ್ಪತ್ರೆಗೆ ಆಗಮಿಸುವ ವೈದ್ಯಕೀಯ ಕಾಲೇಜುಗಳ ಸ್ತ್ರೀರೋಗ ಪಿಜಿ ವೈದ್ಯರ ನೆರವಿನಿಂದ ಯಶಸ್ವಿಯಾಗಿ ಹೆರಿಗೆ ನಡೆಸಲಾಗುತ್ತಿದೆ. ಆದರೂ ಪೂರ್ಣ ಪ್ರಮಾಣದ ಸ್ತ್ರೀರೋಗ ತಜ್ಞರು ಇಲ್ಲಿಗೆ ಬೇಕು.

ಸುಸಜ್ಜಿತ ಐಸಿಯು, ಬೆಡ್ ಗಳಿವೆ:

ನೂರು ಬೆಡ್ ಗಳ ಆಸ್ಪತ್ರೆ ಎಂಬ ಹೆಗ್ಗಳಿಕೆಯೊಂದಿಗೆ ಆರು ವರ್ಷಗಳ ಹಿಂದೆ ಪುನರ್ನವೀಕರಣಗೊಂಡ ಬಂಟ್ವಾಳ ಸರಕಾರಿ ಆಸ್ಪತ್ರೆ ಸುಸಜ್ಜಿತವಾಗಿದೆ. ಕಳೆದೆರಡು ವರ್ಷಗಳಲ್ಲಿ ಸುಸಜ್ಜಿತ ಹವಾನಿಯಂತ್ರಿತ ಐಸಿಯು ಘಟಕವಿದೆ. ಕೊರೊನಾ ಸಂದರ್ಭದ ಘಟನೆಗಳು ಮರುಕಳಿಸದೇ ಇರಲಿ ಎಂಬ ಕಾರಣದಿಂದ ಆಮ್ಲಜನಕ ಘಟಕ ನಿರ್ಮಾಣವೂ ಆಗಿತ್ತು.

ಪೇಶಂಟ್ ಗಳು ಜಾಸ್ತಿ, ಟೆಕ್ನಿಶಿಯನ್ ಗಳ ಕೊರತೆ

ಮಳೆಗಾಲದ ಸೀಸನ್ ಬಂದಾಗ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಡೆಂಗ್ಯೂ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಬಂದಾಗ ರೋಗಪತ್ತೆಗೆ ರಕ್ತಪರೀಕ್ಷೆಯೇ ಮೊದಲಾದ ಕೆಲಸ ಕಾರ್ಯಗಳು ನಡೆಯಬೇಕಾಗುತ್ತದೆ. ಇಂಥದ್ದನ್ನೆಲ್ಲ ನಿರ್ವಹಿಸಲು ಸಾಕಷ್ಟು ಲ್ಯಾಬ್ ಟೆಕ್ನಿಶಿಯನ್ ಗಳು ಅಗತ್ಯ. ಈಗ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಟೆಕ್ನಿಶಿಯನ್ ಗಳ ಸಂಖ್ಯೆ ಕಡಿಮೆ. ಇಬ್ಬರ ಕೆಲಸ ಒಬ್ಬರು ಮಾಡುವ ಪರಿಸ್ಥಿತಿ ಇದೆ.

ಪಾರ್ಕಿಂಗ್ ಸಮಸ್ಯೆ

ಇಕ್ಕಟ್ಟಾದ ಜಾಗದಲ್ಲೇ ಬಂಟ್ವಾಳ ಸರಕಾರಿ ಆಸ್ಪತ್ರೆ ಇರುವ ಕಾರಣ ಸಹಜವಾಗಿಯೇ ಪಾರ್ಕಿಂಗ್ ಸಮಸ್ಯೆಯೂ ಇದೆ. ಆದರೆ ಒಮ್ಮೊಮ್ಮೆ ಇದು ವಿಪರೀತ ಪರಿಸ್ಥಿತಿಗೆ ಹೋಗುವುದುಂಟು. ಆಂಬುಲೆನ್ಸ್ ಓಡಾಡಲೂ ಕಷ್ಟಸಾಧ್ಯವಾಗುವಂತೆ ಸಣ್ಣ ರಸ್ತೆಯ ಎರಡೂ ಕಡೆ ವಾಹನಗಳನ್ನು ನಿಲ್ಲಿಸುವ ಪರಿಸ್ಥಿತಿಯೂ ಇರುತ್ತದೆ. ಆಸ್ಪತ್ರೆ ಗೇಟ್ ಮುಂಭಾಗವೂ ವಾಹನಗಳು ರಸ್ತೆಯಲ್ಲೇ ನಿಂತು ಮಾತಿನ ಚಕಮಕಿಗಳು ನಡೆಯುತ್ತವೆ.

ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಮೂಲಕ ಹಲವು ಬಾರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಎಚ್ ಓ ಕಚೇರಿಯಿಂದಲೂ ಪ್ರಸ್ತಾವನೆ ಕಳಿಸಿದ್ದಷ್ಟೇ ಅಲ್ಲದೆ, ವೈದ್ಯರನ್ನು ಆಹ್ವಾನಿಸಿ ಪ್ರಕಟಣೆಯನ್ನೂ ನೀಡಲಾಗಿದೆ. ಈ ಮಾಸಾಂತ್ಯದಲ್ಲಿ ನೇಮಕವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "Bantwal Hospital: ಹೆರಿಗೆ ಮಾಡಿಸುವುದೇ ದೊಡ್ಡ ಸವಾಲು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*