ಆರ್ಥಿಕ ಸಮಸ್ಯೆಯಿಂದ ಬಳಲಿದ್ದ, ಮನೆಯಿಲ್ಲದ ವ್ಯಕ್ತಿಗೆ ಸಮಾಜ ಸ್ಪಂದಿಸಿ, 12 ಲಕ್ಷ ರೂ.ವೆಚ್ಚದ ಮನೆಯನ್ನೇ ಹಸ್ತಾಂತರ ಕಾರ್ಯಕ್ರಮ ಶನಿವಾರ ನಡೆಯಿತು. ಸಂತರೀರ್ವರು ಮತ್ತು ಸಮಾಜದ ಸಮಸ್ತ ಬಂಧು ಬಾಂಧವರು ಬ್ರಹ್ಮಣ್ಯಮ್ ಮೋಂತಿಮಾರು ಎಂಬ ಹೆಸರಿನ ಮನೆಯ ಪ್ರವೇಶೋತ್ಸವಕ್ಕೆ ಸಾಕ್ಷಿಯಾದರು.
ಮಂಚಿ ಗ್ರಾಮದ ಮೋಂತಿಮಾರು ಸದಾಶಿವ ಭಟ್ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ, ಶ್ರೀರಾಮಚಂದ್ರಾಪುರ ಮಠದಲ್ಲಿ ಸೇವೆ ಸಲ್ಲಿಸಿ, ಬಳಿಕ ಕೊಂಡೆವೂರು ನಿತ್ಯಾನಂದ ಆಶ್ರಮದಲ್ಲಿ ಸೇವೆ ಮುಂದುವರಿಸಿದ್ದರು. ಸ್ವಂತ ಮನೆಯಿರಲಿಲ್ಲ. ಆರೋಗ್ಯವೂ ಹದಗೆಟ್ಟಿತ್ತು. ಉದ್ಯೋಗವೂ ಇರಲಿಲ್ಲ. ಮೋಂತಿಮಾರು ಕುಟುಂಬದ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕನಾಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ ದೇವಸ್ಥಾನದ ಪಕ್ಕದಲ್ಲೇ ಮನೆ ನಿರ್ಮಿಸಬೇಕೆನ್ನುವ ಆಶಯವಿತ್ತು.
ಆಗ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಮಠ ಮತ್ತು ಶಿಷ್ಯಭಕ್ತರು ಸೇರಿ ಮೋಂತಿಮಾರು ಸದಾಶಿವ ಭಟ್ ಅವರಿಗೆ ಮನೆ ನಿರ್ಮಿಸಿಕೊಡಲು ಮಾರ್ಗದರ್ಶನ ಮಾಡಿದರು. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಆದೇಶದಂತೆ ಮಂಗಳೂರು ಹವ್ಯಕ ಮಂಡಲ ಮತ್ತು ಮಂಡಲ ವ್ಯಾಪ್ತಿಯ 12 ವಲಯಗಳಲ್ಲಿ ಸಭೆಗಳಲ್ಲಿ ಮತ್ತು ವಾಟ್ಸಾಪ್ ಸಂದೇಶಗಳ ಮೂಲಕ ಧನಸಹಾಯ ಮತ್ತು ವಸ್ತು ರೂಪದ ಸಹಾಯ ನೀಡಲು ವಿನಂತಿಸಲಾಯಿತು. ಈ ಸಂದರ್ಭದಲ್ಲಿ ವ್ಯಾಪಕ ಸ್ಪಂದನೆ ದೊರಕಿದ್ದು ಸುಮಾರು 5 ಲಕ್ಷ ರೂ.ಗಳ ಸಹಕಾರ ಲಭ್ಯವಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಸಭಾವು ಜಿಲ್ಲೆಯಲ್ಲಿ ಒಬ್ಬ ಅರ್ಹ ವ್ಯಕ್ತಿಗೆ ಮನೆ ನಿರ್ಮಿಸಿಕೊಡುವುದೆಂದು ಘೋಷಣೆ ಮಾಡಿತ್ತು. ಉದ್ಯಮಿ ರಘುನಾಥ ಸೋಮಯಾಜಿ ಅವರು ಎರಡೂವರೆ ಲಕ್ಷ ಮತ್ತು ಮಂಗಳೂರಿನಲ್ಲಿ ಈ ಹಿಂದೆ ನಡೆದ ಗಾಯತ್ರಿ ಯಜ್ಞದಲ್ಲಿ ಉಳಿದ ಮೊತ್ತ ಎರಡೂವರೆ ಲಕ್ಷ ರೂ.ಗಳನ್ನು ಸೇರಿಸಿ, ಒಟ್ಟು 5 ಲಕ್ಷ ರೂ.ಗಳನ್ನು ಮೋಂತಿಮಾರು ಸದಾಶಿವ ಭಟ್ ಅವರಿಗೆ ನೀಡಲು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ನಿರ್ಧರಿಸಿತು.
ಆರೆಸ್ಸೆಸ್ ಮತ್ತಿತರ ಸಂಘಟನೆಗಳ ಸಹಕಾರ, ಇವರೆಲ್ಲರ ಉದಾರ ಕೊಡುಗೆ ಮತ್ತು ಮೋಂತಿಮಾರು ಸದಾಶಿವ ಭಟ್ ಅವರ ಬಂಧುಗಳು, ಸ್ನೇಹಿತರು, ಇದೀಗ 12 ಲಕ್ಷ ರೂ. ವೆಚ್ಚದ ಮನೆ ನಿರ್ಮಾಣವಾಗಿದೆ. ಶನಿವಾರ ಸರಳ ಮತ್ತು ಭಾವನಾತ್ಮಕ ಕಾರ್ಯಕ್ರಮದ ಮೂಲಕ ಮನೆಯನ್ನು ಹಸ್ತಾಂತರಿಸಲಾಯಿತು.
ಸಮಾಜದ ಸ್ಪಂದನ ಶ್ಲಾಘನೀಯ ಚಿತ್ತಾಪುರ ಶ್ರೀ
ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಸದಾಶಿವ ಭಟ್ ಅವರು ಗುರುಸೇವೆ, ದೇವರಸೇವೆ, ಗೋಸೇವೆ, ಸಮಾಜಸೇವೆ ಮಾಡಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಸೇವೆ ಸಲ್ಲಿಸಿದ್ದರ ಪರಿಣಾಮ ಇಂದು ಇಡೀ ಸಮಾಜ ಸ್ಪಂದಿಸಿದೆ. ಅನಾನುಕೂಲತೆ ಇರುವವರಿಗೆ ಸ್ಪಂದಿಸುವ ಮತ್ತು ಸಹಕರಿಸುವ ಮನೋಭಾವ ಎಲ್ಲರಲ್ಲೂ ಬರಬೇಕು. ಆ ಸೂರ್ತಿ ಇತರರಿಗೆ ಅನುಕರಣೀಯವಾಗಲೆಂದು ಹೇಳಿದರು.
ಸೇವೆ ಮಾಡುವವರಿಗೆ ಸೋಲಿಲ್ಲ: ಕೊಂಡೆವೂರುಶ್ರೀ
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಜನ ಸೇವೆ, ಗುರುಸೇವೆ, ಗೋಸೇವೆ, ದೇವರ ಸೇವೆ ಮಾಡಿದವರಿಗೆ ಯಾವತ್ತೂ ಸೋಲಿಲ್ಲ. ಎಲ್ಲರ ಬೆಂಬಲ ದೊರಕುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು. ಇದೇ ಸಂದರ್ಭ ಉದ್ಯಮಿ ರಘುನಾಥ ಸೋಮಯಾಜಿ, ಮೋಂತಿಮಾರು ಸದಾಶಿವ ಭಟ್, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ ಅವರನ್ನು ಸಮ್ಮಾನಿಸಲಾಯಿತು.
ಗಣ್ಯರ ಉಪಸ್ಥಿತಿ
ಶ್ರೀರಾಮಚಂದ್ರಾಪುರ ಮಠದ ಪಿಆರ್‌ಒ ಹರಿಪ್ರಸಾದ್ ಪೆರಿಯಾಪು, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ್ ಭಟ್ ಮಿತ್ತೂರು, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಉದಯಶಂಕರ್ ನೀರ್ಪಾಜೆ, ಪ್ರಧಾನ ಕಾರ್ಯದರ್ಶಿ ರಮೇಶ್ ಭಟ್ ಸರವು, ಸಹಾಯ ಪ್ರಧಾನ ಭಾಸ್ಕರ ಹೊಸಮನೆ, ಯುವಪ್ರಧಾನ ಕೃಷ್ಣಪ್ರಮೋದ ಶರ್ಮ ಮುಡಿಪು, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ರಾಜ್ಯ ಕಾರ್ಯದರ್ಶಿ ಮಹೇಶ್ ಕಜೆ, ಕಾರ್ಯಕಾರಿಣಿ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ, ಜಿಲ್ಲಾ ಪ್ರತಿನಿಧಿ ಶ್ರೀಧರ ಹೊಳ್ಳ, ಆರ್.ಡಿ.ಶಾಸ್ತಿç, ಉದಯ ಕುಮಾರ್, ಹವ್ಯಕ ಮಹಾಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಈಶ್ವರಪ್ರಸಾದ್, ಮಂಗಳೂರು ಮಂಡಲ ಪ್ರಧಾನ ಗುರಿಕ್ಕಾರರಾದ ಉದಯ ಕುಮಾರ್ ಭಟ್ ಖಂಡಿಗ, ಅಖಿಲಭಾರತ ಸಂಯೋಜಕ ರಘುನಂದನ್ ಕೆ.ಎನ್., ವಿದ್ಯಾ ಭಾರತಿಯ ಶಿಕ್ಷಣ ಭಾಗದ ಪ್ರಮುಖ್ ಜಿ.ಆರ್.ಜಗದೀಶ್, ಸೇವಾ ಪ್ರಮುಖ್ ಸುಬ್ರಾಯ ನಂದೋಡಿ, ಪ್ರಕಾಶ್ ಇಳಂತಿಲ, ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್., ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದ ರಾಕೋಡಿ ಈಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಸಮಾಜಕ್ಕಾಗಿ ದುಡಿದವರಿಗೆ ಸ್ಪಂದಿಸಿದ ಸಮಾಜ: 12 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ"