ಪುತ್ತೂರಿನಲ್ಲಿ ಏಳನೇ ವರುಷದ ಹಲಸು-ಹಣ್ಣು ಮೇಳ ಜೂನ್ 6ರಿಂದ 8ರ ತನಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಪುತ್ತೂರು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಹೇಳಿದರು. ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವತೇಜ ಟ್ರಸ್ಟ್ ಪುತ್ತೂರು ಜೊತೆಗೆ ಅನ್ಯಾನ್ಯ ಸಂಸ್ಥೆಗಳ ಸಹಯೋಗ ಹೊಂದಿದೆ. ಈ ಬಾರಿ ಮೇಳದಲ್ಲಿ ಸುಮಾರು ಎಪ್ಪತ್ತು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಎಲ್ಲಾ ಮಳಿಗೆಗಳು ಪೂರ್ತಿಯಾಗಿ ಬುಕ್ ಆಗಿರುವುದು ಸಂತೋಷದ ವಿಚಾರ ಎಂದರು.
ಬೆಳಿಗ್ಗೆ 10ಕ್ಕೆ ಮಳಿಗೆಗಳನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ಕೃಷಿಕ ಮಹದೇವ ಶಾಸ್ತ್ರಿ ಮಣಿಲಾ ಉಪಸ್ಥಿತರಿರುವರು. ಸಂಜೆ 4ಕ್ಕೆ ಮೇಳ ಆರಂಭಗೊಳ್ಳಲಿದ್ದು, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕಾರ್ ಕೊಡ್ಗಿ ನೇತೃತ್ವ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಎಇ ಚಾಲನೆ ನೀಡುವರು. ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶ್ಯಾಮ್ ಜ್ಯುವೆಲ್ಸ್ ಗ್ರೂಪ್’ನ ಕೇಶವ ಪ್ರಸಾದ್ ಮುಳಿಯ, ನಗರಸಭೆ ಆಯುಕ್ತ ಮಧು ಎಸ್. ಮನೋಹರ್ ಉಪಸ್ಥಿತರಿರುವರು.
ಕವಿಗೋಷ್ಠಿ: ಜೂನ್ 6ರಂದು ಸಂಜೆ ಹಲಸಿನ ಕುರಿತಾದ ಕವಿಗೋಷ್ಠಿ ಈ ಬಾರಿಯ ಮೇಳದ ವಿಶೇಷತೆ. ಹಲಸಿನ ಬಳಕೆ, ಬೆಳೆ. ಅದು ಬದುಕಿಗಂಟಿದ ನೆನಪುಗಳನ್ನು ಕಟ್ಟಿಕೊಡುವ ಕವನಗಳ ಪ್ರಸ್ತುತಿ ಗೋಷ್ಠಿಯ ಹೈಲೈಟ್. ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸುವರು. ಉಮಾಶಂಕರಿ ಎ.ಪಿ. ಮರಿಕೆ ಸಂಯೋಜನೆ ಮಾಡಲಿದ್ದಾರೆ. ಜೂನ್ 7ರಂದು ಬೆಳಿಗ್ಗೆ 11ಕ್ಕೆ ಹಣ್ಣುಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಪನಸೋಪಾಖ್ಯಾನ ತಾಳಮದ್ದಳೆ :ಇನ್ನೊಂದು ವಿಶೇಷ ಕಾರ್ಯಕ್ರಮ, ಜೂನ್ 7ರಂದು ಸಂಜೆ ಹಲಸಿನ ಅರಿವಿನ ಹರಿವಿನ ಸುತ್ತ ಹೆಣೆದ ಯಕ್ಷಗಾನ ತಾಳಮದ್ದಳೆ ‘ಪನಸೋಪಾಖ್ಯಾನ’ ಪ್ರಸ್ತುತಿ. ಮೇಳಕ್ಕೆಂದೇ ಸಿದ್ಧಪಡಿಸಲಾದ ಹೊಚ್ಚಹೊಸ ಪ್ರಸಂಗ ಜಿಲ್ಲೆಯ ಪ್ರಸಿದ್ದ ಕಲಾವಿದರು ಭಾಗವಹಿಸಲಿದ್ದಾರೆ. ಸುಮಾರು ಎರಡೂವರೆ ಮೂರು ಗಂಟೆಗಳ ಕಾಲ ತಾಳಮದ್ದಳೆ ನಡೆಯಲಿದೆ. ಯಕ್ಷಲೋದಲ್ಲಿ ಪ್ರಥಮ ಕಾರ್ಯಕ್ರಮ.
ಹಲಸಿನ ಊಟ :ಮೇಳದ ಕೊನೆಯ ದಿನದಂದು ಹಲಸು ಮತ್ತು ಮಾವಿನ ಊಟ. ಸುಮಾರು ಇಪ್ಪತ್ತೈದು ಬಗೆಯ ವೈವಿಧ್ಯ ಖಾದ್ಯಗಳು. ಮೊದಲೇ ಟಿಕೇಟ್ ಕಾದಿರಿಸಿದ 250 ಮಂದಿಗೆ ಭೋಜನ ಸವಿಯುವ ಅವಕಾಶ.
ವೈವಿಧ್ಯ ಹಣ್ಣುಗಳು:ಹುಣಸೂರು, ಸಖರಾಯಪಟ್ಟ, ದೊಡ್ಡಬಳ್ಳಾಪುರದ ರುಚಿರುಚಿಯಾದ ಹಲಸಿನ ಹಣ್ಣುಗಳು ರುಚಿಪ್ರಿಯರ ನಾಲಗೆ ಗೆಲ್ಲಲಿದೆ. ಅಂತೆಯೇ ಬ್ರಹ್ಮಾವರ, ಚನ್ನಪಟ್ಟಣದಿಂದ ಉತ್ಕೃಷ್ಟ ಮಾವಿನ ಹಣ್ಣುಗಳು ಮೇಳಕ್ಕೆ ಬರಲಿದೆ.ಹಲಸು ಹಾಗೂ ಮಾವಿನ ಹಣ್ಣುಗಳನ್ನು ಕೃಷಿಕರೇ ಸ್ವತಃ ಬೆಳೆದು. ಮಾರುತ್ತಿರುವುದು ಮೇಳದ ಹೈಲೈಟ್. ಹಲಸಿನ ಉಂಡ್ಲಕಾಳು , ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್
ಮೌಲ್ಯವರ್ಧಿತ ಉತ್ಪನ್ನಗಳು :
ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶ, ಹಲಸಿನ ಹಣ್ಣಿನ ಮಳಿಗೆಯಿದೆ. ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆಗಳು ಲಭ್ಯ. ಈ ಋತುವಿನಲ್ಲಿ ಸಿಗುವ ರಂಬುಟಾನ್, ಡ್ರಾಗನ್, ಮ್ಯಾಂಗೋಸ್ಟಿನ್, ಬೆಣ್ಣೆಹಣ್ಣು ಮೊದಲಾದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ವಿಶೇಷ ಆಹಾರ ಮಳಿಗೆ, ಆಗ್ರಿ ಬ್ಯುಸಿನೆಸ್ ಮಳಿಗೆಗಳು, ಹಲಸು ಕೃಷಿಕರ ಅನುಭವದ ಮಾತುಗಳು, ಹೊಸ ಹೊಸ ತಳಿಗಳ ಪರಿಚಯ. ಹೀಗೆ ಹಲಸು ಮೇಳದಲ್ಲಿ ವಿವಿಧ ವೈವಿಧ್ಯಗಳು, ವಿದ್ಯಾರ್ಥಿಗಳಿಗೆ ಹಲಸಿನ ಅರಿವನ್ನು ಮೂಡಿಸುವ ಉದ್ದೇಶದಿಂದ ಚಿತ್ರಬಿಡಿಸುವ, ಕವನ ರಚಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಲಸಿನ ಹಣ್ಣಿನ ಸೊಳೆಯನ್ನು ತಿನ್ನುವ ಸ್ಪರ್ಧೆಯಿದೆ.

JACKFRUIT (Pic Courtesy: Internet www.lacademie.com/)
ಮೇಳದಲ್ಲಿ ಸಂಶೋಧನಾ ಕೇಂದ್ರಗಳು ಹಾಗೂ ಕೃಷಿಕರನ್ನು ಒಂದೇ ಸೂರಿನಡಿ ತಂದು ಕೃಷಿ ಉತ್ಪನ್ನಗಳಿಗೆ ಉದ್ಯಮದ ಸ್ವರೂಪ ನೀಡುವ ಯತ್ನವು ಮೇಳದ ಉದ್ದೇಶಗಳಲ್ಲೊಂದು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ರಂಗದ ಗಣ್ಯರು, ಕೃಷಿಕರು ಆಗಮಿಸಲಿದ್ದಾರೆ. ನವತೇಜ ಟ್ರಸ್ಟಿನೊಂದಿಗೆ ಶಿಕ್ಷ ಕಾಟೇಜ್ ಇಂಡಸ್ಟ್ರೀಸ್, ಅಡಿಕೆ ಪತ್ರಿಕೆ ಪುತ್ತೂರು, ನವನೀತ್ ಫಾರ್ಮ್ ನರ್ಸರಿ, ಮರಿಗೆ ಸಾವಯವ ಮಳಿಗೆ, ನಿರ್ಮಾಣ್ ಅಸೋಸಿಯೇಟ್ಸ್… ಮೊದಲಾದ ಸಂಸ್ಥೆಗಳ ಹೆಗಲೆಣೆ. ಎಲ್ಲರಿಗೂ ಮುಕ್ತ ಪ್ರವೇಶ. ಜೂನ್ 8ರಂದು ಸಂಜೆ 4ಕ್ಕೆ ಸಮಾರೋಪ ನಡೆಯಲಿದ್ದು ಸಂಸದ ಕ್ಯಾ. ಬ್ರಿಜೇಶ್ ಚೌಟ ನೇತೃತ್ವ ವಹಿಸಲಿದ್ದಾರೆ. ಉಪ್ಪಿನಂಗಡಿ ಬಳ್ಳಿ ಆಯುರ್ ಗ್ರಾಮದ ಮುಖ್ಯವೈದ್ಯ ಡಾ. ಸುಪ್ರೀತ್ ಲೋಬೋ ಸಮಾರೋಪ ಮಾತುಗಳನ್ನಾಡಲಿದ್ದಾರೆ. ಸುದಾನ ಶಿಕ್ಷಣ ಸಂಸ್ಥೆಗಳ ರೆ. ವಿಜಯ್ ಹಾರ್ವಿನ್, ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಜೆಸಿಐ ವಲಯ 15ರ ಜೆ ಕ್ಯಾಮ್ ಚೇರ್ಮನ್ ಧೀರಜ್ ಬಿ. ಉದ್ಯಾವರ ಅತಿಥಿಗಳಾಗಿರುವರು ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್’ನ ಸುಹಾಸ್ ಮರಿಕೆ, ವೇಣುಗೋಪಾಲ್ ಎಸ್.ಜೆ., ರೋಟರಿ ಕ್ಲಬ್ ಪುತ್ತೂರು ಯುವದ ನಿಯೋಜಿತ ಅಧ್ಯಕ್ಷ ಕುಸುಮಾಧರ್, ಜೇಕಾಮ್ ಪುತ್ತೂರು ಟೇಬಲ್ 1.0 ಚೇರ್’ಮೆನ್ ಪಶುಪತಿ ಶರ್ಮಾ ಉಪಸ್ಥಿತರಿದ್ದರು.
Be the first to comment on "ಪುತ್ತೂರಿನಲ್ಲಿ ಜೂನ್ 6ರಿಂದ 8ರವರೆಗೆ ಹಲಸು ಹಣ್ಣು ಮೇಳ – ಕವಿಗೋಷ್ಠಿ, ಪನಸೋಪಾಖ್ಯಾನ ತಾಳಮದ್ದಳೆ, ನಾನಾ ತಿನಿಸುಗಳ ವೈವಿಧ್ಯ"