ಮಂಗಳೂರು: ಅಪರಾಧಗಳನ್ನು ತಡೆಗಟ್ಟಲು ಮತ್ತು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೋಮವಾರ ಮತ್ತು ಮಂಗಳವಾರ ನಗರದ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸ್ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಯವರು ವಿಶೇಷ ಜಂಟಿ ಕಾರ್ಯಾಚರಣೆ ನಡೆಸಿದ್ದರು.
ಕಾರಿನ ಗ್ಲಾಸ್ಗಳಲ್ಲಿ ಬ್ಲಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಟಿಂಟೆಡ್ ಗ್ಲಾಸ್ಗಳನ್ನು ಅಳವಡಿಸಿ ಸಂಚರಿಸುವ ವಾಹನಗಳ ಮಾಲಕರ, ಚಾಲಕರ ವಿರುದ್ದ ಒಟ್ಟು 223 ಪ್ರಕರಣವನ್ನು ದಾಖಲಿಸಿ, ರೂ. 1,11,500 ದಂಡವನ್ನು ವಿಧಿಸಲಾಗಿದೆ. ಅಲ್ಲದೇ 223 ಕಾರುಗಳಿಗೆ ಅಳವಡಿಸಿರುವ ಟಿಂಟೆಡ್ ಗ್ಲಾಸ್ ಹಾಗೂ ಬ್ಲಾಕ್ ಫಿಲ್ಮಂ ಸ್ಟಿಕರ್ಗಳನ್ನು ವಾಹನ ಚಾಲಕರಿಂದ ತೆಗೆಸಿ ಸೂಕ್ತ ಕ್ರಮ ಕೈಗೊಂಡು ಅವರುಗಳಿಗೆ ತಿಳುವಳಿಕೆಯನ್ನು ಸಹ ನೀಡಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಮಂಗಳವಾರ ಮಂಗಳೂರು ಪೊಲೀಸ್ ಆಯುಕ್ತಕರ ಕಛೇರಿಯ ಸಭಾಂಗಣದಲ್ಲಿ ಹಾಗೂ ಪೊಲೀಸ್ ಠಾಣೆಗಳಲ್ಲಿ, ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರು ಶೋ ರೂಮ್, ಅಕ್ಸೆಸರಿಸ್ ಶಾಪ್, ಗ್ಯಾರೇಟ್, ಸ್ಟಿಕರ್ ಅಂಗಡಿಗಳ ಮಾಲಕರ ಸಭೆಯನ್ನು ಆಯೋಜಿಸಿದ್ದು, ಸಭೆಯಲ್ಲಿ ಹಾಜರಿದ್ದವರಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿವರ ನೀಡಲಾಯಿತು. ಅಪರಾಧ ಎಸಗಲು ಆರೋಪಿತರು ಟಿಂಟ್ ಅಳವಡಿಸಿರುವ ವಾಹನಗಳನ್ನು ಉಪಯೋಗಿಸುವ ಸಾಧ್ಯತೆ ಇರುವುದರಿಂದ ತಮ್ಮ ಬಳಿ ಬರುವ ಗ್ರಾಹಕರ ವಾಹನಗಳ ಗಾಜುಗಳಿಗೆ ಹೆಚ್ಚುವರಿಯಾಗಿ ಟಿಂಟ್ಗಳನ್ನು ಅಳವಡಿಸದಂತೆ ಸೂಕ್ತ ಸೂಚನೆಗಳನ್ನು ಸಹ ನೀಡಲಾಗಿದೆ. ವಿಶೇಷ ಕಾರ್ಯಚಾರಣೆಯು ಮುಂದಿನ ದಿನಗಳಲ್ಲಿ ಮುಂದುವರೆಯಲಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
Be the first to comment on "ಟಿಂಟ್ ಗ್ಲಾಸ್ ಅಳವಡಿಸಿದ ಕಾರಿನವರಿಗೆ ಬಿಸಿ ಮುಟ್ಟಿಸಿದ ಮಂಗಳೂರು ಪೊಲೀಸರು"