ಬಂಟ್ವಾಳ ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಮಹಾವೀರ ಜಯಂತಿ ಆಚರಣೆ ನಡೆಯಿತು.
ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಕಾಲಕಾಲಕ್ಕೆ ಮಹಾಪುರುಷರು ಒದಗಿಬಂದಿದ್ದು, ಸಮ್ಯಕ್ ದರ್ಶನ ಬೋಧನೆ ಮೂಲಕ ಸಾಧಕರಿಗೆ ಮಾರ್ಗದರ್ಶಿಯಾಗಿ ವರ್ಧಮಾನ ಮಹಾವೀರ ಮೂಡಿಬಂದಿದ್ದಾರೆ. ನಮ್ಮ ಜೀವನದಲ್ಲಿ ಮಹಾವೀರನ ತತ್ವಾದರ್ಶ ಪಾಲನೆಯಾಗಬೇಕು ಜೈನ ಧರ್ಮದ ಕೊಡುಗೆಗಳನ್ನು ಜನರು ಗುರುತಿಸಬೇಕು ಎಂಬ ದೃಷ್ಟಿಯಿಂದ ಮಹಾವೀರ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು.
ನ್ಯಾಯವಾದಿ ಶಿವಪ್ರಸಾದ್ ಮಾತನಾಡಿ ಮಹಾವೀರರು ಪ್ರತಿಯೊಂದು ಜೀವಿಗೂ ಬದುಕಲು ಹಾಗೂ ತನ್ನನ್ನು ಉದ್ಧರಿಸುವ ಅವಕಾಶ ಇದೆ ಎಂದರು. ಅಹಿಂಸೆ ಎಂಬ ವ್ಯಾಖ್ಯಾನವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಅಗತ್ಯ. ಮನುಕುಲಕ್ಕೆ ಕೊಟ್ಟ ಕೊಡುಗೆಗಳನ್ನು ಅರಿತುಕೊಳ್ಳಬೇಕು ಎಂದರು.
ಜೈನ್ ಮಿಲನ್ ವಿಭಾಗ ಉಪಾಧ್ಯಕ್ಷ ಸುದರ್ಶನ ಜೈನ್ ಮಾತನಾಡಿ, ಸತ್ಯ, ಶಾಂತಿ, ತ್ಯಾಗ, ಅಹಿಂಸೆಯಂಥ ತತ್ವಗಳನ್ನು ಒದಗಿಸಿ ಬದುಕನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಮಹಾತ್ಮಾ ಗಾಂಧೀಜಿಯವರೂ ಸತ್ಯ ಅಹಿಂಸೆ ತತ್ವದಡಿ ಸ್ವಾತಂತ್ರ್ಯ ಹೋರಾಟ ಮಾಡಿದವರು ಎಂದರು.
ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಮಧ್ವರಾಜ್ ಜೈನ್, ಹಿರಿಯರಾದ ಜಿನರಾಜ ಆರಿಗ, ತಾಲೂಕು ಕಚೇರಿ ಉಪತಹಸೀಲ್ದಾರ್ ಗಳಾದ ರಾಜೇಶ್ ನಾಯ್ಕ್, ನರೇಂದ್ರನಾಥ ಮಿತ್ತೂರು, ದಿವಾಕರ ಮುಗುಳ್ಯ, ಕಂದಾಯ ನಿರೀಕ್ಷಕ ರವಿ.ಎಂ.ಎನ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವಿಷಯ ನಿರ್ವಾಹಕ ವಿಷುಕುಮಾರ್ . ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಜನಾರ್ದನ ವಂದಿಸಿದರು.
Be the first to comment on "ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ಮಹಾವೀರ ಜಯಂತಿ ಆಚರಣೆ"