ಬಂಟ್ವಾಳ: ನದಿಯಲ್ಲಿ ನೀರು ಇದ್ದರೂ ವಿತರಣೆಯ ಸಮಸ್ಯೆಯಿಂದ ಕುಡಿಯುವ ನೀರಿಗೆ ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ಸಮಸ್ಯೆಯಾಗಿದ್ದು, ಈ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನೇರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿಯಾಗುವ ಮಹತ್ವದ ನಿರ್ಣಯವನ್ನು ಬಂಟ್ವಾಳ ಪುರಸಭೆ ಸರ್ವಾನುಮತದಿಂದ ಕೈಗೊಂಡಿದೆ.
ಅಧ್ಯಕ್ಷ ಬಿ.ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ಗುರುವಾರ ಬಂಟ್ವಾಳ ಪುರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ತಮ್ಮ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ವಿತರಣೆ ವಿಚಾರವಾಗಿ ಸಮಸ್ಯೆಯನ್ನು ಹೇಳಿದರು. ಈ ಸಂದರ್ಭ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದ ವಿಚಾರವನ್ನು ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಓದಿದರು. ಈ ವಿಚಾರಕ್ಕೆ ಸಂಬಂಧಿಸಿ ದಿನೇಶ್ ಗುಂಡೂರಾವ್ ಕಚೇರಿಯಿಂದ ಸೂಕ್ತ ಪರಿಶೀಲನೆಗೆ ಸೂಚಿಸಿ, ತನಿಖೆ ನಡೆಸಿದರೂ ಪರಿಹಾರವಾಗದ ಹಿನ್ನೆಲೆಯಲ್ಲಿ ಇದರ ಗಂಭೀರತೆಯನ್ನು ಮನವರಿಕೆ ಮಾಡಲು ಜಿಲ್ಲಾಧಿಕಾರಿ ಬಳಿ ಹೋಗುವುದು ಎಂದು ತೀರ್ಮಾನಿಸಲಾಯಿತು. ಕುಡಿಯುವ ನೀರಿನ ಸಮಸ್ಯೆಗಳ ವಿಚಾರವಾಗಿ ಮತ್ತೆ ವಿಸ್ತ್ಋತ ಚರ್ಚೆಯೂ ನಡೆಯಿತು.
ಸದಸ್ಯರಾದ ಎ.ಗೋವಿಂದ ಪ್ರಭು, ಮಹಮ್ಮದ್ ಶರೀಫ್, ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ವಿದ್ಯಾವತಿ ಪ್ರಮೋದ್, ಸಿದ್ದೀಕ್ ಗುಡ್ಡೆಯಂಗಡಿ, ಝೀನತ್ ಫಿರೋಜ್, ಇದ್ರೀಸ್ ಪಿ.ಜೆ, ಜೆಸಿಂತಾ ಡಿಸೋಜ, ಹರಿಪ್ರಸಾದ್, ಹಸೈನಾರ್ ಮತ್ತಿತರರು ಮಾತನಾಡಿದರು.
ಇದೇ ವೇಳೆ ಅಮೃತ ಯೋಜನೆ ಕುರಿತು ಸದಸ್ಯರಿಗೆ ಮಾಹಿತಿ ನೀಡದೆ ಕೆಲಸ ಮಾಡಲಾಗುತ್ತಿದೆ ಎಂದು ಮಹಮ್ಮದ್ ಶರೀಫ್ ದೂರಿದರು. ವಿವಿಧ ವಿಷಯಗಳ ಕುರಿತು ಈ ಸಂದರ್ಭ ಚರ್ಚೆ ನಡೆಯಿತು. ಉಪಾಧ್ಯಕ್ಷ ಮೊನೀಶ್ ಆಲಿ ಉಪಸ್ಥಿತರಿದ್ದರು.
Be the first to comment on "BANTWAL TOWN WATER SUPPLY ISSUE: ಕುಡಿಯುವ ನೀರು ವಿತರಣೆ ವಿಚಾರದಲ್ಲಿ ಜಿಲ್ಲಾಧಿಕಾರಿ ಬಳಿ ತೆರಳಲು ಬಂಟ್ವಾಳ ಪುರಸಭೆ ಸದಸ್ಯರ ನಿರ್ಧಾರ"