ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಲವು ಹೊಸ ಸೌಕರ್ಯಗಳೊಂದಿಗೆ ವಿದ್ಯಾರ್ಥಿಗಳ ವಿಕಸನಕ್ಕೆ ಪ್ರಯತ್ನಪಡುತ್ತಿದೆ. ದಾನಿಗಳ ನೆರವಿನಿಂದ ಆರಂಭಗೊಂಡ ಕಂಪ್ಯೂಟರ್ ಶಿಕ್ಷಣ ಇದಕ್ಕೊಂದು ಉದಾಹರಣೆ.
ಇಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಹಲವು ದಾನಿಗಳ ನೆರವಿನಿಂದ ಕಂಪ್ಯೂಟರ್ ಅನ್ನು ಕೊಡುಗೆಯಾಗಿ ಪಡೆದು ಮಕ್ಕಳಿಗೆ ಪ್ರಾಯೋಗಿಕವಾಗಿ ಕಂಪ್ಯೂಟರ್ ಶಿಕ್ಷಣ ಆರಂಭಗೊಂಡಿತ್ತು. ಶಾಲಾ ಪೋಷಕರು ತರಬೇತಿಯನ್ನು ನೀಡಲು ಮುಂದೆ ಬಂದದ್ದು ಮತ್ತಷ್ಟು ಬಲ ನೀಡಿತು. ಇದೀಗ ಕಳೆದ ವರ್ಷ ಶಾಲೆಯ ಎಲ್ಲ ಮಕ್ಕಳೂ ಕಂಪ್ಯೂಟರ್ ತರಬೇತಿಯನ್ನು ಪಡೆದಿದ್ದು, ಉತ್ತಮ ಸಾಧನೆ ತೋರಿದ್ದಾರೆ. ಇದರ ಜೊತೆಗೆ ಪ್ರಾಜೆಕ್ಟರ್, ಸ್ಕ್ರೀನ್ ಹಾಗು ಸ್ಮಾರ್ಟ್ ಟಿವಿಯೂ ಇದ್ದು, ಡಿಜಿಟಲ್ ಮಾಧ್ಯಮ ಮೂಲಕ ಹೆಚ್ಚಿನ ಅನುಭವಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ.
ರೋಟರಿ ಕ್ಲಬ್ ಬಂಟ್ವಾಳ, ಭೂಮಾಪಕರ ಜಿಲ್ಲಾ ಸಂಘ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್, ಜೇಸಿ ಬಂಟ್ವಾಳ, ಜೋಡುಮಾರ್ಗ ಜೇಸಿ, ರೋಟರಿ ಟೌನ್, ಬ್ಯಾಂಕ್ ಆಫ್ ಬರೋಡಾ ನಂಥ ಸಂಸ್ಥೆಗಳ ಸಹಿತ ಹಿರಿಯ ವಿದ್ಯಾರ್ಥಿಗಳು, ಶಾಲಾ ಮಕ್ಕಳ ಪೋಷಕರು, ಎಸ್.ಡಿ.ಎಂ.ಸಿ, ಹಿರಿಯ ವಿದ್ಯಾರ್ಥಿಗಳ ಸಂಘ, ಹಿತೈಷಿಗಳು, ದಾನಿಗಳು, ಶಿಕ್ಷಕರು ಶಾಲೆಯ ಹಲವು ಚಟುವಟಿಕೆಗಳಿಗೆ ಕೈಜೋಡಿಸಿದ್ದು, ಕಂಪ್ಯೂಟರ್ ಶಿಕ್ಷಣ, ಗೌರವ ಶಿಕ್ಷಕರ ವೇತನ ಸಹಿತ ಹಲವು ರಚನಾತ್ಮಕ ಚಟುವಟಿಕೆಗಳಿಗೆ ನೆರವಾಗಿದ್ದಾರೆ. ಸುಸಜ್ಜಿತವಾದ ತರಗತಿ ಕೊಠಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ದಾನಿಗಳ ನೆರವಿನಿಂದ ಶುದ್ಧ ಕುಡಿಯುವ ನೀರಿನ ಘಟಕ, ಸ್ಪೋಕನ್ ಇಂಗ್ಲೀಷ್ ತರಬೇತಿ, ಸರಕಾರ ನೀಡುವ ಉಚಿತ ಪಠ್ಯಪುಸ್ತಕ, ಮೊಟ್ಟೆ, ಹಾಲು, ಬಿಸಿಯೂಟ, ಸಮವಸ್ತ್ರದ ಜೊತೆಗೆ ಐಡಿ ಕಾರ್ಡ್, ಬೆಲ್ಟ್, ಪುಸ್ತಕ ಹಾಗೂ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತದೆ. ಶಾಲೆಯಲ್ಲಿ ಸಮರ್ಥ ಹಾಗು ಅನುಭವಿ ಶಿಕ್ಷಕರ ತಂಡವಿದ್ದು, ಎಲ್.ಕೆ.ಜಿ. ಹಾಗೂ ಗೌರವ ಶಿಕ್ಷಕರ ವೇತನವನ್ನು ದಾನಿಗಳ ನೆರವಿನಿಂದ ಭರಿಸಲಾಗುತ್ತಿದೆ. ಪ್ರಸ್ತುತ 122 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
Be the first to comment on "ಅಜ್ಜಿಬೆಟ್ಟು ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ಎಲ್.ಕೆ.ಜಿಯಿಂದ ಏಳನೇ ತರಗತಿ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ"