ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ, ಭಾರತಾಂಬೆ ಸಂಜೀವಿನಿ ತಾಲೂಕು ಮಟ್ಟದ ಮಹಿಳಾ ಒಕ್ಕೂಟ ಬಂಟ್ವಾಳ ಸಹಯೋಗದಲ್ಲಿ ಮಂಗಳವಾರ ಬಿ.ಸಿ.ರೋಡಿನ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮ ನಡೆಯಿತು.

https://www.opticworld.net/
ಈ ಸಂದರ್ಭ ತಾಲೂಕು ಮಟ್ಟದ ಸಂಜೀವಿನಿ ಸಂತೆ, ಪ್ರಧಾನಮಂತ್ರಿ ವನಧನ ವಿಕಾಸ ಕೇಂದ್ರದ ಉತ್ಪನ್ನಗಳ ಅನಾವರಣ ಮತ್ತು ಮಾಹಿತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಮಹಿಳೆಯರು ಸಾಮಾಜಿಕವಾಗಿ ಪ್ರಗತಿಶೀಲರಾಗಿದ್ದು, ಮಹಿಳಾ ಸ್ವಾತಂತ್ರ್ಯದಿಂದ ಇದು ಸಾಧ್ಯವಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯ ಪ್ರಗತಿಗೆ ಮಹಿಳಾ ಸಮಾನತೆಯೂ ಕಾರಣವಾಗಿದ್ದು, ಆರ್ಥಿಕವಾಗಿ ಮಹಿಳೆ ಸಬಲಳಾಗುವ ಜೊತೆಗೆ ಇಡೀ ಸಮಾಜವನ್ನು ಸಂಸ್ಕಾರಯುತವನ್ನಾಗಿ ಮಾಡಲು ಪುರುಷರು, ಮಹಿಳೆಯರ ಸಮಾನ ಕೊಡುಗೆ ಅಗತ್ಯ. ಮಹಿಳಾ ದೌರ್ಜನ್ಯ ತಡೆಯೂ ಅತಿ ಮುಖ್ಯ. ಸುಸಂಸ್ಕೃತ ಜೀವನ, ಸಮಯ ಪರಿಪಾಲನೆ ಅತೀ ಮುಖ್ಯವಾಗಿದ್ದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮನೆ, ಮನ, ಮನೆಸ್ಥಿತಿ ಮೂರು ವಿಚಾರಗಳನ್ನು ಮನದಲ್ಲಿಟ್ಟುಕೊಂಡು ಮಹಿಳೆಯರು ಜೀವನ ಸಾಗಿಸಿದರೆ ಯಶಸ್ಸಾಗುತ್ತದೆ ಎಂದರು. ಕಡೇಶಿವಾಲಯದ ಸ್ವಚ್ಛವಾಹಿನಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ರಾಜ್ಯದ ಗಮನ ಸೆಳೆದಿದ್ದನ್ನು ಅವರು ಗಮನ ಸೆಳೆದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಇಂದು ಇಪ್ಪತ್ತೇಳು ಗ್ರಾಪಂಗಳಲ್ಲಿ ಸ್ವಚ್ಛವಾಹಿನಿಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದಾರೆ. ಸಂಜೀವಿನಿಯ 1432 ಸ್ವಸಹಾಯ ಸಂಘಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 14973 ಸದಸ್ಯರು ಇದರಲ್ಲಿದ್ದಾರೆ. ಇದುವರೆಗೆ 14.64 ಕೋಟಿ ರೂ ಬ್ಯಾಂಕ್ ಸಾಲ ವಿತರಿಸಲಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ ಪೂಜಾರಿ ಅವರು ಸುಮಾರು 30ಕ್ಕೂ ಅಧಿಕ ಮಳಿಗೆಗಳು ಇರುವ ಸಂಜೀವಿನಿ ಸಂತೆ ಉದ್ಘಾಟಿಸಿದರು. ಈ ಸಂದರ್ಭ ಬುಡಾ ಅಧ್ಯಕ್ಷ ಬೇಬಿ ಕುಂದರ್ ಶುಭ ಹಾರೈಸಿದರು. ವೇದಿಕೆಯಲ್ಲಿ ಯೋಜನೆ ನಿರ್ದೇಶಕ ಜಯರಾಮ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ, ಬಂಟ್ವಾಳ ಸಿಡಿಪಿಒ ಮಮ್ತಾಝ್, ಭಾರತಾಂಬೆ ಸಂಜೀವಿನಿ ತಾಲೂಕು ಮಟ್ಟದ ಮಹಿಳಾ ಒಕ್ಕೂಟ ಅಧ್ಯಕ್ಷೆ ಆಕರ್ಷಿಣಿ, ರೀಜನಲ್ ಆಫೀಸರ ದಿನೇಶ್. ಸಂಜೀವಿನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಗೌಡ, ಸಂಪನ್ಮೂಲ ವ್ಯಕ್ತಿ ಕಸ್ತೂರಿ ಬೊಳುವಾರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನರೇಗಾ 2025-26 ನೇ ಸಾಲಿನ ಕ್ರಿಯಾಯೋಜನೆಗೆ ಅತಿ ಹೆಚ್ಚು ಬೇಡಿಕೆಯನ್ನು ಸಂಗ್ರಹಿಸಿ ನೀಡಿದ ಒಕ್ಕೂಟದ ಪಶು ಸಖಿ ಮತ್ತು ಕೃಷಿ ಸಖಿಗಳಲ್ಲಿ ತಲಾ ಮೂವರಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. 2024-25ನೆ ಸಾಲಿನಲ್ಲಿ 200ಕ್ಕಿಂತ ಹೆಚ್ಚು ಇಂಗುಗುಂಡಿ ನಿರ್ಮಿಸಿದ ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ಚಿಗುರು ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಗೌರವ ಸ್ಮರಣಿಕೆಕೆಯನ್ನು ನೀಡಿ ಅಭಿನಂದಿಸಲಾಯಿತು. ಸೌಮ್ಯಾ ಭಂಡಾರಿಬೆಟ್ಟು ಸ್ವಾಗತಿಸಿದರು. ಮಮತಾ ವಂದಿಸಿದರು. ದೀಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಂಟ್ವಾಳ ತಾಲೂಕು ಮಟ್ಟದ ಸಂಜೀವಿನಿ ಸಂತೆ, ಮಹಿಳಾ ದಿನಾಚರಣೆ, ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ"