ಬಿರುಬೇಸಗೆಯಲ್ಲಿ ಇಂದು ಭೂಮಿಯಲ್ಲಿ ನೀರಿನ ಸೆಲೆ ಏನಾದರೂ ಕಂಡುಬಂದರೆ, ಅದಕ್ಕೆ ಕಿಂಡಿ ಅಣೆಕಟ್ಟಿನ ದೊಡ್ಡ ಕೊಡುಗೆ ಇದೆ. ನೋಡಲು ಅಣೆಕಟ್ಟು ಸಣ್ಣದಾದರೂ ಬೀರುವ ಪ್ರಭಾವ ಹಿರಿದು. ಹರಿಯುವ ನದಿ, ತೋಡು, ಪುಟ್ಟ ಹೊಳೆಯಲ್ಲಿ ಸಣ್ಣ ಒಡ್ಡುಗಳನ್ನು ನಿರ್ಮಿಸಿದ್ದು ಕೃಷಿಕರ ಪಾಲಿಗೆ ವರದಾನವೇ ಆಗಿದೆ. ಆದರೆ ಒಮ್ಮೆ ಅಣೆಕಟ್ಟು ನಿರ್ಮಿಸಿದರೆ ಕೆಲಸ ಮುಗಿಯುವುದಿಲ್ಲ, ಅದರ ಪಾಲನೆಯೂ ಅಷ್ಟೇ ಮುಖ್ಯ ಹಾಗೂ ದೊಡ್ಡ ಸವಾಲೂ ಹೌದು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿ, ನಿರ್ವಹಿಸುತ್ತಿರುವ 56 ಕಿಂಡಿ ಅಣೆಕಟ್ಟುಗಳು ಇದ್ದು, ಇದರಲ್ಲಿ ಜಕ್ರಿಬೆಟ್ಟುವಿನಲ್ಲಿ ಹಾಕಲಾದ ಸೇತುವೆಸಹಿತ ಕಿಂಡಿ ಅಣೆಕಟ್ಟೂ ಸೇರಿದೆ. ಹಾಗೆಯೇ ನರೇಗಾದಡಿ 100ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳನ್ನು ಕಳೆದ ಒಂಭತ್ತು ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. ಇವುಗಳ ಪೈಕಿ ಸಣ್ಣ ನೀರಾವರಿ ಇಲಾಖೆ ನಿರ್ವ್ಹಿಸುವ ಕಿಂಡಿ ಅಣೆಕಟ್ಟುಗಳು ನೀರು ಸಂಗ್ರಹದ ಮೂಲಕ ಜನೋಪಯೋಗಿಯಾಗಿದ್ದು, ಇದರ ನಿರ್ವಹಣೆಯನ್ನೂ ಇಲಾಖೆಯೇ ಮಾಡುತ್ತಿದೆ. ನರೇಗಾದಡಿ ನಿರ್ಮಿಸಲಾದ ಕೆಲ ಅಣೆಕಟ್ಟುಗಳು ನಾನಾ ಕಾರಣಗಳಿಂದ ಉಪಯೋಗವಾಗುತ್ತಿಲ್ಲವಾದರೂ ಬಹುತೇಕ ಯಶಸ್ವಿ ಯೋಜನೆಯಾಗಿದೆ. ಇದಕ್ಕೆ ಸ್ಥಳೀಯರ ಸಹಕಾರವೂ ಅಗತ್ಯವಾಗಿದೆ. ಕೃಷಿಕರು ಸಂಘಟಿತರಾಗಿ ಪ್ರಯತ್ನ ನಡೆಸಿದಾಗ ಇದರ ಪ್ರಯೋಜನ ಸುತ್ತಮುತ್ತಲಿನವರೆಲ್ಲರಿಗೂ ಸಿಗುತ್ತದೆ.
ಉದಾಹರಣೆಗೆ ಸಣ್ಣ ನೀರಾವರಿ ಇಲಾಖೆ ಮೂಲಕ ನಿರ್ಮಿಸಲಾದ ಬಂಟ್ವಾಳ ತಾಲೂಕಿನ ಸಜಿಪದ ಕೃಷ್ಣಾಪುರದಲ್ಲಿರುವ ಕಿಂಡಿ ಅಣೆಕಟ್ಟು ಸುತ್ತಮುತ್ತ ಒಂದೂವರೆ ಕಿ.ಮೀ.ವರೆಗೆ ನೀರು ನಿಲ್ಲುವ ಅವಕಾಶವಿದೆ. ಇದರಿಂದ ಆಸುಪಾಸಿನ ಜನರ ಕೃಷಿಗೆ ಅನುಕೂಲವಾಗಿದೆ. ತೆಂಗು, ಭತ್ತ ಬೆಳೆಗಾರರಿಗೆ ಇದು ಉಪಯೋಗಿ. ದ್ವಿಚಕ್ರ ವಾಹನ, ಆಟೋಗಳು ಸಂಚರಿಸುವುದರಿಂದ ಮಳೆಗಾಲದಲ್ಲಿಯೂ ಪ್ರಯೋಜನಕಾರಿ.
ನರೇಗಾದಡಿ ಪಂಜಿಕಲ್ಲಿನಲ್ಲಿ ದಿಶಾ ಸಂಘಟನೆ ಸಹಕಾರದಿಂದ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನಲ್ಲೂ ಯಥೇಚ್ಛ ನೀರು ಸಂಗ್ರಹವಾಗುವುದರಿಂದ ಮಾಡಿದ ಉದ್ದೇಶ ಸಫಲವಾಗಿದೆ. ಇಲ್ಲಿ ಸ್ಥಳೀಯರು ಅದರ ನಿರ್ವಹಣೆ ಮಾಡುತ್ತಿದ್ದಾರೆ.
ಪರಿಸರಕ್ಕೂ ಹಾನಿಯಾಗಬಾರದು:
ಕಿಂಡಿ ಅಣೆಕಟ್ಟುವಿನಲ್ಲಿ ಸಂಗ್ರಹಗೊಂಡ ನೀರು ಕೃಷಿ ಉದ್ದೇಶಕ್ಕೆ ಬಳಕೆಯಾಗುವುದಾದರೂ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದೂ ಸ್ಥಳೀಯರ ಹೊಣೆಗಾರಿಕೆ. ಸರ್ಕಾರಿ ಯೋಜನೆಗಳ ಸಮರ್ಪಕ ಬಳಕೆಯ ಜವಾಬ್ದಾರಿ ಸ್ಥಳೀಯರು ಹಾಗೂ ಜನಪ್ರತಿನಿಧಿಗಳಿಗೆ ಸೇರಿದ ಕಾರಣ, ನೀರಿಗೆ ಕೊಳಚೆ, ಮಲಿನಯುಕ್ತ ಪದಾರ್ಥಗಳು ಸೇರದಂತೆ ಮಾಡುವುದು, ಡಂಪಿಂಗ್ ಪ್ರದೇಶವನ್ನಾಗಿಸದೇ, ಅಗತ್ಯ ಬಂದಾಗ ಕುಡಿಯಲೂ ಆಗುವಂತೆ ಅದನ್ನು ಕಾಪಾಡಿಕೊಳ್ಳುವ ಮಹತ್ತರ ಜವಾಬ್ದಾರಿ ಸ್ಥಳೀಯರದ್ದು
ಬಂಟ್ವಾಳ ತಾಲೂಕಿನಲ್ಲಿ ಎಷ್ಟಿವೆ?
ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾದ 56 ಕಿಂಡಿ ಅಣೆಕಟ್ಟುಗಳು ಬಂಟ್ವಾಳ ತಾಲೂಕಿನಲ್ಲಿ ಕಾರ್ಯಾಚರಿಸುತ್ತಿವೆ. ಬಹುತೇಕ ಎಲ್ಲ ಕಿಂಡಿ ಅಣೆಕಟ್ಟುಗಳೂ ಸುಸ್ಥಿತಿಯಲ್ಲಿದ್ದು, ನೀರು ಸಂಗ್ರಹದಿಂದ ಸಮೀಪದ ಕೃಷಿ ಭೂಮಿಯ ನೀರಿನ ಒರತೆಯನ್ನೂ ಹೆಚ್ಚಿಸಿವೆ. ಇವುಗಳ ನಿರ್ವಹಣೆಯನ್ನೂ ಇಲಾಖೆ ಮೇಲುಸ್ತುವಾರಿಯಲ್ಲಿ ಮಾಡಲಾಗುತ್ತಿದೆ.
ನರೇಗಾ ಮೂಲಕ 2016ರಿಂದ ಇದುವರೆಗೆ ಈಗ ಉಳ್ಳಾಲ ತಾಲೂಕಿಗೆ ಸೇರ್ಪಡೆಯಾದ ಗ್ರಾಮಗಳೂ ಸೇರಿ ಒಟ್ಟು 113 ಕಿಂಡಿ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಇವುಗಳಲ್ಲಿ ಹೆಚ್ಚಿನ ಅಣೆಕಟ್ಟು ಸಣ್ಣ ಗಾತ್ರದ್ದಾಗಿದ್ದು, ಸ್ಥಳೀಯ ಅವಶ್ಯಕತೆಗಳನ್ನು ಪೂರೈಸಲು ನಿರ್ಮಿಸಲಾಗಿದೆ. ಉಳ್ಳಾಲಕ್ಕೆ ಸೇರಿದ ಗ್ರಾಮ ಹೊರತುಪಡಿಸಿ, 95 ಕಿಂಡಿ ಅಣೆಕಟ್ಟುಗಳನ್ನು ಬಂಟ್ವಾಳ ತಾಲೂಕಿನಲ್ಲಿ ನಿರ್ಮಿಸಲಾಗಿದ್ದು, ಸ್ಥಳೀಯರ ನಿರ್ವಹಣೆಯಲ್ಲಿ ಕಾರ್ಯಾಚರಿಸುತ್ತಿದೆ.
ಸಮಸ್ಯೆಗಳೇನು?
- ನಿರ್ವಹಣೆಗೆ ಸಕಾಲದಲ್ಲಿ ಸರಕಾರದ ಅನುದಾನ ಅಗತ್ಯ
- ಪಶ್ಚಿಮವಾಹಿನಿ ಯೋಜನೆ ಪರಿಣಾಮಕಾರಿ ಅನುಷ್ಠಾನ ಬೇಕು.
- ಕಸಕಡ್ಡಿ ತೆಗೆಯದಿದ್ದರೆ ಸಮಸ್ಯೆ, ಮರಗಳು ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳಬೇಕು.
- ನೀರು ಗಲೀಜು ಮಾಡದಂತೆ ನೋಡಿಕೊಳ್ಳಬೇಕು.
- ತೋಡಲ್ಲಿ ನೀರು ನಿಂತರೆ, ಅದು ಶುದ್ಧವಾಗಿರುವಂತೆ ನೋಢಿಕೊಳ್ಳಬೇಕು.
Be the first to comment on "ನಿರ್ವಹಣೆ ಸವಾಲು ಸ್ವೀಕರಿಸಿದರೆ, ಕಿಂಡಿ ಅಣೆಕಟ್ಟು ಯಶಸ್ವಿ"