MESCOM: ಬಂಟ್ವಾಳ ತಾಲೂಕಿನ ಸಬ್ ಸ್ಟೇಶನ್‌ಗಳ ಬಲವರ್ಧನೆಯಾದರೆ ನಿರಂತರ ವಿದ್ಯುತ್

https://www.opticworld.net/

| ಬಂಟ್ವಾಳ ತಾಲೂಕಿನಲ್ಲಿ 1.5 ಲಕ್ಷ ವಿದ್ಯುತ್ ಬಳಕೆದಾರರು | ಹೆಚ್ಚಿನ ಸ್ಟೇಶನ್ ಗಳ ಬೇಡಿಕೆ 

ಹರೀಶ ಮಾಂಬಾಡಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕನ್ನು ಗಮನಿಸಿದರೆ, ವಿದ್ಯುತ್ ಸಬ್ ಸ್ಟೇಶನ್ ಗಳ ಸಂಖ್ಯೆ ಹೆಚ್ಚಿದೆ. ಆದರೆ ಬಳಕೆದಾರರು ಹಾಗೂ ವಿದ್ಯುತ್ ಬೇಡಿಕೆಯನ್ನು ಗಮನಿಸಿದರೆ, ಹಾಗೂ ಅವಶ್ಯಕತೆಗಳನ್ನು ಅವಲೋಕಿಸಿದರೆ, ಇನ್ನಷ್ಟು ಸಬ್ ಸ್ಟೇಶನ್ ಗಳ ಅಗತ್ಯವಿದೆ. ಹೀಗಾಗಿ ಸುಮಾರು ೧.೫ ಲಕ್ಷಕ್ಕೂ ಅಧಿಕ ವಿದ್ಯುತ್ ಬಳಕೆದಾರರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಇನ್ನಷ್ಟು ಕ್ರಮಗಳನ್ನು ವಹಿಸಬೇಕಾಗಿದ್ದು, ಈಗಾಗಲೇ ಮೂರು ಕಡೆಗಳಲ್ಲಿ ಸ್ಥಾಪಿಸುವ ಪ್ರಸ್ತಾವನೆಯೂ ಹೋಗಿದೆ.
ಸಂಗಬೆಟ್ಟು ಪರಿಸರದಲ್ಲಿರುವ ಓವರ್ ಲೋಡ್ ಸಮಸ್ಯೆಯನ್ನು ಹಗುರಗೊಳಿಸಲು ಅಲ್ಲೊಂದು ಸಬ್ ಸ್ಟೇಶನ್ ನಿರ್ಮಾಣವಾಗುವ ಅಗತ್ಯವಿದ್ದರೆ, ಸರಪಾಡಿ ಪರಿಸರದಲ್ಲಿಯೂ ಹೊಸದೊಂದು ಸಬ್ ಸ್ಟೇಶನ್ ನಿರ್ಮಾಣವಾಗಬೇಕಿದೆ. ಹಾಗೆಯೇ ವಿಟ್ಲ ಪರಿಸರದ ಬಹುಕಾಲದ ಬೇಡಿಕೆಯಾದ ಸಬ್ ಸ್ಟೇಶನ್ ನಿರ್ಮಾಣದ ಆಸೆ ಇನ್ನೂ ಕೈಗೂಡಿಲ್ಲ. ಇವೆಲ್ಲವೂ ಆದರೆ, ಬಂಟ್ವಾಳ ತಾಲೂಕಿನ ಬಹುತೇಕ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆತಂತೆ.
ಮಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ತುಂಬೆ ಸೇರಿದಂತೆ ಬಹುಗ್ರಾಮ ಕುಡಿಯುವ ನೀರು ವಿತರಣೆಗಳೂ ಸೇರಿ ಹಲವು ಯೋಜನೆಗಳಿಗೆ ಬೇಕಾದ ವಿದ್ಯುತ್ ಅವಶ್ಯಕತೆಗಳಿಗೆ ಬಂಟ್ವಾಳದಿಂದೇ ಪೂರೈಕೆಯಾಗುವ ಕಾರಣ ಹಾಗೂ ಇಲ್ಲಿ ಇತ್ತೀಚಿನ ದಿನಗಳಲ್ಲಿ ಗೃಹಕೈಗಾರಿಕೆ ಸಹಿತ ಉದ್ದಿಮೆಗಳು ಹೆಚ್ಚಾಗಿ ಕಂಡುಬರುವ ಕಾರಣ ಬಂಟ್ವಾಳ ತಾಲೂಕು ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಬಳಕೆಯ ದೃಷ್ಟಿಯಿಂದ ಪ್ರಮುಖ ತಾಲೂಕಾಗಿದೆ.

ಬಂಟ್ವಾಳ ತಾಲೂಕಿನ ಉಪವಿಭಾಗಗಳು ಹೀಗಿದೆ:
ಬಂಟ್ವಾಳದ ಬಿ.ಸಿ.ರೋಡ್ ನಲ್ಲಿರುವ ಮೆಸ್ಕಾಂ ಕಚೇರಿ ಕಟ್ಟಡದಲ್ಲಿ ಬಂಟ್ವಾಳ ವಿಭಾಗೀಯ ಕಚೇರಿ ಇದೆ. ಇದು ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ವ್ಯಾಪ್ತಿಯನ್ನು ಒಳಗೊಂಡಿದೆ. ಇಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್ ಎರಡೂ ತಾಲೂಕಿನ ಮುಖ್ಯಸ್ಥರಾಗಿರುತ್ತಾರೆ. ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ ನಂ.೧, ಬಂಟ್ವಾಳ ನಂ.೨ ಮತ್ತು ವಿಟ್ಲ ಎಂಬ ಮೂರು ಉಪವಿಭಾಗಗಳಿವೆ. ಬಂಟ್ವಾಳ ನಂ.೧ ಉಪವಿಭಾಗದಲ್ಲಿ ಬಿ.ಸಿ.ರೋಡ್, ಪೊಳಲಿ, ಫರಂಗಿಪೇಟೆ, ಮೆಲ್ಕಾರ್, ಪಾಣೆಮಂಗಳೂರು ಮತ್ತು ಕಲ್ಲಡ್ಕದಲ್ಲಿ ಒಟ್ಟು ೬ ಸೆಕ್ಷನ್ ಕಚೇರಿಗಳಿವೆ. ಬಂಟ್ವಾಳ ನಂ.೨ ಉಪವಿಭಾಗದಲ್ಲಿ ಕಸಬಾ, ವಾಮದಪದವು, ಸಿದ್ಧಕಟ್ಟೆ, ಕಕ್ಯಪದವು, ವಗ್ಗ ಸೇರಿ ೫ ಕಚೇರಿಗಳಿವೆ. ವಿಟ್ಲದಲ್ಲಿ ವಿಟ್ಲ, ಕನ್ಯಾನ, ಉಕ್ಕುಡ, ಮಾಣಿ ಮತ್ತು ಸಾಲೆತ್ತೂರುಗಳು ಸೇರಿ ಒಟ್ಟು ೫ ಕಚೇರಿಗಳಿದ್ದು, ಇಡೀ ಬಂಟ್ವಾಳ ತಾಲೂಕಿನಲ್ಲಿ ೧೬ ಸೆಕ್ಷನ್ ಕಚೇರಿಗಳಿವೆ.

ಕೆಪಿಟಿಸಿಎಲ್ ನಿರ್ವಹಣೆಯ ಸಬ್ ಸ್ಟೇಶನ್ ಗಳು:

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ಸಂಬಂಧಪಟ್ಟಂತೆ (ಕೆಪಿಟಿಸಿಎಲ್) ಬಂಟ್ವಾಳ ತಾಲೂಕಿನಲ್ಲಿ ನಾಲ್ಕು ಸಬ್ ಸ್ಟೇಶನ್ ಗಳಿವೆ. ಇವುಗಳಲ್ಲಿ ೨೨೦ ಕೆವಿ ನೆಟ್ಲಮುಡ್ನೂರು ಬಂಟ್ವಾಳವಷ್ಟೇ ಅಲ್ಲ, ಪುತ್ತೂರು ತಾಲೂಕಿನ ಭಾಗಗಳಿಗೂ ವಿದ್ಯುತ್ ಪೂರೈಕೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ. ಬಂಟ್ವಾಳ ಸಬ್ ಸ್ಟೇಶನ್ ಬಿ.ಸಿ.ರೋಡಿನ ತಲಪಾಡಿಯಲ್ಲಿದ್ದು ೧೧೦ ಕೆವಿ ಸಾಮರ್ಥ್ಯ ಹೊಂದಿದೆ. ಇದು ಬಂಟ್ವಾಳ ವ್ಯಾಪ್ತಿಗೆ ಅನುಕೂಲವಾದರೆ, ವಿಟ್ಲದಲ್ಲಿ ೧೧೦ ಕೆವಿ ಹಾಗೂ ಸಾಲೆತ್ತೂರಿನಲ್ಲಿ ೧೧೦ ಕೆವಿ ಸಬ್ ಸ್ಟೇಶನ್ ಗಳು ಕೆಪಿಟಿಸಿಎಲ್ ನಿಂದ ನಿರ್ವಹಿಸಲ್ಪಡುತ್ತಿವೆ.
ಮೆಸ್ಕಾಂ ನಿರ್ವಹಣೆಯ ಸ್ಟೇಶನ್ ಗಳು:
ಬಂಟ್ವಾಳ ತಾಲೂಕಿನಲ್ಲಿ ಮೆಸ್ಕಾಂ ನಿರ್ವಹಣೆಯ ನಾಲ್ಕು ಸ್ಟೇಶನ್ ಗಳಿದ್ದು, ಅವುಗಳ ಪೈಕಿ ಒಂದು ಗ್ಯಾಸ್ ಇನ್ಸುಲೇಟೆಡ್ ಸ್ಟೇಶನ್ ಆಗಿದೆ. ಬಂಟ್ವಾಳದಲ್ಲಿ ಈ ಸ್ಟೇಶನ್ ಇದೆ. ವಗ್ಗ, ಕುಕ್ಕಿಪ್ಪಾಡಿ ಹಾಗೂ ಕಲ್ಲಡ್ಕದಲ್ಲಿ ಇತರ ಸ್ಟೇಶನ್ ಗಳಿವೆ. ಎಲ್ಲವೂ ೩೩ಕೆವಿ ಸಾಮರ್ಥ್ಯದ್ದಾಗಿದೆ.

ಬಳಕೆದಾರರು ೧,೫೩,೭೭೩:

ಬಂಟ್ವಾಳ ತಾಲೂಕಿನಲ್ಲಿ ಕುಡಿಯುವ ನೀರು, ಗೃಹಬಳಕೆ, ಪಂಚಾಯಿತಿ, ಶಾಲೆ, ಕೃಷಿ ಪಂಪ್ ಸೆಟ್ ಸೇರಿ ಒಟ್ಟು ಸಂಪರ್ಕಗಳ ಸಂಖ್ಯೆ. ೧,೫೩,೭೭೩. ಇದರ ಪೈಕಿ ಗೃಹಬಳಕೆಗೆ ೧,೦೩,೩೧೭ ಸಂಪರ್ಕಗಳಿವೆ. ಸರಕಾರದ ಗೃಹಜ್ಯೋತಿ ಫಲಾನುಭವಿಗಳು ೬೧,೪೦೭ರಷ್ಟಿದ್ದು ಇವರು ವಿದ್ಯುತ್ ಬಿಲ್ ಉಚಿತದ ಲಾಭ ಪಡೆಯುತ್ತಿದ್ದಾರೆ. ಕೃಷಿ ಪಂಪ್ ಸೆಟ್ ಬಳಕೆದಾರರು ೩೧,೮೪೦ ಇದ್ದಾರೆ.

ಸಿಬ್ಬಂದಿ ಸಂಖ್ಯೆ ಹೀಗಿದೆ
ನಿರ್ವಹಣಾ ಸಿಬ್ಬಂದಿ ೨೦೩ ಮಂಜೂರಾಗಿದ್ದು, ೧೫೮ ಮಂದಿ ಕರ್ತವ್ಯನಿರತರಾಗಿದ್ದಾರೆ. ೪೫ ಹುದ್ದೆಗಳು ಖಾಲಿ ಇವೆ. ಸಹಾಯಕ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್ ಮತ್ತು ಓವರ್ ಸೀಯರ್ ಗಳ ಹುದ್ದೆ ೩೬ ಇದ್ದು, ೨೬ ಹುದ್ದೆಗಳು ಭರ್ತಿಯಾಗಿವೆ. ೧೦ ಖಾಲಿ ಇದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳ ಮೂರು ಹುದ್ದೆಗಳೂ ಭರ್ತಿಯಾಗಿವೆ. ಕಂದಾಯ ಶಾಖೆಯಲ್ಲಿ ಮಂಜೂರಾದ ೧೮ ಹುದ್ದೆಗಳಲ್ಲಿ ೧೬ ಭರ್ತಿಯಾಗಿದ್ದು, ಎರಡು ಖಾಲಿ ಇದೆ.

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "MESCOM: ಬಂಟ್ವಾಳ ತಾಲೂಕಿನ ಸಬ್ ಸ್ಟೇಶನ್‌ಗಳ ಬಲವರ್ಧನೆಯಾದರೆ ನಿರಂತರ ವಿದ್ಯುತ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*