
https://www.opticworld.net/
ಜನಪ್ರಿಯ ಟಿವಿ ಚಾನೆಲ್ ಕಲರ್ಸ್ ಕನ್ನಡವು ಎರಡು ಹೊಸ ರಿಯಾಲಿಟಿ ಶೋಗಳನ್ನು ಶುರುಮಾಡುತ್ತಿದೆ. ‘ಬಾಯ್ಸ್ ವಿ/ಎಸ್ ಗರ್ಲ್ಸ್’ ಎಂಬ ಗೇಮ್ ಶೋ ಮತ್ತು ಕಚಗುಳಿಯಿಟ್ಟು ನಗಿಸುವ ‘ಮಜಾ ಟಾಕೀಸ್’ ಶೋಗಳು ಫೆ.1ರಿಂದ ಪ್ರಸಾರ ಆರಂಭಿಸಿವೆ.

ಪ್ರತಿ ಶನಿವಾರ ಮತ್ತು ಭಾನುವಾರ ಏಳೂವರೆಗೆ ‘ಬಾಯ್ಸ್ ವಿ/ಎಸ್ ಗರ್ಲ್ಸ್’ ಹಾಗೂ 9 ಗಂಟೆಗೆ ʼಮಜಾ ಟಾಕೀಸ್ʼ ಕಾರ್ಯಕ್ರಮಗಳು ನಿಮ್ಮನ್ನು ರಂಜಿಸಲಿವೆ. ಹೊಸ ರೀತಿಯ ರಿಯಾಲಿಟಿ ಶೋಗಳಿಗೆ ಹೆಸರಾಗಿರುವ ಕಲರ್ಸ್ ಕನ್ನಡ ಶುರುಮಾಡುತ್ತಿರುವ ‘ಬಾಯ್ಸ್ ವಿ/ಎಸ್ ಗರ್ಲ್ಸ್’ ಒಂದು ರೋಮಾಂಚಕ ಗೇಮ್ ಶೋ. ಹುಡುಗ ಮತ್ತು ಹುಡುಗಿಯರ ಗುಂಪುಗಳು ಜಿದ್ದಾಜಿದ್ದಿಗೆ ಬಿದ್ದು ನೋಡುಗರ ಬಿಸಿ ಏರಿಸುವ ಆಟದ ಶೋ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಕನ್ನಡ ಕಿರುತೆರೆಗೆ ಹೊಸದೆನಿಸುವ ಥ್ರಿಲ್ ಹೊತ್ತು ತರಲಿದೆ.ಬಾಯ್ಸ್ ತಂಡವನ್ನು ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮುನ್ನಡೆಸಿದರೆ, ಹುಡುಗಿಯರ ಗುಂಪಿನ ನಾಯಕಿ ನಟಿ ಶುಭಾ ಪೂಂಜಾ. ಇನ್ನು ಸ್ಪರ್ಧಿಗಳ ಪಟ್ಟಿಯೂ ಅಷ್ಟೇ ರೋಚಕವಾಗಿದೆ.

ಈಗಷ್ಟೇ ಬಿಗ್ ಬಾಸ್ ಗೆದ್ದಿರುವ ಹನುಮಂತ ಲಮಾಣಿ, ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುವಂಥ ಆಟವಾಡಿದ ಧನರಾಜ್ ಆಚಾರ್, ಐಶ್ವರ್ಯಾ ಶಿಂದೊಗಿ, ಶೋಭಾ ಶೆಟ್ಟಿ, ಚೈತ್ರಾ ಕುಂದಾಪುರ ಮತ್ತು ರಜತ್ ಕೂಡ ಇಲ್ಲಿ ನಿಮಗೆ ಸಿಗುತ್ತಾರೆ. ಜೊತೆಗೆ ಕಿರುತೆರೆಯ ಜನಪ್ರಿಯ ಮುಖಗಳಾದ ಪ್ರಶಾಂತ್, ಮಂಜು ಪಾವಗಡ, ನಿವೇದಿತಾ ಗೌಡ, ಸೂರಜ್, ವಿಶ್ವಾಸ್, ಸ್ನೇಹಿತ್, ವಿವೇಕ್ ಸಿಂಹ, ರಕ್ಷಿತ್, ಚಂದನ, ರಮ್ಯ, ಪ್ರಿಯಾ ಸವಡಿ, ಸ್ಪಂದನಾ ಮತ್ತು ಐಶ್ವರ್ಯಾ ವಿನಯ್ ಕೂಡ ಆಟಕ್ಕೆ ಕಿಚ್ಚು ಹಚ್ಚಲಿದ್ದಾರೆ. ಈ ಪಟ್ಟಿಯನ್ನೊಮ್ಮೆ ನೋಡಿದರೂ ಸಾಕು, ಆಟದ ಬಿಸಿ ಎಷ್ಟಿರುತ್ತೆ ಎಂಬುದನ್ನು ಊಹಿಸಬಹುದು. ಶೋನ ಉದ್ದಕ್ಕೂ ಸ್ಪರ್ಧಿಗಳಿಗೆ ರೋಚಕ ಸವಾಲುಗಳಿರುತ್ತವೆ. ಹುಡುಗ ಹುಡುಗಿಯರು ತಮ್ಮ ಚಾಕಚಕ್ಯತೆ, ಸೃಜನಶೀಲತೆ ಮತ್ತು ಒಟ್ಟಾಗಿ ಆಡುವ ಮನೋಭಾವದಿಂದ ಈ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಗೇಮುಗಳ ಜೊತೆಗೆ ನೃತ್ಯ ಸೇರಿದಂತೆ ಉಳಿದ ಟಾಸ್ಕುಗಳೂ ಇಲ್ಲಿರುತ್ತವೆ. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಈಗಾಗಲೇ ಮೂರು ಯಶಸ್ವೀ ಸೀಸನ್ನುಗಳನ್ನು ಮುಗಿಸಿರುವ ‘ಮಜಾ ಟಾಕೀಸ್’ ಇದೀಗ ಮತ್ತೊಂದು ಹೊಸ ಸೀಸನ್ ಗೆ ತಯಾರಾಗಿದೆ. ಎಲ್ಲ ವಯಸ್ಸಿನ ವೀಕ್ಷಕರನ್ನೂ ಮರುಳು ಮಾಡುವ ಮಾತುಗಾರ ಸೃಜನ್ ಈ ಹೊಸ ಸೀಸನ್ನಿಗೆ ಹಲವು ಹೊಸ ಸಂಗತಿಗಳನ್ನು ಸೇರಿಸಿರುವುದು ಅಭಿಮಾನಿಗಳ ಕುತೂಹಲ ಕೆರಳಿಸಿದೆ.
Be the first to comment on "ಕಲರ್ಸ್ ಕನ್ನಡದಲ್ಲಿ ಜೋಡಿ ರಿಯಾಲಿಟಿ ಶೋ ಶುರು"