- | ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ
- | ಎಕ್ಸ್ ರೇ, ಲ್ಯಾಬ್ ಟೆಕ್ನಿಶಿಯನ್ ಗಳೂ ಇಲ್ಲ | ಆರೋಗ್ಯ ಸಚಿವರೇ, ಕಾಯಂ ವೈದ್ಯರ ನೇಮಿಸಿ

BANTWAL HOSPITAL
ಬೇಕಾದಷ್ಟು ಬೆಡ್ ಗಳು, ಹೈಟೆಕ್ ಸವಲತ್ತುಗಳನ್ನು ಹೊಂದಿರುವ ಆಸ್ಪತ್ರೆಗೆ ಬೇಕಾದದ್ದು ವೈದ್ಯರು. ಆದರೆ ಬಂಟ್ವಾಳದ ಹೃದಯಭಾಗದಲ್ಲಿರುವ ಬಂಟ್ವಾಳ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ 2022ರ ಸೆಪ್ಟೆಂಬರ್ ತಿಂಗಳ ಬಳಿಕ ಇದುವರೆಗೂ ಪ್ರಸೂತಿತಜ್ಞರ ನೇಮಕವಾಗಿಲ್ಲ. ಪ್ರಕಟಣೆ ಕೊಟ್ಟರೂ ವೈದ್ಯರು ಬರುತ್ತಿಲ್ಲ. ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡಲು ಯಾರೂ ಸಿಗುತ್ತಿಲ್ಲ. ಇಲ್ಲಿ, ಕಾಯಂ ವೈದ್ಯರನ್ನೇ ನೇಮಿಸಬೇಕಾಗಿದೆ.
ಸುಸಜ್ಜಿತ ಆಸ್ಪತ್ರೆ ಎಂದೇ ಹೆಸರಾಗಿರುವ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಸದ್ಯ ಹೆರಿಗೆಯ ಸುಲಭ ಪ್ರಕರಣಗಳನ್ನು ಇತರ ವೈದ್ಯರು ಅನುಭವದ ಆಧಾರದಲ್ಲಿ ಮಾಡುತ್ತಿದ್ದಾರೆ. ಆದಾಗ್ಯೂ ರಿಸ್ಕ್ ಬೇಡವೆಂದು ಗರ್ಭಿಣಿಯರು ಬೇರೆ ಆಸ್ಪತ್ರೆಗೆ ತೆರಳುತ್ತಿದ್ದಾರೆ.
ಎರಡುವರೆ ವರ್ಷಗಳ ಹಿಂದೆ ತಿಂಗಳಿಗೆ 50ರಷ್ಟು ಹೆರಿಗೆ ಪ್ರಕ್ರಿಯೆಗಳು ಉಚಿತವಾಗಿ ನಡೆಯುತ್ತಿದ್ದ ಬಂಟ್ವಾಳದ ತಾಲೂಕು ಮಟ್ಟದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲೀಗ ಏಳೆಂಟು ಮಂದಿಯಷ್ಟೇ ಶಿಶುಗಳ ಜನನವಾಗುತ್ತಿದೆ. ಜನನ ಪ್ರಮಾಣ ಇಳಿಕೆಯಾಗುವುದು ಇದಕ್ಕೆ ಕಾರಣವಲ್ಲ, ಸರಕಾರಿ ಆಸ್ಪತ್ರೆಗೆಂದು ಬರುವ ಬಡವರು, ಬೇರೆ ಆಸ್ಪತ್ರೆ ನೋಡುತ್ತಿದ್ದಾರೆ.
ಸುಸಜ್ಜಿತ ಐಸಿಯು, ಬೆಡ್ ಗಳಿವೆ:
ನೂರು ಬೆಡ್ ಗಳ ಆಸ್ಪತ್ರೆ ಎಂಬ ಹೆಗ್ಗಳಿಕೆಯೊಂದಿಗೆ ಆರು ವರ್ಷಗಳ ಹಿಂದೆ ಪುನರ್ನವೀಕರಣಗೊಂಡ ಬಂಟ್ವಾಳ ಸರಕಾರಿ ಆಸ್ಪತ್ರೆ ಸುಸಜ್ಜಿತವಾಗಿದೆ. ಕಳೆದೆರಡು ವರ್ಷಗಳಲ್ಲಿ ಸುಸಜ್ಜಿತ ಹವಾನಿಯಂತ್ರಿತ ಐಸಿಯು ಘಟಕವಿದೆ. ಕೊರೊನಾ ಸಂದರ್ಭದ ಘಟನೆಗಳು ಮರುಕಳಿಸದೇ ಇರಲಿ ಎಂಬ ಕಾರಣದಿಂದ ಆಮ್ಲಜನಕ ಘಟಕ ನಿರ್ಮಾಣವೂ ಆಗಿತ್ತು.
ಬೇರೆ ಆಸ್ಪತ್ರೆಗೆ ಹೋಗುತ್ತಿದ್ದಾರೆ:
ತಾಲೂಕಿನ ಗ್ರಾಮೀಣ ಭಾಗದ ಮಂದಿ ಹೆರಿಗೆ ಹಾಗೂ ಸ್ತ್ರೀಯರ ಇನ್ನಿತರ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆ ಅಥವಾ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಅಂದಾಜು 60ರಷ್ಟು ಹೆರಿಗೆ ಪ್ರಕರಣಗಳು ಆಗುತ್ತಿದ್ದುದು, ಈಗ 10 ಅಥವಾ 9ಕ್ಕೆ ಇಳಿದಿದೆ. 2022ರ ಆಗಸ್ಟ್ ವರೆಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಅವರು ರಾಜೀನಾಮೆ ನೀಡಿದ್ದರು. ಹೀಗಾಗಿ ಸೆಪ್ಟೆಂಬರ್ ಪ್ರಾರಂಭದಿಂದ (2022) ಇಲ್ಲಿ ವೈದ್ಯರ ಕೊರತೆ ಉಂಟಾಯಿತು. ಆದರೂ ಮಹಿಳೆಯ ಸಂಬಂಧಿಕರ ಒಪ್ಪಿಗೆ ಪಡೆದು, ಇಲ್ಲಿನ ವೈದ್ಯರು ಅನುಭವದ ಆಧಾರದಲ್ಲಿ ಆಸ್ಪತ್ರೆಗೆ ಆಗಮಿಸುವ ವೈದ್ಯಕೀಯ ಕಾಲೇಜುಗಳ ಸ್ತ್ರೀರೋಗ ಪಿಜಿ ವೈದ್ಯರ ನೆರವಿನಿಂದ ಯಶಸ್ವಿಯಾಗಿ ಹೆರಿಗೆ ನಡೆಸಲಾಗುತ್ತಿದೆ. ಆದರೂ ಪೂರ್ಣ ಪ್ರಮಾಣದ ಸ್ತ್ರೀರೋಗ ತಜ್ಞರು ಇಲ್ಲಿಗೆ ಬೇಕು.
ವೈದ್ಯರು ಬರುವವರು ಇಲ್ಲ.ಯಾಕೆ? ಯಾರಿಗೂ ಗೊತ್ತಿಲ್ಲ. ಇದನ್ನು ಸರಿಪಡಿಸುವ ಪ್ರಯತ್ನ ಮೇಲಿನಿಂದ ಆಗಬೇಕಾಗಿದೆ.(ಉದ್ಯೋಗ ಮೇಳದ ಆಯೋಜನೆ ಆಗಬೇಕೋ ಏನೋ.)