ಕಲ್ಲಡ್ಕ ಪ್ಲೈ ಓವರ್ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿ ಬಹುತೇಕ ಮಾರ್ಚ್ ಅಂತ್ಯದಲ್ಲಿ ಕಂಪ್ಲೀಟ್ ಆಗಲಿದ್ದು,ಎಪ್ರಿಲ್ ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಹಿಸಿಕೊಂಡ ಕೆಎನ್.ಆರ್.ಸಿ.ಕಂಪನಿ ತಿಳಿಸಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು.
ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಜೊತೆ ಬಿಸಿರೋಡಿನಿಂದ ಉಪ್ಪಿನಂಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಕಾಂಚನದಲ್ಲಿರುವ ಕೆ.ಎನ್.ಆರ್.ಸಿ.ಕಂಪೆನಿಯ ಪ್ಲಾಂಟ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ಬಿಸಿರೋಡಿನಿಂದ ಪೆರಿಯಶಾಂತಿವರೆಗೆ ಸುಮಾರು 45 ಕಿ.ಮೀ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮಳೆಗಾಲದ ಮೊದಲು ಮುಗಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಭರವಸೆಯನ್ನು ಕಂಪೆನಿ ನೀಡಿದೆ. ಬ್ಲಾಸ್ಟಿಂಗ್ ಸಮಸ್ಯೆ ಇರುವ ಕಡೆ ಮಾತ್ರ ಕಾಮಗಾರಿ ತುಸು ವಿಳಂಬವಾಗಬಹುದು ಬಿಟ್ಟರೆ ಉಳಿದ ಎಲ್ಲಾ ಕಡೆ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ಅವರು ತಿಳಿಸಿದರು.
ಮೆಲ್ಕಾರ್ ಸಮೀಪದ ನರಹರಿ ಹಾಗೂ ನೀರಕಟ್ಟೆ ಎಂಬಲ್ಲಿ ತಡೆಗೋಡೆ ಹಾಗೂ ಬ್ಲಾಸ್ಟಿಂಗ್ ಸಮಸ್ಯೆ ಇದ್ದು ರಸ್ತೆಯ ಕಾಮಗಾರಿಯನ್ನು ಪೂರ್ತಿಗೊಳಿಸುವಲ್ಲಿ ತುಸು ವಿಳಂಬವಾಗಬಹುದು. ಅದು ಬಿಟ್ಟರೆ ಉಳಿದಂತೆ ಎಲ್ಲೂ ಕೂಡ ರಸ್ತೆ ನಿರ್ಮಾಣಕ್ಕೆ ಅಡೆತಡೆಗಳಿಲ್ಲ. ಹೆದ್ದಾರಿ ನಿರ್ಮಾಣದ ವೇಳೆ ಕೆಲವುಕಡೆಗಳಲ್ಲಿ ರಸ್ತೆ ಸಮಸ್ಯೆ, ಮಳೆಗಾಲದಲ್ಲಿ ಜಮೀನಿಗೆ ನೀರು ನುಗ್ಗುವ ಸಮಸ್ಯೆ ,ಕ್ರಾಸಿಂಗ್ ಹೀಗೆ ಇನ್ನಿತರ ಸಣ್ಣಪುಟ್ಟ ವ್ಯತ್ಯಾಸಗಳು ಇವೆ. ಈ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮದ ಬಗ್ಗೆ ಚರ್ಚಿಸುವುದಾಗಿ ಅವರು ತಿಳಿಸಿದರು.
ಆರಂಭದಲ್ಲಿ ಬಿಸಿರೋಡಿನಲ್ಲಿ ನಿರ್ಮಾಣ ಹಂತದಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಪ್ರಮುಖರು ವೃತ್ತದ ಸುತ್ತ ಜಾಗವನ್ನು ಅಗಲೀಕರಣಗೊಳಿಸಿ,ವೃತ್ತದ ಸೌಂದರ್ಯವನ್ನು ಇನ್ನಷ್ಟು ಹೆಚ್ಚು ಮಾಡುವಂತೆ ಮನವಿ ಮಾಡಿದರು.
ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ಪೆರಮೊಗ್ರು, ಉಪ್ಪಿನಂಗಡಿ, ಸುಬ್ರಹ್ಮಣ್ಯ ಕ್ರಾಸ್ , ಕಡೆಗಳಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಹಾಗೂ ಕಲ್ಲಡ್ಕ ದಲ್ಲಿ ಅಂತಿಮ ಹಂತದಲ್ಲಿರುವ ಪ್ಲೈ ಓವರ್ ಕಾಮಗಾರಿ ವೀಕ್ಷಿಸಿದರು.
Be the first to comment on "ಏಪ್ರಿಲ್ ತಿಂಗಳಲ್ಲಿ ಕಲ್ಲಡ್ಕ ಫ್ಲೈಓವರ್ ನಲ್ಲಿ ಓಡಾಡಬಹುದು – ಸಂಸದರಿಗೆ ಗುತ್ತಿಗೆ ಕಂಪನಿ ಭರವಸೆ, – ಬಿ.ಸಿ.ರೋಡ್ ನಿಂದ ಉಪ್ಪಿನಂಗಡಿವರೆಗಿನ ಕಾಮಗಾರಿ ವೀಕ್ಷಿಸಿದ ಸಂಸದ ಕ್ಯಾ. ಚೌಟ"