ಹಳೇ ಅಂಗನವಾಡಿ ಕೇಂದ್ರಗಳನ್ನು ಹೊಸದಾಗಿ ನಿರ್ಮಿಸಿ – ಟಾಪ್ 5 ಬೇಡಿಕೆಗಳು ಇವು

| ಬಂಟ್ವಾಳ, ವಿಟ್ಲ ಸೇರಿ 570 ಕೇಂದ್ರಗಳಿಗೆ ಸುಮಾರು 35 ಸಾವಿರದಷ್ಟು ಫಲಾನುಭವಿಗಳು | ಹಲವೆಡೆ ಶಿಥಿಲ ಕಟ್ಟಡದಲ್ಲಿ ಕಾರ್ಯಾಚರಣೆ, ಪೂರ್ಣ ಅನುದಾನ ಕೊರತೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಗನವಾಡಿ ಕೇಂದ್ರಗಳಿರುವ ತಾಲೂಕು ಎಂದು ಗುರುತಿಸಲ್ಪಟ್ಟಿರುವ ಬಂಟ್ವಾಳ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಆಡಳಿತಾತ್ಮಕ ದೃಷ್ಟಿಯಿಂದ ಎರಡು ವಲಯಗಳನ್ನಾಗಿ ಮಾಡಲಾಗಿದೆ. ಬಂಟ್ವಾಳ ಯೋಜನೆಯಲ್ಲಿ 341 ಅಂಗನವಾಡಿ ಕೇಂದ್ರಗಳಿದ್ದರೆ, ವಿಟ್ಲದಲ್ಲಿ 229 ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಸುಮಾರು 35 ಸಾವಿರದಷ್ಟು ಫಲಾನುಭವಿಗಳನ್ನು ನಿರ್ವಹಿಸಬೇಕಾದ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಒಂದು ಸಮಸ್ಯೆಯಾದರೆ, ಯಾವುದಾದರೂ ಅಂಗನವಾಡಿಯ ಕಟ್ಟಡ ಹಾಳಾದರೆ, ಅದನ್ನು ದುರಸ್ತಿ ಮಾಡಲು ಸಣ್ಣ ಪ್ರಮಾಣದ ಅನುದಾನ ದೊರೆಯುತ್ತದೆಯೇ ವಿನಃ ಮಕ್ಕಳಸ್ನೇಹಿ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿಲ್ಲ.

ತುಂಬೆದಡ್ಕ, ಗುಡ್ಡೆಮನೆ, ಗಂಪದಡ್ಕ, ಬ್ಯಾರಿಪಲ್ಕೆ, ಪಜ್ಜಾಜೆ ಎಂಬಲ್ಲಿ ಇನ್ನೂ ದುರಸ್ತಿ ಕೆಲಸ ಬಾಕಿ ಇದ್ದರೆ, ಮಿತ್ತಳಿಕೆ, ಆಲದಪದವು, ಪಂಜಿಕಲ್ಲು, ಪಿಲಿಮೊಗರು, ಮುಡಿಪು, ಗೋಳಿಪಡ್ಪು, ತೌಡುಗೋಳಿ ಸೇರಿ ಸುಮಾರು 15 ಅಂಗನವಾಡಿ ಕೇಂದ್ರಗಳಲ್ಲಿ ದುರಸ್ತಿಗೆ ಅನುದಾನ ಮಂಜೂರಾಗಿದ್ದರೂ ಕೆಲಸ ಪೂರ್ಣವಾಗಿಲ್ಲ.ಕಳೆದ ಜೂನ್, ಜುಲೈ ತಿಂಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಹಾನಿಗೊಂಡ ಕೇಂದ್ರಗಳಿಗೆ ಮಳೆಹಾನಿ ಪರಿಹಾರದಡಿ ಅನುದಾನ ಬಿಡುಗಡೆಯಾಗಿದ್ದರೂ, ಕೆಲವೆಡೆ ಇನ್ನೂ ಕೆಲಸ ಬಾಕಿ ಇದೆ. ಬಡಗಕಜೆಕಾರು, ಶಂಭೂರು ವ್ಯಾಯಾಮ ಶಾಲೆ ಬಳಿ, ಶುಂಠಿಹಿತ್ಲುವಿನಲ್ಲಿ ಮೇಲ್ಛಾವಣಿ ಸೋರುವ ಸಮಸ್ಯೆ ಇತ್ತು. ಕುಡಂಬೆಟ್ಟು ಗ್ರಾಮದಲ್ಲಿ ಗೋಡೆ ಬಿರುಕುಬಿಟ್ಟು ಹಾನಿಯಾಗಿತ್ತು. ಇಲ್ಲಿ ಶಂಭೂರು, ಕೊಡಂಬೆಟ್ಟುವಿನಲ್ಲಿ ಕೆಲಸ ಆರಂಭವಾಗಿಲ್ಲ. ಅಲ್ಪಮೊತ್ತದ ಅನುದಾನ ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂಬಂತಾಗಿದೆ.

ಹಾವುಗಳು ಬರ್ತವೆ, ಸುರಕ್ಷತೆಯ ಕೊರತೆಯೂ ಇದೆ

ಬಂಟ್ವಾಳ ತಾಲೂಕಿನ ಶಂಭೂರು ವ್ಯಾಯಾಮ ಶಾಲೆ ಬಳಿ ಅಂಗನವಾಡಿ ಕೇಂದ್ರ ಶಿಥಿಲವಾಗಿದ್ದು, ಸದ್ಯ ಸಮೀಪದ ಕಟ್ಟಡವೊಂದಕ್ಕೆ ಸ್ಥಳಾಂತರಗೊಂಡಿದೆ. ಸಜೀಪಮೂಡ ಗ್ರಾಮದ ಪದೆಂಜಿಮಾರ್ ಎಂಬಲ್ಲಿ 30 ಮಕ್ಕಳು ಆಗಮಿಸುತ್ತಾರೆ. ಇಲ್ಲಿ ಹಳೇ ಕಟ್ಟಡ ಅಪಾಯಕಾರಿಯಾಗಿದೆ. ಕೆಲವೊಮ್ಮೆ ಇಲ್ಲಿಗೆ ಹಾವುಗಳೂ ನುಗ್ಗುತ್ತವೆ. ಬಲ್ಲೆಕೋಡಿ ಎಂಬಲ್ಲಿ ಅಂಗನವಡಿ ನಾದುರಸ್ತಿಯಲ್ಲಿದೆ. ಇದು ಹೊಸದಾಗಿ ನಿರ್ಮಾಣವಾದರಷ್ಟೇ ಸರಿಯಾಗಬಹುದು. ಆದರೆ ಇಲ್ಲಿ ಆರ್.ಟಿ.ಸಿ. ಅಂಗನವಾಡಿ ಹೆಸರಿಗೆ ಇಲ್ಲ. 16 ಮಕ್ಕಳು ಇಲ್ಲಿಗೆ ಬರುತ್ತಾರೆ. ಕೋಮಾಲಿ ಎಂಬಲ್ಲಿರುವ ಅಂಗನವಾಡಿ ಕೇಂದ್ರವೂ ದುರಸ್ತಿಗೆ ಕಾದಿದೆ.

ಸಿಡಿಪಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಬಂಟ್ವಾಳ ಸಿಡಿಪಿಒ ಅವರಿಗೆ ವಿಟ್ಲದ ಜವಾಬ್ದಾರಿಯೂ ಇದೆ. ಬಂಟ್ವಾಳ ಕಚೇರಿಯಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ಎರಡು ಹುದ್ದೆಗಳಿದ್ದು, ಎರಡೂ ಖಾಲಿ ಇವೆ. ಪ್ರಥಮ ದರ್ಜೆ ಸಹಾಯಕರು ಆರು ಇರಬೇಕಾಗಿದ್ದು, ಎಲ್ಲವೂ ಖಾಲಿ. ದ್ವಿತೀಯ ದರ್ಜೆ ಸಹಾಯಕರ ಒಂದು ಹುದ್ದೆಯೂ ಖಾಲಿ., ಮೇಲ್ವಿಚಾರಕರ 12 ಹುದ್ದೆಗಳಿದ್ದು, ಅವರ ಪೈಕಿ 6 ಭರ್ತಿಯಾಗಿದೆಯಷ್ಟೇ. ವಾಹನ ಗುಜರಿಗೆ ಹೋಗಿದೆ. ಚಾಲಕರ ಎರಡು ಹುದ್ದೆ ಖಾಲಿ ಇದೆ. ಈಗ ಗುತ್ತಿಗೆ ಆಧಾರದಲ್ಲಿ ವಾಹನ ನಿಯೋಜಿಸಲಾಗುತ್ತಿದೆ. ಗ್ರೂಪ್ ಡಿಯ 5 ಹುದ್ದೆಗಳೂ ಖಾಲಿ ಇವೆ. ಸದ್ಯ ಗುತ್ತಿಗೆ ಆಧಾರದಲ್ಲಿ 5 ಮಂದಿ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅಂದಾಜು 19 ಸಾವಿರದಷ್ಟು ಫಲಾನುಭವಿಗಳನ್ನು ಇವರೆಲ್ಲಾ ಸಂಭಾಳಿಸಬೇಕು.

ಟಾಪ್ 5 ಬೇಡಿಕೆಗಳು

  1. ಅಂಗನವಾಡಿ ಹೇಗೆ ಕಾರ್ಯಾಚರಿಸುತ್ತದೆ ಎಂಬ ಮಾಹಿತಿ ಸಾರ್ವಜನಿಕರಿಗೂ ಇರಬೇಕು
  2. ಮಕ್ಕಳಸ್ನೇಹಿ ಕಟ್ಟಡ, ಕೋಣೆಗಳು ಇರಬೇಕು, ಮಕ್ಕಳಿಗೆ ಟಿ.ವಿ, ಎ.ಸಿ. ಬದಲು ಸುಭದ್ರ ಕಟ್ಟಡ ನೀಡಿ
  3. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳವಾಗಬೇಕು. ಒತ್ತಡರಹಿತ ಕೆಲಸ ಅಗತ್ಯ
  4. ಬಂಟ್ವಾಳ ತಾಲೂಕಿನಲ್ಲಿ 90ರ ದಶಕದಲ್ಲಿ ನಿರ್ಮಾಣಗೊಂಡ ಕಟ್ಟಡಕ್ಕೆ ಪುನಶ್ಚೇತನ ನೀಡಬೇಕು.
  5. ಇಲಾಖೆಗಳ ಸಿಬ್ಬಂದಿ ಭರ್ತಿ ಮಾಡಬೇಕು, ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಅಗತ್ಯ

 

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಹಳೇ ಅಂಗನವಾಡಿ ಕೇಂದ್ರಗಳನ್ನು ಹೊಸದಾಗಿ ನಿರ್ಮಿಸಿ – ಟಾಪ್ 5 ಬೇಡಿಕೆಗಳು ಇವು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*