ವಿಟ್ಲ ಸಮೀಪದ, ಕೊಳ್ನಾಡು ಗ್ರಾಮದ ಪಂಜಿಗದ್ದೆ ನಿವಾಸಿ, ಬಂಗಾರಣ್ಣ ಎಂದೇ ಹೆಸರಾಗಿದ್ದ ಮೈರ ಈಶ್ವರ ಭಟ್ ಅವರು ಜ.4ರಂದು ನಿಧನ ಹೊಂದಿದ್ದು ಅವರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮ ನಡೆಯಿತು.
ಆರೆಸ್ಸೆಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ತನ್ನ ಊರಿಗೆ ಸುಮಾರು ಎರಡು ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದ ಅವರು, ಎಲ್ಲ ಧರ್ಮೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಾವಯವ ಕೃಷಿ ಪರಿಕಲ್ಪನೆಯಲ್ಲಿ ಇಡೀ ಭೂಮಿಯನ್ನು ಬೆಳೆಸಿದರು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಕೊಳ್ನಾಡು ಸುಭಾಶ್ಚಂದ್ರ ಶೆಟ್ಟಿ, ಸ್ಥಳೀಯ ಪ್ರಮುಖರಾದ ಹಸೈನಾರ್, ಯೂಸುಫ್ ತಾಳಿತ್ತನೂಜಿ, ದೇವಪ್ಪ ಗೌಡ ತಾಳಿತ್ತನೂಜಿ ಮಾತನಾಡಿ, ಬಂಗಾರಣ್ಣ ಎಂದೇ ಹೆಸರಾಗಿದ್ದ ಮೈರ ಈಶ್ವರ ಭಟ್ ಅವರು ಜಾತಿ, ಮತ ಎಂಬ ಬೇಧವಿಲ್ಲದೆ ಎಲ್ಲರೊಡನೆ ಬೆರೆಯುತ್ತಿದ್ದು, ಇಲ್ಲಿನ ರಸ್ತೆ ಅಭಿವೃದ್ಧಿಯಾಗಬೇಕು, ಊರು ಬೆಳೆಯಬೇಕು ಎಂಬ ಕನಸನ್ನು ಹೊಂದಿದ್ದರು. ಅವರ ನೆನಪು ಸದಾ ಶಾಶ್ವತ ಎಂದು ಗುಣಗಾನ ಮಾಡಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮೈರ ಈಶ್ವರ ಭಟ್ ಅವರು ತನ್ನ ಪುತ್ರ ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣಶ್ಯಾಮ ಅವರಿಗೆ ಉತ್ತಮ ಸಂಸ್ಕಾರ ನೀಡಿದ ಪರಿಣಾಮ, ಇಂದು ಸಾಮಾಜಿಕ ಬದ್ಧತೆಯ ಕಾಳಜಿಯೊಂದಿಗೆ ಕೆಲಸ ಮಾಡುವಂತಾಗಿದ್ದು, ಪುತ್ರನ ಬೆಳವಣಿಗೆಯಲ್ಲಿ ತಂದೆಯ ಕೊಡುಗೆ ಅಪಾರವಾಗಿದ್ದು, ಅವರಿಗೆ ಶ್ರದ್ಧಾಂಜಲಿ ಎಂದರು.
ಮಾಜಿ ಶಾಸಕಿ ಟಿ. ಶಕುಂತಳಾ ಶೆಟ್ಟಿ, ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಷಿ, ಮಾಣಿ ಶ್ರೀರಾಮಚಂದ್ರಾಪುರ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಮಾತನಾಡಿದರು. ಮಾಧವ ಮಾವೆ, ಮುರಳಿಕೃಷ್ಣ ಹಸಂತಡ್ಕ, ರವೀಶ್ ಶೆಟ್ಟಿ ಕರ್ಕಳ, ಗೋಪಾಲಕೃಷ್ಣ ಹೇರಳೆ, ವೇ.ಮೂ.ಕೇಕಣಾಜೆ ಗಣಪತಿ ಭಟ್, ಸತೀಶ ಪಂಜಿಗದ್ದೆ, ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಸಿಎಫ್ ಒ ಗಣೇಶ್ ಜೆ.ಎಲ್., ಗುರಿಕ್ಕಾರರಾದ ಶ್ರೀಧರ ಕುಕ್ಕೆಮನೆ, ನ್ಯಾಯವಾದಿ ಎಂ.ಆರ್.ಸತ್ಯನಾರಾಯಣ, ಶ್ರೀಪ್ರಕಾಶ್ ಕುಕ್ಕಿಲ, ರಾಮನಾರಾಯಣ ಜೋಷಿ, ಕುಸುಮ ಈಶ್ವರ ಭಟ್, ಮೈರ ಈಶ್ವರ ಭಟ್ಟರ ಪುತ್ರ ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣಶ್ಯಾಮ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ರಾಮಚಂದ್ರಾಪುರ ಮಠದ ಪ್ರೇರಣಾ ತರಬೇತಿ ತಂಡದ ಪರವಾಗಿ, ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ಪರವಾಗಿ ಮತ್ತು ಶ್ರೀ ಅಖಿಲ ಹವ್ಯಕ ಮಹಾಸಭಾದ ಪರವಾಗಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಕಿರಣ್ ಕುಮಾರ್ ತಂಡದಿಂದ ದೇವರನಾಮ ಸಂಕೀರ್ತನೆ ನಡೆಯಿತು. ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಊರಿನ ಅಭಿವೃದ್ಧಿಯ ಕನಸು ಕಂಡಿದ್ದರು ಮೈರ ಈಶ್ವರ ಭಟ್ – ಸಾರ್ವಜನಿಕ ನುಡಿನಮನದಲ್ಲಿ ಗಣ್ಯರ ಅಭಿಮಾನದ ನುಡಿ"