ವಾಹನಗಳು ಸರಾಗವಾಗಿ ಹೋಗಲು ಅನುಕೂಲವಾಗುವಂತೆ ಕಂಡರೂ, ಟ್ರಾಫಿಕ್ ಸಿಗ್ನಲ್ ಇದ್ದರೂ ಮಂಗಳೂರಿನ ನಂತೂರಿನಲ್ಲಿ ಪಡೀಲ್ ಭಾಗದಿಂದ ಬರುವ ವಾಹನಗಳು ಕೆಪಿಟಿ ಕಡೆ ತಿರುಗಲು ಹರಸಾಹಸಪಡಬೇಕು. ಥೇಟ್ ಅಂಥದ್ದೇ ಸ್ಥಿತಿ ಬಿ.ಸಿ.ರೋಡಿನಲ್ಲೂ ಆಗಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ವೇಳೆ ಇದಕ್ಕೊಂದು ಸೂಕ್ತ ಪರಿಹಾರ ದೊರಕಬಹುದು ಎಂಬ ಆಶಾಭಾವನೆ ಹೊಂದಿದ್ದಾರೆ.
ಬಿ.ಸಿ.ರೋಡು ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಬಿ.ಸಿ.ರೋಡಿನ ಸರ್ಕಲ್ ಬಳಿ ನಡೆಯುತ್ತಿರುವ ಕಾಮಗಾರಿಯನ್ನು ಗಮನಿಸುವ ವೇಳೆ ಟ್ರಾಫಿಕ್ ಜಾಮ್‌ನಿಂದ ಈ ಸರ್ಕಲ್ ಕೂಡ ನಂತೂರಿನಂತಾಗುವುದೇ ಎಂಬ ಆತಂಕ ಇದೆ.
ಬಿ.ಸಿ.ರೋಡು ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ ೭೫ಕ್ಕೆ ಬಿ.ಸಿ.ರೋಡು ಕಡೂರು ಹೆದ್ದಾರಿ ಸೇರುತ್ತದೆ. ಬಂಟ್ವಾಳದಿಂದ ಬರುವ ಮಾರ್ಗವೂ ಅಲ್ಲೇ ಸಂಗಮಿಸುತ್ತದೆ. ಮತ್ತೊಂದೆಡೆ ಪಾಣೆಮಂಗಳೂರು ಭಾಗದಿಂದ ಆಗಮಿಸುವ ರಸ್ತೆ ಅಲ್ಲಿ ಸೇರುತ್ತದೆ. ಹೀಗಾಗಿ ಸರ್ಕಲ್ ವ್ಯಾಪ್ತಿಯಲ್ಲಿ ನಾಲ್ಕೂ ಭಾಗದಿಂದಲೂ ವಾಹನಗಳು ವೇಗವಾಗಿ ನುಗ್ಗಿ ತಾವು ಸಾಗಬೇಕಾದ ಹಾದಿಗೆ ತಿರುವು ಪಡೆದುಕೊಳ್ಳುತ್ತದೆ. ಈ ಸಂದರ್ಭ ಅಪಘಾತದ ಭೀತಿಯ ಜತೆಗೆ ಟ್ರಾಫಿಕ್ ಜಾಮ್ ಆಗದಿದ್ದರೆ ಸಾಕು ಎಂಬ ಆಭಿಪ್ರಾಯಗಳು ಕೇಳಲ್ಪಡುತ್ತಿದೆ.
ಕಾಮಗಾರಿ ನಡೆಯುತ್ತಿರುವ ಕಾರಣ ವಾಹನಗಳು ಈಗ ನಿಧಾನಗತಿಯಲ್ಲಿ ಚಲಿಸುತ್ತಿವೆ. ಆದರೆ ಅದು ಪೂರ್ಣಗೊಂಡರೆ, ಮತ್ತೆ ನಿಯಂತ್ರಣ ಕಷ್ಟ. ಈಗಾಗಲೇ ಈ ಸರ್ಕಲ್ ಬಳಿ ಹಲವಾರು ಅಪಘಾತಗಳು ಸಂಭವಿಸಿದ್ದು, ಪ್ರಾಣಹಾನಿಯೂ ಆಗಿದೆ. ಇನ್ನು, ಸರ್ಕಲ್ ಮತ್ತಷ್ಟು ಅಗಲವಾಗಿ ರಸ್ತೆ ಕಿರಿದಾದರೆ, ಒಂದು ಸಣ್ಣ ಅಪಘಾತವಾದರೂ, ಲಾರಿಯಂಥದ್ದು ಕೆಟ್ಟು ನಿಂತರೂ ಹಿಂದೆ ವಾಹನಗಳು ಸಾಲುಗಟ್ಟುವುದು ಗ್ಯಾರಂಟಿ.
ಸರ್ಕಲ್ ನಿರ್ಮಿಸುವ ವೇಳೆ ಹಿಂದೆ, ಮುಂದೆ ರಸ್ತೆ ಅಗಲವಿದ್ದರೆ ಅದರ ಇನ್ನೊಂದು ಪಾರ್ಶ್ವ ಕಾಣಿಸುತ್ತದೆ. ಆದರೆ ಇಲ್ಲಿ ಬಂಟ್ವಾಳದಿಂದ ಆಗಮಿಸುವ ವ್ಯಕ್ತಿ ಬಿ.ಸಿ.ರೋಡ್ ಭಾಗವನ್ನು ನೋಡಲೂ ಆಗದಂಥ ಪರಿಸ್ಥಿತಿ ಇದೆ. ಇನ್ನು ಗಾಣದಪಡ್ಪುವಿನಿಂದ ಬರುವವರು ಅರ್ಧ ಯು ಆಕಾರದಲ್ಲಿ ಸುತ್ತು ಹೊಡೆಯಬೇಕಿದ್ದು, ರಸ್ತೆ ಅಗಲವಾಗದೆ, ಸರ್ಕಲ್ ಇಷ್ಟೊಂದು ದೊಡ್ಡದು ಬೇಕಾಗಿತ್ತಾ ಎಂದು ಪ್ರಶ್ನಿಸುವಂತಾಗಿದೆ. ಕಾಮಗಾರಿ ನಿರ್ವಹಿಸುವ ಸಂಸ್ಥೆ ಒಮ್ಮೆ ಮುಗಿಸಿ ಹೋದರೆ ಬಳಿಕ ಇಲ್ಲಿನ ಜನತೆಗೆ ನಿರಂತರವಾಗಿ ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಭೀತಿ ಸ್ಥಳೀಯರಿಗಿದೆ.
ಬಿ.ಸಿ.ರೋಡಿನಲ್ಲೂ ಬೆಳಗ್ಗೆ ಮತ್ತು ಸಂಜೆ ಈಗಲೂ ಸಣ್ಣ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಶುರುವಾಗಿದೆ. ಒಂದು ರಸ್ತೆ ಬ್ಲಾಕ್ ಆದರೂ, ಅದು ಮುಂದೆ ಎಲ್ಲಾ ರಸ್ತೆಗಳಿಗೂ ವಿಸ್ತರಣೆಗೊಳ್ಳುತ್ತದೆ. ಈಗಲೂ ಕೆಲವೊಂದು ಹೊತ್ತಿನಲ್ಲಿ ಸರ್ಕಲ್ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಮುಂದೆ ಟ್ರಾಫಿಕ್ ಸಿಗ್ನಲ್ ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ವರ್ಷ ಕಳೆದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರ ಈ ಕುರಿತು ಈಗಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಈ ವಾಹನದಟ್ಟಣೆ, ಅವ್ಯವಸ್ಥೆಗೆ ಪೂರಕವಾಗಿ ಬೀದಿ ಬದಿ ವ್ಯಾಪಾರ ನಿರಾತಂಕವಾಗಿ ಇಲ್ಲಿ ನಡೆಯುತ್ತಿದೆ. ಸುರಕ್ಷಿತವಾದ ಜಾಗದಲ್ಲಿ ವ್ಯಾಪಾರ ಮಾಡುತ್ತಾರಾ ಎಂದರೆ ಅದೂ ಇಲ್ಲ. ಇಲ್ಲಿ ಖರೀದಿಗಾಗಿ ವಾಹನಗಳನ್ನು ನಿಲ್ಲಿಸಿದರೂ ಅಪಘಾತ ಅಥವಾ ವಾಹನದಟ್ಟಣೆ ಗ್ಯಾರಂಟಿ. ಅಲ್ಲದೆ, ವಾಹನ ಸವಾರರ ಏಕಾಗ್ರತೆಯನ್ನು ಭಂಗಗೊಳಿಸುವಂತೆ ಫ್ಲೆಕ್ಸ್ ಗಳ ಹಾವಳಿ ಮಿತಿಮೀರುತ್ತಿದ್ದು, ಗಾಳಿ ಮಳೆ ಸಂದರ್ಭ ಇವುಗಳು ಬಿದ್ದು ಸಮಸ್ಯೆ ಉಂಟಾದ ಉದಾಹರಣೆಯೂ ಇದೆ. ಆದರೆ ಇದರಿಂದ ಸಂಬಂಧಪಟ್ಟವರು ಪಾಠ ಕಲಿತಂತಿಲ್ಲ.
ROAD DIVISION AT BCROAD CIRCLE NEAR BANTWAL HAS NARROWED AND AFFECTED TRAFFIC.
Be the first to comment on "ಬಿ.ಸಿ.ರೋಡ್ ಸರ್ಕಲ್ ಬಳಿ ಕಾಮಗಾರಿ ಸಮರ್ಪಕವಾಗದಿದ್ದರೆ ನಂತೂರಿನಂತಾಗುವ ಭೀತಿ"