ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ, ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿ ಸಂಘ ವತಿಯಿಂದ ಸಾಹಿತ್ಯದಿಂದ ಸಾಮರಸ್ಯ ಎಂಬ ಆಶಯದೊಂದಿಗೆ ಆಯೋಜಿಸಲಾದ ಎರಡು ದಿನಗಳ ಬಂಟ್ವಾಳ ತಾಲೂಕು ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಚಿ ಕೊಳ್ನಾಡು ಹೈಸ್ಕೂಲ್ ನಲ್ಲಿ ಶನಿವಾರ ಚಾಲನೆ ದೊರಕಿತು.

ಕುಕ್ಕಾಜೆ ಸಿದ್ಧಿವಿನಾಯಕ ಭಜನಾ ಮಂದಿರದಿಂದ ಹೈಸ್ಕೂಲಿನ ದಿ.ಕನ್ನಡ ಪಂಡಿತ್ ಎ.ಪಿ.ತಿಮ್ಮಯ್ಯನ್ ವೇದಿಕೆಯವರೆಗೆ ವಿವಿಧ ಕಲಾಪ್ರಾಕಾರಗಳೊಂದಿಗೆ ನಡೆದ ಮೆರವಣಿಗೆಯ ಬಳಿಕ ಕನ್ನಡ ಪ್ರಾಧ್ಯಾಪಕಿ ಡಾ. ನಾಗವೇಣಿ ಮಂಚಿ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಾಹಿತ್ಯವೆನ್ನುವುದು ಲೈಕ್ ಮಾಡಿ, ಶೇರ್ ಮಾಡಲು ಅಷ್ಟೇ ಇರುವುದಾ ಎಂದು ಪ್ರಶ್ನಿಸಿದರು. ಫಾರ್ವಾರ್ಡ್ ಮಾಡಿದರೆ ಮುಗೀತು ಎಂಬುದು ಸಾಹಿತ್ಯವಲ್ಲ, ಆರೋಗ್ಯಕರ ಜೀವನವನ್ನು ಸಾಹಿತ್ಯ ಪೋಷಿಸಬೇಕು ಎಂದ ಅವರು, ಪಂಪನ ರಚನೆಗಳಿಂದ ಬಸವಣ್ಣ, ದಾಸರು, ಕುವೆಂಪು ಕೃತಿಗಳವರೆಗೆ ಸಾಹಿತ್ಯ ಸಾರ್ವಕಾಲಿಕ ಸಂದೇಶಗಳನ್ನು ನೀಡುತ್ತದೆ. ಸಾಹಿತ್ಯ ಪ್ರೀತಿಸುವವರು, ಬದುಕನ್ನು ಪ್ರೀತಿಸುವವರು ಎಂದರು.

ಮಂಚಿ, ಕೊಳ್ನಾಡು ಪರಿಸರ ಸಾಕಷ್ಟು ಸಾಧಕರನ್ನು ಸಮಾಜಕ್ಕೆ ಕೊಟ್ಟಿದ್ದು, ಈ ಊರಿನಲ್ಲಿ ಸಾಮರಸ್ಯ ಮೂಡಿಸಲು ಶಿಕ್ಷಕರು ಪ್ರೇರಣೆಯಾಗಿದ್ದಾರೆ ಎಂದು ನೆನಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಳಿಯ ಶಂಕರ ಭಟ್ ಮಾತನಾಡಿ, ಕ್ರಿಯಾಶೀಲತೆ ನಿರಂತರವಾಗಿರಬೇಕು, ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವಿಕೆ ಬೇಕು ಇಂದು ಆಂಗ್ಲ ಪದ ಸೇರಿಸದೆ ಕನ್ನಡ ಮಾತನಾಡಲಾಗದ ನಾವು ಕುಬ್ಜರಾಗುತ್ತೇವೆ  ಬಹುಮಂದಿ ಕವಿವರರು, ಐತಿಹಾಸಿಕ ಕಾದಂಬರಿಕಾರರು ಕನ್ನಡಮ್ಮನ ಗುಣವಿಶೇಷಗಳನ್ನು, ಕನ್ನಡಿಗರ ಜೀವನವನ್ನು, ಕನ್ನಡಿಗರ ಸಾಧನೆಯನ್ನು ನಮ್ಮ ಮುಂದಿರಿಸಿದ ಸಾಕ್ಷಿಯಿದೆ. ಸಾಹಿತ್ಯ ಸಮ್ಮೇಳನಗಳು ನಮ್ಮ ಹಿಂದಿನ ಬರಹಗಾರರು ಕಂಡ ಕನ್ನಡದ ಉಜ್ವಲ ಭವಿಷ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ಪೂರಕ ಭೂಮಿಕೆಗಳಾಗುತ್ತಿವೆ. ಆದರೆ ಅದಕ್ಕಾಗಿ ನಾವು ಬಹಿರಂಗವಾಗಿ ಹೇಗೋ ಹಾಗೆಯೇ ಅಂತರಂಗದಲ್ಲೂ ನಮ್ಮ ಉಸಿರು ಕನ್ನಡವಾಗುವಂತೆ ಪಣತೊಡಬೇಕು ಎಂದು ಹೇಳಿದರು.

ಮನೆ-ಮನೆಯಲ್ಲೂ ಪುಸ್ತಕ ಸಂಗ್ರಹ, ಓದು, ವಿಚಾರ ವಿನಿಮಯ, ಸಂವಾದ, ಕವಿತಾ ವಾಚನ, ಕಥಾ ರಚನೆ ತರಬೇತಿ, ಕವಿತೆಗಳ ರಚನೆ, ಕಾವ್ಯ ವಾಚನ ಮುಂತಾದ ಪ್ರಯತ್ನಗಳನ್ನು ಕಾರ್ಯಗತಗೊಳಿಸಿ ಎಲ್ಲರೂ ಸದಾ ಸಾಹಿತ್ಯ ಪರಿಚಾರಕರಾಗೋಣ. ಬರಹಗಾರರು, ಓದುಗರು, ಸಾಹಿತ್ಯ ಪೋಷಕರು, ಸ್ವಯಂಸೇವಾ ಸಂಸ್ಥೆಗಳು, ಮಕ್ಕಳ ಸಾಹಿತ್ಯ ಪರಿಷತ್ತು ಒಂದೆಡೆ ಕಲೆತು ಸಾಹಿತ್ಯ ಕ್ಷೇತ್ರದ ಆಗು-ಹೋಗುಗಳು, ಸಫಲತೆ-ವೈಫಲ್ಯ, ನವೀನ ಮಾರ್ಗಗಳ ಶೋಧದ ಮೂಲಕ ಸದಭಿರುಚಿಯ ಸಾಹಿತ್ಯ ರಚನೆ-ಪ್ರಸಾರಕ್ಕೆ ಕ್ರಿಯಾಶೀಲರಾಗೋಣ, ಶಾಲೆಗಳಲ್ಲೂ ಸಾಹಿತ್ಯಕ ಚಟುವಟಿಕೆಗಳು ಹೆಚ್ಚು ಹೆಚ್ಚಾಗಿ ಆಯೋಜನೆಯಾಗಲಿ. ಮನೆ-ಮನೆಯಿಂದ ಗ್ರಾಮ-ಹೋಬಳಿ ಮಟ್ಟಕ್ಕೆ ಈ ಜಾಗೃತಿ ತಲುಪುವಂತಾದರೆ ಚೆನ್ನ. ಇಂತಹ ಸಮ್ಮೇಳನಗಳು ಕನ್ನಡ ಸಾಹಿತ್ಯ -ಸಂಸ್ಕೃತಿಯ ಪೂಜೆಗೆ ಭದ್ರ ತಳಹದಿಯಾಗಲಿ ಎಂದು ಹಾರೈಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಾಲಕೃಷ್ಣ ಗಟ್ಟಿ ಶುಭ ಹಾರೈಸಿದರು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ಸಾಹಿತ್ಯದಿಂದ ಒಳ್ಳೆಯ ಭಾವನೆ ಬರಬೇಕು, ಧರ್ಮ ಧರ್ಮ ಪ್ರೀತಿಸುವ ಸಾಹಿತ್ಯ ರಚನೆ ಆಗಬೇಕು ಎಂಬ ಆಶಯ ಸಮ್ಮೇಳದ್ದಾಗಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪೂನಾ ಡಿ.ವೈ.ಪಾಟೀಲ್ ಅಂತಾರಾಷ್ಟ್ರೀಯ ವಿವಿ ಕುಲಸಚಿವ ಡಾ.ಬೀರಾನ್ ಮೊಯ್ದೀನ್, ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ಅಮ್ಟೂರು ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ನೋಯಲ್ ಲೋಬೊ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವಿನಯ್ ಆಚಾರ್ಯ, ಮೂಲ್ಕಿ ತಾಲೂಕು ಅಧ್ಯಕ್ಷ ಮಿಥುನ್ ಉಡುಪ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಮಂಚಿ, ಕಸಾಪ ಗೌರವ ಪ್ರಧಾನ ಕಾರ್ಯದರ್ಶಿಗಳಾದ ವಿ.ಸು.ಭಟ್, ರಮಾನಂದ ನೂಜಿಪ್ಪಾಡಿ, ಕೋಶಾಧಿಕಾರಿ ಡಿ.ಬಿ.ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು.

ವಸ್ತುಪ್ರದರ್ಶನವನ್ನು ಸಂತ ಅಲೋಶಿಯಲ್ ಕಾಲೇಜು ಸಹಪ್ರಾಧ್ಯಾಪಕ ಡಾ. ಮುಕುಂದ ಪ್ರಭು, ಪುಸ್ತಕ ಮಳಿಗೆಯನ್ನು ಉದ್ಯಮಿ ಚಂದ್ರಹಾಸ ರೈ ಬಾಲಾಜಿಬೈಲು ಉದ್ಘಾಟಿಸಿದರು. ರೇಖಾ ವಿಶ್ವನಾಥ ಬಂಟ್ವಾಳ ಪ್ರಸ್ತಾವನೆಯ ನುಡಿಗಳನ್ನಾಡಿದರು. ಸ್ವಾಗತ ಸಮಿತಿ ಪ್ರಧಾನ ಸಂಯೋಜಕ ರಾಮಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವಿ.ಸು.ಭಟ್ ವಂದಿಸಿದರು. ಪುಷ್ಪರಾಜ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*