ಕಂಬಳ ಕ್ಷೇತ್ರದ ಕೋಣಗಳು ಮತ್ತು ಕೋಣಗಳ ಯಜಮಾನರು, ತೆರೆಮರೆಯಲ್ಲಿ ದುಡಿಯುವ ಹಲವರ ಬಗ್ಗೆ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಮುದ್ರಣಗೊಳಿಸಿರುವುದು ಶ್ಲಾಘನೀಯ ಎಂದು ಕಂಬಳದ ಪ್ರಧಾನ ತೀರ್ಪುಗಾರ, ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಗುಣಪಾಲ ಕಡಂಬ ಹೇಳಿದರು.
ಸಿದ್ಧಕಟ್ಟೆ ಅಶ್ವಿನಿ ಸಭಾಂಗಣದಲ್ಲಿ ಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿ ಅವರ ಕಂಬಳ ಲೋಕ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಕೃತಿ ಪರಿಚಯ ಮಾಡಿದರು. ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ಕರ್ಪೆ, ಕಂಬಳ ಕೋಣಗಳ ಮಾಲೀಕರಾದ ಮೂಡುಕೋಣಾಜೆ ಕೊಪ್ಪದೊಟ್ಟು ರಾಘವ ಸುವರ್ಣ, ಕೊಡಂಗೆ ಕಂಬಳದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಪೊಡುಂಬ, ಡಾ.ಪ್ರಭಾಚಂದ್ರ ಜೈನ್, ಕೃಷಿಕ ಲೋಕನಾಥ ಶೆಟ್ಟಿ ಪಮ್ಮುಂಜ, ಕಂಬಳ ತೀರ್ಪುಗಾರ ಸಮಿತಿ ಸಂಚಾಲಕ ವಿಜಯಕುಮಾರ್ ಕಂಗಿನಮನೆ, ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಯೋಗೀಶ್ ಕೈರೋಡಿ, ನಿವೃತ್ತ ಪ್ರಿನ್ಸಿಪಾಲ್ ಸರಸ್ವತಿ ಭಟ್, ಛಾಯಾಗ್ರಾಹಕ ಚಿನ್ನ ಕಲ್ಲಡ್ಕ ಉಪಸ್ಥಿತರಿದ್ದರು.
ಶಿಕ್ಷಕ ಲಕ್ಷ್ಮೀನಾರಾಯಣ ಬೋರ್ಕರ್ ಮುನಿಯಾಲು, ಕಂಬಳದ ಮಾಜಿ ಓಟಗಾರ ಸರಪಾಡಿ ಜಾನ್ ಸಿರಿಲ್ ಡಿಸೋಜ ಯಾನೆ ಅಪ್ಪಣ್ಣ, ಕಂಬಳದ ಹವ್ಯಾಸಿ ಛಾಯಾಗ್ರಾಹಕ ಸುನಿಲ್ ಪ್ರಸಾದ್ ಅವರನ್ನು ಗೌರವಿಸಲಾಯಿತು.
ಹವ್ಯಾಸಿ ಛಾಯಾಗ್ರಾಹಕಿಯಾಗಿರುವ ಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿಯವರ ಛಾಯಾಗ್ರಹಣ ಪ್ರದರ್ಶನಕ್ಕೆ ಕಂಬಳ ಕೋಣಗಳ ಯಜಮಾನರಾದ ಅಲ್ಲಿಪ್ಪಾದೆ ದೇವಸ್ಯ ವಿಜಯ್ ವಿ ಕೋಟ್ಯಾನ್ ಚಾಲನೆ ನೀಡಿದರು. ಸಿದ್ಧಿಶ್ರೀ ಮಹಿಳಾ ಭಜನಾ ಮಂಡಳಿ ಕೊಯ್ಲ ಇಲ್ಲಿನ ಸದಸ್ಯರಿಂದ ದಾಸ ಸಂಕೀರ್ತನೆ ನಡೆಯಿತು. ಗ್ರಾಮೀಣ ಹಾಡು ಹಕ್ಕಿಗಳ ಕಲರವದಲ್ಲಿ ಸಂಕಮ್ಮ ಪ್ರಜಾರಿ ಹಾಗೂ ಕುಸುಮಾವತಿ ಅದ್ಭುತವಾಗಿ ಕಂಬಳ ಸಮಯದ ಸಂಧಿ ಹೇಳಿ ಗಮನ ಸೆಳೆದರು. ಬದ್ಯಾರು ಅಂಗನವಾಡಿ ಪುಟಾಣಿಗಳು ನೃತ್ಯ ಕಾರ್ಯಕ್ರಮ ನೀಡಿದರು. ಗುಬ್ಬಚ್ಚಿಗೂಡು ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಸ್ವಾಗತಿಸಿ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಸಿದ್ಧಕಟ್ಟೆ: ಕಂಬಳ ಲೋಕ ಕೃತಿ ಬಿಡುಗಡೆ, ಛಾಯಾಗ್ರಹಣ ಪ್ರದರ್ಶನ"