ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಆರಂಭಿಸುತ್ತಿದೆ. ಡಿ.23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಈ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ.
ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕಥೆಯಿದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವ ಹೆಣ್ಣಾಗಿ ಮೈತ್ರಿ ನೋಡುಗರ ಮನಸನ್ನು ಆವರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಧಾರಾವಾಹಿಯ ಕತೆಯನ್ನು ಚಿಕ್ಕಮಗಳೂರಿನ ಚೆಂದದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದ್ದು, ‘ನೂರು ಜನ್ಮಕೂ’ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿಯಾಗಿಸುತ್ತದೆ. ಹಾಗಾಗಿ ರೋಚಕ ತಿರುವುಗಳನ್ನು ಪಡೆಯುತ್ತಾ ವೀಕ್ಷಕರನ್ನು ರಂಜಿಸುತ್ತದೆ. ಸಂಬಂಧಗಳು, ಕುಟುಂಬ ನಾಟಕಗಳು ಅದನ್ನು ಮತ್ತಷ್ಟು ರಸವತ್ತಾಗಿಸುತ್ತವೆ. ಉನ್ನತ ಮಟ್ಟದ ಗ್ರಾಫಿಕ್ಸ್ ಹೊಂದಿರುವ ಈ ಧಾರವಾಹಿ ಕನ್ನಡ ಪ್ರೇಕ್ಷಕರ ಮನಸೂರೆಗೊಳಿಸುತ್ತದೆ. ಕನ್ನಡ ಧಾರಾವಾಹಿಗಳಲ್ಲಿ ಅತಿಮಾನುಷ ಶಕ್ತಿಯ ಕತೆಗಳು ಕಡಿಮೆ. ಆ ಕೊರತೆಯನ್ನು ‘ನೂರು ಜನ್ಮಕೂ’ ಸಮರ್ಥವಾಗಿ ತುಂಬಲಿದೆ. ಶ್ರವಂತ್ ರಾಧಿಕಾ ನಿರ್ದೇಶನದ ಈ ಧಾರಾವಾಹಿಯಲ್ಲಿ ಹೆಸರಾಂತ ನಟನಟಿಯರ ದಂಡೇ ಇದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗೀತಾ’ ಧಾರಾವಾಹಿಯಲ್ಲಿ ನಾಯಕ ವಿಜಯ್ ಆಗಿ ನಟಿಸಿದ್ದ ಧನುಷ್ ಗೌಡ ಇದೀಗ ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಚಿರಂಜೀವಿ ಪಾತ್ರದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ.ಮಿಸ್ ಮಂಗಳೂರು ಕಿರೀಟ ಮುಡಿಗೇರಿಸಿಕೊಂಡಿದ್ದ ಶಿಲ್ಪಾ ಕಾಮತ್ ನಾಯಕಿಯಾಗಿ ಮೈತ್ರಿ ಪಾತ್ರದಲ್ಲಿ ನಿಮ್ಮನ್ನು ರಂಜಿಸಲಿದ್ದಾರೆ. ಕಥಾ ನಾಯಕಿ ಮೈತ್ರಿ, ರಾಘವೇಂದ್ರ ಸ್ವಾಮಿ ಭಕ್ತೆ. ಆಶಾವಾದಿ, ಸ್ವಾಭಿಮಾನಿ ಹಾಗೂ ತ್ಯಾಗಮಯಿ. ವಿಶೇಷ ಪಾತ್ರ ಅಂದ್ರೆ, ದೆವ್ವದ ಪಾತ್ರದಲ್ಲಿ ಚಂದನ ಗೌಡ ನಟಿಸುತ್ತಿದ್ದಾರೆ.
Be the first to comment on "ನೂರು ಜನ್ಮಕೂ’ ಧಾರಾವಾಹಿ ಆರಂಭ — ಕಲರ್ಸ್ ಕನ್ನಡದಲ್ಲಿ ವಿವರಗಳು ಇಲ್ಲಿವೆ"