ಇಂದು ಸಮಾಜ ಜಾಗೃತಗೊಳ್ಳಲು ಮಹಿಳಾ ಸಬಲೀಕರಣ ಅಗತ್ಯವಾಗಿದೆ. ಆಧುನೀಕರಣದತ್ತ ಸಾಗುತ್ತಿರುವ ಮಹಿಳೆಯರು ಗ್ರಾಮಸಭೆ ಸಹಿತ ಸಮಾಜದ ಆಗುಹೋಗುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಘಟಕ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಬಂಟ್ವಾಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದಿದ್ದು, ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮಾಜದ ಮುಖ್ಯವಾಹಿನಿಗೆ ಮಹಿಳೆಯರು ಬರಬೇಕು. ಅದೇ ಹೊತ್ತಿನಲ್ಲಿ ನಮ್ಮ ರೋಲ್ ಮಾಡೆಲ್ ಆಗಿರುವ ತಾಯಿ, ತಂದೆಯ ಪ್ರೋತ್ಸಾಹವನ್ನೂ ಪಡೆಯಬೇಕು. ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳು, ಹೇಮಾವತಿ ಹೆಗ್ಗಡೆಯವರ ಕಲ್ಪನೆಯ ಮೂಲಕ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳೀಗ ಫಲ ನೀಡುತ್ತಿವೆ. ಸರಕಾರದಿಂದ ಮಹಿಳೆಯರಿಗೆಂದೇ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಇದನ್ನು ಸದುಪಯೋಗಪಡಿಸಿ, ಅಭಿವೃದ್ಧಿಗೆ ಸಂಬಂಧಿಸಿದ ಸಭೆಗಳಲ್ಲಿ ಮಹಿಳೆಯರು ಪಾಲ್ಗೊಂಡು ತಮ್ಮ ಹಕ್ಕುಗಳನ್ನು ಚಲಾಯಿಸಿ ಎಂದು ಸಲಹೆ ನೀಡಿದರು.
ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ ವಹಿಸಿದ್ದರು. ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಪ್ರಕಾಶ ಕಾರಂತ ನರಿಕೊಂಬು ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಗಟ್ಟಿ ನೆಲೆಗಟ್ಟನ್ನು ಒದಗಿಸಿದೆ ಎಂದರು. ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಮಾತನಾಡಿ, ಧರ್ಮಸ್ಥಳ ಯೋಜನೆಯ ದೂರದೃಷ್ಟಿಯ ಫಲವಾಗಿ ಮಹಿಳಾ ಸ್ವಾವಲಂಬನೆ ಸಾಧ್ಯವಾಗಿದೆ ಎಂದರು.
ನಿವೃತ್ತ ಸಿಡಿಪಿಓ ಗಾಯತ್ರಿ ಕಂಬಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಮಹಾಬಲ ಕುಲಾಲ್, ಒಕ್ಕೂಟದ ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಪ್ರಮುಖರಾದ ಶೇಖರ ಸಾಮಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ನ್ಯಾಯವಾದಿ ಶೈಲಜಾ ರಾಜೇಶ್ ಒತ್ತಡ ನಿರ್ವಹಣೆಯೊಂದಿಗೆ ಯಶಸ್ವಿ ಹೆಜ್ಜೆಯತ್ತ ಮಹಿಳೆ ಎಂಬ ವಿಚಾರ ಮಂಡಿಸಿದರು. ಬಂಟ್ವಾಳ ವಲಯ ಯೋಜನಾಧಿಕಾರಿ ಜಯಾನಂದ ಪಿ. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಘದ ಸದಸ್ಯೆ ಶಾರದಾ ಅನಿಸಿಕೆ ವ್ಯಕ್ತಪಡಿಸಿದರು. ಜ್ಞಾನವಿಕಾಸ ಯೋಜನೆ ಸಮನ್ವಯಾಧಿಕಾರಿ ಶ್ರುತಿ ವಂದಿಸಿದರು. ಮೇಲ್ವಿಚಾರಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Be the first to comment on "ಬಂಟ್ವಾಳ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ: ಮಹಿಳಾ ಸಬಲೀಕರಣಕ್ಕೆ ಯೋಜನೆ ವೇದಿಕೆ: ಮಮತಾ ಗಟ್ಟಿ"