ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ – ಬಣ್ಣದ ಬದುಕು ಕೃತಿ ಮರುಓದು

.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದ ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ – ಬಣ್ಣದ ಬದುಕು: ನಿರೂಪಣೆ: ಪ.ಗೋಪಾಲಕೃಷ್ಣ, ಕರ್ನಾಟಕ ಸಂಘ, ಪುತ್ತೂರು, 575202 (ದ.ಕ.) ಕ್ಯಾರಿಕೇಚರ್ ಬಿಡಿಸಿದವರು: ಹರಿಣಿ…. ಪದ್ಯಾಣ ಗೋಪಾಲಕೃಷ್ಣ ಅವರು ಬರೆದ ಕುರಿಯ ವಿಠಲ ಶಾಸ್ತ್ರೀ ಆತ್ಮಕಥನ ಬಣ್ಣದ ಬದುಕು ಎಂಬ ಕೃತಿಯ ಮರುಓದು. ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಣೆಗಾಗಿ ಅವರ ಪುತ್ರ ಪದ್ಯಾಣ ರಾಮಚಂದ್ರ ನೀಡಿದ್ದಾರೆ. ಇದು ಮೊದಲ ಕಂತು.  ಎರಡನೇ ಕಂತು ಮುಂದೆ ಪ್ರಕಟವಾಗಲಿದೆ.

ಕುಣಿದೇ ಕುಸಿದ ನಟರಾಜ

ಇದು ಕಲಾವಿದನೊಬ್ಬನ ಕಥೆ. ಕಲಾವಿದನ ಕಥೆ ಎಂದ ಕೂಡಲೆ, ವ್ಯಥೆಯ ಅಂಶವೂ ಆ ಕಥೆಯಲ್ಲಿ ಹೆಚ್ಚಾಗಿರುವುದು ಸಹಜ. ಕಲೋಪಾಸಕನ ಆರ್ಥಿಕ ಮುಗ್ಗಟ್ಟು, ಪ್ರೋತ್ಸಾಹದ ಅಭಾವ, ಅವನ  “ಕಥೆಮುಗಿದ ಮೇಲೆ” ಸಿಗುವ ಕೀರ್ತಿ ಇವೆಲ್ಲ ಕಲಾವಿದರ ಕಥೆಗಳ ನಿಯಮಗಳು. ಆದರೆ, ಈ ಕಥೆ, ಆ ನಿಯಮಗಳಿಗೆ ವ್ಯತಿರಿಕ್ತ. ನಮ್ಮ ಕಥಾ ನಾಯಕನಿಗೆ, ತಿಂದುಂಡು ಎಸೆಯುವ ಸಿರಿವಂತಿಕೆ ಇರಲಿಲ್ಲವಾದರೂ ಹೊಟ್ಟೆಪಾಡಿನ ಹುಡುಕಾಟದ ಬಡತನ ಇರಲಿಲ್ಲ. ಕಲಾರಂಗಕ್ಕೆ ಕಾಲಿಟ್ಟ ದಿನದಿಂದ  “ಕೊನೆಯ ದಿನದ ಕುಣಿತ”ದ ವರೆಗೂ ಪ್ರೋತ್ಸಾಹಕ್ಕೆ ಅಭಾವವಿರಲಿಲ್ಲ.

ಕೀರ್ತಿಯಂತೂ  “ನೀನು ಕಣ್ಮರೆಯಾದ ಅನಂತರವೇ ಬರುವೆ” ಎಂದು ಕಾಡಿಸಲಿಲ್ಲ. ಇನ್ನುಳಿದುದು ಆತ್ಮಸಂತೃಪ್ತಿ. ನಿಜವಾದ ಕಲಾಸಾಧಕನಿಗೆ, ಏದೆಂದಾದರೂ ದೊರೆತುದಿದೆಯೆ? ಈ ಕಲಾವಿದ ಮೆರೆಯಬಯಸಿದುದು- ನಾಡ ಕರೆಯ ನೆಲದ ಕಲೆಯಾದ ಯಕ್ಷಗಾನದಲ್ಲಿ.

ಕೀರ್ತಿಯ ಶೃಂಗವನ್ನೇರಿ ಉಳಿದುದೂ- ಯಕ್ಷಗಾನ ಬಯಲಾಟದಲ್ಲಿ.

ಕಲೆ ನಿನಗೇನು ಕೊಟ್ಟಿತು? ನಿನ್ನಿಂದ ಕಲೆಗೆ ಏನು ದೊರೆಯಿತು? ಎಂಬ ಎರಡು ಪ್ರಶ್ನೆಗಳಿಗೂ ಆತನಲ್ಲಿ ಉತ್ತರವಿದೆ. ಈ ಕಲೆಗಾರನ 46 ವರ್ಷಗಳ  “ಕುಣಿತ”ದ ಇತಿಹಾಸ ಕಟ್ಟುಕಥೆಯಲ್ಲ, ನಿಜವಾಗಿ ನಡೆದುದು. ಆತನ ಹೆಸರನ್ನು ಅನಂತರ ಹೇಳೋಣ. ಮೊದಲು ಆ ಜಾನಪದ ಕಲೆಯ ವಿಚಾರ. ಯಕ್ಷಗಾನ ಎಲ್ಲರನ್ನೂ ಸೆಳೆಯುವ ಸೂಜಿಗಲ್ಲಾಗಿದೆ. ಅದು, ಈಗ ಹಾಗಿದೆ. ಹಿಂದೆಯೂ ಹಾಗಿದ್ದಿತಂತೆ. ನಡುವೆ ಒಂದು ಬಾರಿ ಮಾತ್ರ- “ಆಟದ ಮೇಳದವರು ಬಂದರೇ? ಯಾವ ಕರ್ಮಕ್ಕೆ? ಹೂಂ….! ಮನೆ ಬಾಗಿಲಿಗೆ ಬಂದವರನ್ನು ಹೋಗಿ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಒಂದಾಟ ಆಡಿ ಹೋಗಲಿ” ಎಂದು ಹಳ್ಳಿಯ ಹಿರಿಯ ಮನೆಯ ಯಜಮಾನ ಹೇಳುವ ಪರಿಸ್ಥಿತಿಯಾಗಿತ್ತು.

ಅಡ್ಡ ಕಸುಬು

ಮೊದಲನೆಯ ಮಹಾಯುದ್ಧ ಕಳೆದು, ಹಣದ ಬೆಲೆ ಹೆಚ್ಚಿದ್ದ ಕಾಲ ಅದು. ಮುಡಿ ಅಕ್ಕಿಗೆ ಮೂರುವರೆ ರೂಪಾಯಿ… ಇಪ್ಪತ್ತೈದು ಮುಂದಿಯ ತಂಡ ಮೇಳದಲ್ಲಿದ್ದರೆ ಒಂದು ರಾತ್ರಿಯ ಆಟಕ್ಕೆ 12 ರೂ. ‘ವೀಳ್ಯ’ ದ ಸಂಭಾವನೆ ದೊರೆಯುತ್ತಿತ್ತು.  ‘ವೇಷ ಹಾಕುವುದು’ ಕುಲದ ಕಸುಬು ಎನ್ನುವ ಸಂದರ್ಭ ಇರಲಿಲ್ಲ. (ನೆಲವಿದ್ದರೆ) ಬೇಸಾಯ ಮಾಡಿದ ಅನಂತರದ ಆರು ತಿಂಗಳು ಊರು ತಿರುಗುವ ‘ಅಡ್ಡಕಸುಬು’ ಅದಾಗಿತ್ತು.

ಬರಲು ಬಯಸಿದವರಿಗೆ ಕಲೆಯನ್ನು ಕಲಿಸಿಕೊಡುವ ವ್ಯವಸ್ಥೆ- ಅತಿ ವಿಚಿತ್ರವಾಗಿತ್ತು. ವೇಷ-ಭೂಷಣಗಳ ಪೆಟ್ಟಿಗೆಗಳನ್ನು ಹೊರುವ ಕೆಲಸ ಮಾಡಿಕೊಂಡು, ದಿನಕ್ಕೆ ಹತ್ತಿಪ್ಪತ್ತು ಮೈಲು ನಡೆದು ಸಂಜೆಯ ಹೊತ್ತಿಗೆ  ‘ಚಾಕರಿಯಿಂದ ತೃಪ್ತನಾದ’ ಹಿರಿಯ ನಟನ ಕೃಪಾದೃಷ್ಟಿ ಬಿದ್ದರೆ ಕೆಲವು ನರ್ತನದ ತುಣುಕುಗಳ ಶಿಕ್ಷಣ… ಗುರು ಅಮಲಿನಲ್ಲಿದ್ದರೆ ಅದೂ ಇಲ್ಲ.

ಮಾತನ್ನಂತೂ ಹೇಳುವವರಿಲ್ಲ. ವೇಷಧಾರಿಗಳು ರಂಗದಲ್ಲಿ ಆಡುವ ಮಾತುಗಳನ್ನು ಕೇಳಿಯೇ ಕಲಿತುಕೊಳ್ಳಬೇಕು. ಅಲ್ಲಿ ಬರುವ ನುಡಿಗಳಿಗೆ ಅರ್ಧ ಸಂಸ್ಕಾರವೇ ಹೆಚ್ಚು. “ಪಂಚೈವರಾದ ಪಾಂಡವರು…ಈರೇಳು ಹದಿನಾಲ್ಕು ವರ್ಷ….” ಇತ್ಯಾದಿಗಳು ಸರ್ವ ಸಾಮಾನ್ಯ.

ನೃತ್ಯವಾಗಲಿ ಮಾತಿಗಾಗಲಿ- “ಅದು ಏಕೆ ಹಾಗಿದೆ? ಇದೇನು ಹೀಗಿದೆ?” ಎಂದು ಕೇಳುವ ಮಾತಿಲ್ಲ. ಒಂದು ವೇಳೆ ಕೇಳಿದರೂ “ನಡೆದು ಬಂದ ರೂಢಿ ಹಾಗೆ” ಎಂಬ ಉತ್ತರವೇ ಸಿಗುತ್ತಿತ್ತು. ಒಟ್ಟಿನಲ್ಲಿ ಯಕ್ಷಗಾನವನ್ನು ನಿಕೃಷ್ಟವಾಗಿ ಗಣಿಸುವ ಸ್ಥಿತಿಯೇ ಇದ್ದಿತು.

ಇಂದಿಗೆ ಆ ಪರಿಸ್ಥಿತಿ ಬದಲಿದೆ. ಯಕ್ಷಗಾನದ ಎಲ್ಲ ರಂಗಗಳಲ್ಲೂ ಸುಧಾರಣೆಯಾಗಿದೆ. ಸರಕಾರದ ಮತ್ತು ಸರಕಾರಿ ಸಂಸ್ಥೆಗಳ ದೃಷ್ಟಿಯೂ ಯಕ್ಷಗಾನದತ್ತ ಹರಿದಿದೆ.

ಹಿಂದೆ, ಯಕ್ಷಗಾನದ ಬಗ್ಗೆ ತಿಳಿದವರೆನ್ನುವವರು, ತೋರುತ್ತಿದ್ದ ಅದರ ಬರಿಯ ಬಾಯ್ಮಾತಿನ ‘ತಾಳಮದ್ದಳೆ’ಗಷ್ಟೇ ಸೀಮಿತವಾಗಿತ್ತು. ಕುಣಿವವರೆಂದರೆ ಕಡೆಗಣಿಸುವಂತಾಗಿತ್ತು.

ಪರಿಸ್ಥಿತಿಯನ್ನು ಬದಲಾಯಿಸಲು ಚಳವಳಿ- ಆಂದೋಲನಗಳೇನೂ ನಡೆಯಲಿಲ್ಲ. ನಡೆದಿದ್ದ ಸುಧಾರಣೆ ಅವ್ಯಕ್ತವಾಗಿ – ಒಬ್ಬನನ್ನು ಇನ್ನೊಬ್ಬನು ಅನುಕರಿಸುವ ವಿಧಾನದಲ್ಲಿ-ಆಯಿತು. ಒಬ್ಬನು ಮಾಡಿದುದು “ಒಳ್ಳೆಯದೇ ಆಯಿತು” ಎಂದು ಜನರೆಂದಾಗ ಉಳಿದವರೂ ಅದನ್ನೇ ಮಾಡಲು ಆಸೆಪಡುವಂತಾಯಿತು; ಮಾಡುವಂತಾಯಿತು.

“ಒಳ್ಳೆಯದಾಗಬೇಕು” ಎಂದು ಬಯಸಿ ದುಡಿಯಲು ಧುಮುಕಿದ ಆ ‘ಒಬ್ಬ’ನೇ ಈ ಕಥೆಯ ಕಲಾವಿದ.

ಆತನ ಸಮಕಾಲೀನರಾದ ಇತರ ಕೆಲವರೂ ಉತ್ತಮ ಕಲಾವಿದರು. ಅವರೂ “ಇವರನ್ನು ಅನುಕರಿಸಿದರು” ಎನ್ನುವುದು ತುಟಿ ಮೀರಿದ ಮಾತು ಎಂದಾಗಬಹುದು. ಆದರೆ ಅವರು ಕೂಡಾ, ತಮ್ಮ ಪಾತ್ರ ಪ್ರದರ್ಶಗಳನ್ನು ತಿದ್ದಿದ ರೀತಿಯಲ್ಲೇ ಮಾಡತೊಡಗಿದ ಕಾರಣ, ಕಲೆಯ ಮಟ್ಟ ಸುಧಾರಿಸಿತು. ಆ ತಿದ್ದುವಿಕೆಗೆ – ಅವ್ಯಕ್ತವಾಗಿಯಾದರೂ- ಈ ಕಲಾವಿದನೇ ಕಾರಣ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಕಲೆಯ ವಾತಾವರಣ

ಹುಟ್ಟು ಕಲಾವಿದರು ಕೆಲವರಿರುತ್ತಾರೆ. ಹುಟ್ಟಿನಿಂದಾಗಿ ಕಲಾವಿದರಾದವರು ಹಲವರಿದ್ದಾರೆ. ಕಲೆಯ ಮೇಲಿನ  ಪ್ರೀತಿಯಿಂದಾಗಿಯೇ ಈತ ರಂಗಕ್ಕೆ ಬಂದ.

ತಂದೆಗೆ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಇತ್ತು. ಅನುಭವವೂ ಇತ್ತು. ಹುಟ್ಟಿ ಬೆಳೆದ ಮನೆಯೇ ಕಲಾಸಕ್ತರ ಕೂಡು ತಾಣವಾಗಿತ್ತು.

ನಾಲ್ಕು ವರ್ಷದ ಹುಡುಗನಾಗಿರುವಾಗಲೇ ಚಂಡೆ-ಮದ್ದಳೆಗಳ ನಾದಕ್ಕೆ ತಲೆದೂಗಿ ಕೈ ತಟ್ಟುವ, ಹಾಡುಗಾರಿಕೆಗೆ ಕಿವಿಗೊಟ್ಟು, ಅನುಕರಿಸುವ, ಅರ್ಥದ ಹೊಕ್ಕುಗಳನ್ನು ಆಲಿಸುವ-ಅಭ್ಯಾಸ ಆರಂಭವಾಗಿತ್ತು. ಬಾಲ್ಯ ಕಳೆದಂತೆ, ಭಾಷೆ ಬಲಿತಂತೆ, ಮನೆಗಳಲ್ಲೂ, ನೆರೆಯೂರಿನ ಕೂಟಗಳಲ್ಲೂ “ಅರ್ಥದಾರಿ” ಯಾಗಿ ಭಾಗವಹಿಸುವುದೂ ಅಭ್ಯಾಸವಾಯಿತು.

ಒಂದು ದಿನ ಸಂಗೀತ ನಾಟಕಗಳಂತೆಯೇ (ಕುಣಿತವಿಲ್ಲದ- ಆದರೆ ಅಭಿನಯವಿರುವ) ‘ಯಕ್ಷಗಾನ ನಾಟಕ’ಗಳನ್ನು ಆಡಿ ನೋಡಬಾರದೇಕೆ? ಎಂದೆನಿಸಿತು ಹಿರಿಯರಿಗೆ. ಅದೇ ದಿನ ಮನೆ ಬಟ್ಟೆಗಳ ಪರದೆಗಳನ್ನು ಉಪಯೋಗಿಸಿ, ವೇಷಭೂಷಣಗಳನ್ನು ಹೇಗಾದರೂ ಹೊಂದಿಸಿಕೊಂಡು ಪಾರ್ತಿಸುಬ್ಬನ “ಪಂಚವಟಿ”ಯ ಪ್ರಯೋಗ ಮನೆಜಗುಲಿಯಲ್ಲೇ ನಡೆಯಿತು.

ಸುದ್ದಿ ಕೇಳಿ ಕೂಡಿದ್ದ ಜನ, ‘ನಾಟಕ’ವನ್ನು ನೋಡಿದರು; ನೋಡಿ ಮೆಚ್ಚಿದರು. ಈ ಕಲಾವಿದ ಅಂದು ಸೀತೆಯಾಗಿದ್ದ. ನಾಟಕದ ಬಗ್ಗೆ ಜನರ ಪ್ರತಿಕ್ರಿಯೆ ದೊರೆತು ಪ್ರೋತ್ಸಾಹಗೊಂಡ ಹಿರಿಯರು ಊರ ಸಮೀಪದ ದೇವಾಲಯದ ಹೆಸರು ಹೇಳಿ “ಶ್ರೀ ಶಂಕರನಾರಾಯಣ ಪ್ರಸಾದಿತ ಯಕ್ಷಗಾನ ನಾಟಕ ಮಂಡಳಿ, ಕೋಳ್ಯೂರು” ಎಂಬ ಸಂಸ್ಥೆಯನ್ನೇ ಪ್ರಾರಂಭಿಸಿದರು.

ಸಾವಿರಾರು ರೂಪಾಯಿಗಳ ವೆಚ್ಚದಲ್ಲಿ ರಂಗಸಜ್ಜಿಕೆಗಳನ್ನೂ, ವೇಷ-ಭೂಷಣಗಳನ್ನೂ ತಯಾರಿಸಿದರು. ತಮ್ಮ ಗೆಳೆಯರನ್ನೂ, ಮನೆಯ ಕುಟುಂಬದ ಎಳೆಯರನ್ನೂ ಕಲೆಹಾಕಿದರು. ಜಿಲ್ಲೆಯ ಬೇರೆ ಬೇರೆ ಊರುಗಳಲ್ಲಿ  ಪ್ರದರ್ಶನಗಳನ್ನು ಏರ್ಪಡಿಸಿದರು.

ನಮ್ಮ ಕಲಾವಿದ, ಸ್ವಭಾವಿಕವಾಗಿ ಸಂಸ್ಥೆಯಲ್ಲಿ ಗಣನೀಯ ಸ್ಥಾನವನ್ನೇ ಪಡೆದ. ಬೆಳೆದ ಕಲಾವಿದರ ತಂಡಕ್ಕೆ ತೀರ್ಥರೂಪರ ನಿರ್ದೇಶನವೆಂದಾದರೆ, ಎಳೆಯರ ಪಾತ್ರಗಳನ್ನು ನಿರೂಪಿಸಿಕೊಳ್ಳುವ ಹೊಣೆ ಆತನ ಮೇಲೆ ಬಿತ್ತು.

ಸುಮಾರು ಆರು ವರ್ಷಗಳ ಕಾಲ, ನಾಟಕ ಸಂಸ್ಥೆ ನಡೆಯಿತು. ಹೆಸರು ಪಡೆಯಿತು- ಹಣ ಗಳಿಸಲಿಲ್ಲ. ನಾಟಕ ಮಂಡಳಿಯನ್ನು ಮುಚ್ಚುವ ಹೊತ್ತಿಗೆ ಯಕ್ಷಗಾನಕ್ಕಾಗಿ ಆಸ್ತಿಯನ್ನು ‘ಅಡವು’ ಹಾಕಿದವರಲ್ಲಿ ಕಲಾವಿದನ ತೀರ್ಥರೂಪರು ಮೊದಲಿಗರಾದರು.

ಬಣ್ಣದ ಬದುಕಿನ ಬವಣೆಯ ಪರಿಚಯ ಸರಿಯಾಗಿ ಆಯಿತು. ಆದರೂ, ಕಲಾವಿದ ಯಕ್ಷಗಾನಕ್ಕೆ ಕೈ ಮುಗಿಯಲಿಲ್ಲ. ತಾಳಮದ್ದಲೆ ಕೂಟಗಳಲ್ಲಿ ಭಾಗವಹಿಸುವ ಕೆಲಸ ನಡೆದೇ ಇತ್ತು. ಯಕ್ಷಗಾನ ನಾಟಕಗಳ ಸಂಪರ್ಕದಿಂದಾಗಿ, ಪಾತ್ರ ನಿರ್ವಹಣೆಯಲ್ಲಿ ‘ಸ್ವರಭಾರ’ ಇರುತ್ತಿತ್ತು. ಮಾತುಗಳಲ್ಲಿ ಭಾವನಾ ರಸ ಚಿಮ್ಮುತಿತ್ತು.

ನಡುವೆಯೊಂದು ಬಾರಿ, ಕಾರಂತರ ಸಮಯಸ್ಫೂರ್ತಿಯಿಂದಾಗಿ ಹೊಸತೊಂದು “ನೃತ್ಯನಾಟಕ”ಗಳ ಪ್ರಯೋಗವೂ ನಡೆಯಿತು. ಶ್ರೀ ಶಿವರಾಮ ಕಾರಂತರ ಮನೋಧರ್ಮದಂತೆ ಅಳವಡಿಸಿದ ನೃತ್ಯಗಳು- ಯಕ್ಷಗಾನದ ಪ್ರಸಂಗಗಳಿಂದಲೇ ಆಯ್ದ ಭಾಗಗಳು. ಆಗಿನ ಅನುಕೂಲಕ್ಕೆ ತಕ್ಕಂತೆ ಉಳಿದ ವ್ಯವಸ್ಥೆ…. ಆ ತಂಡದಲ್ಲೂ ಈ ಕಲಾವಿದ ಸೇರಿಕೊಂಡ.

ಬೆಂಗಳೂರು, ಹುಬ್ಬಳ್ಳಿ, ಮುಂಬಯಿಗಳ ಪ್ರವಾಸವೂ ಆಯಿತು. ಕಾರಂತರ ಸೂಕ್ಷ್ಮಶಕ್ತಿಯ ಜಾಡನ್ನು ಹಿಡಿಯಲಾರದೆಯೊ ಏನೊ, ಕಲಾವಿದ ಆ ನೃತ್ಯದಿಂದ ಹೆಚ್ಚಿನ ತೃಪ್ತಿ ಪಡೆಯಲಿಲ್ಲ. ತಿರುಗಾಟ ಮುಗಿದ ತರುವಾಯ, ತಿರುಗಿ ಅದೇ ಒಳಗುದಿ. ಆಹ್ವಾನ ಬಂದ ಕೂಟಗಳಲ್ಲಿ (ತಾಳಮದ್ದಳೆ) ಭಾಗವಹಿಸಿದಾಗ ಅರ್ಧ ತೃಪ್ತಿ ; ಆಸೆಯ ಬತ್ತದ ತೊರೆಯ ಸೆಳೆತ.

 ಕುಣಿತ ಇಲ್ಲದ ವೇಷ

ಒಂದು ಶಾಲೆಯಲ್ಲಿ, ಒಂದು ದಿನ ನಡೆದ ಕೂಟದಲ್ಲಿ ಆತ ಕರ್ಣನ ಅರ್ಥಧಾರಿ ಆದ. .ಕರ್ಣಾವಸಾನವಾದಾಗ ಶ್ರಾವಕರ ಕಣ್ಣುಗಳು ತೊಯ್ದಿದ್ದುವು. “ಏನಾದರೂ ಸರಿ- ನೀನು ಬಯಲಾಟದಲ್ಲಿ ವೇಷ ಹಾಕಬೇಕು; ನಿನ್ನಲ್ಲಿ ಹುದುಗಿರುವ ಕಲೆ ಬೆಳಕಿಗೆ ಬರಲೇಬೇಕು” ಎಂದು ಗೆಳೆಯರು ಹುರಿದುಂಬಿಸಿದರು. ಅಲ್ಲಿಂದ ಮನೆಗೂ ಹೋಗದೆ, ಆತ ಕಟೀಲು ದೇವಾಲಯಕ್ಕೆ ಹೋದ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಅಲ್ಲಿನ ಮೇಳ ಹೊರಡುವ ಮೊದಲ ದಿನದ ಸೇವೆ. ಆಟ ನಡೆಯುವ ಮೊದಲು, ಮೇಳದ ಆಡಳಿತವನ್ನು ವಹಿಸಿಕೊಂಡ ಶ್ರೀ ಕಲ್ಲಾಡಿ ಕೊರಗಪ್ಪ ಶೆಟ್ಟಿಯವರನ್ನು ಕಂಡು, ತನ್ನ ಬಯಕೆಯನ್ನು ತಿಳಿಸಿದಾಗ ಅವರು ಕಲಾವಿದನನ್ನು ಮಂಡಳಿಗೆ ಸ್ವಾಗತಿಸಿದರು.

ಗಜ್ಜೆ ಕಟ್ಟಿ ರಂಗ ಪ್ರವೇಶವಾಯಿತಾದರೂ ಕಾಲಿಗೆ ಕುಣಿತ ಬಂದಿರಲಿಲ್ಲ. ಹಾವಭಾವಗಳ ಪ್ರದರ್ಶನ ಅಭಿನಯದಿಂದಲೇ ತೀರಬೇಕಾಯಿತು. ಆದರೆ, ಅಂದಿನ ಅಶ್ವಮೇಧದ ಕೃಷ್ಣನ ಪಾತ್ರವನ್ನು ಕಂಡ ಜನ ಅದನ್ನೇ ಮೆಚ್ಚಿದರು. “ಕುಣಿತವಿಲ್ಲದಿದ್ದರೇನಂತೆ? ಅದರ ಅಭಾವ ನಮಗೇನೂ ಕಾಣಿಸಲಿಲ್ಲ” ಎಂದರು. ಮನೆಯಲ್ಲಿ ಮಾತ್ರ ರಾದ್ಧಾಂತವಾಯಿತು. ನಮ್ಮ ಕುಟುಂಬದಲ್ಲಿ ಯಾರೂ ಮಾಡದಿದ್ದ ಕೆಲಸ ನಿನಗೇಕೆ? ಎಂದು ಹಿರಿಯರು ಹೇಳಿದರು. ಗೌರವವಾಗಿ ಕುಳಿತು ತಾಳಮದ್ದಳೆಯಲ್ಲಿ ಅರ್ಥಹೇಳುವುದನ್ನು ಬಿಟ್ಟು ಹಾಳು ಹಾದಿಯಾಗಿರುವ ಆಟದ ವೇಷ ಕಟ್ಟಬೇಕೆ ? ಎಂದರು. ಹಿರಿಯರ ಮಟ್ಟಿಗೆ ಬಹಳ ಕಷ್ಟದಿಂದ ಸಮಜಾಯಿಷಿ ಆಯಿತು. ಆ ಕಲೆ ಹಾಳಾಗಿದೆ ಎಂದಾದರೆ, ಅದನ್ನು ತಿದ್ದಲೇಬೇಕು ಎಂಬ ನಿರ್ಧಾರವೂ ಕಲಾವಿದನಲ್ಲಿ ಮೂಡಿತು.

ಕುಣಿತವಿಲ್ಲದಿದ್ದರೂ ಕೊರತೆಯಲ್ಲ ಎಂದು ಜನ ಹೇಳಿದ್ದರು. ಮೇಳದ ಮೆನೇಜರ್ ಶ್ರೀ ಶೆಟ್ಟರೂ ಹಾಗೆಂದಿದ್ದರು. ಆದರೆ, ಸಾಧನೆಗೆ ಹೊರಟವನಿಗೆ ಸಂತೃಪ್ತಿಯಾಗಿರಲಿಲ್ಲ. ಮೇಳದ ತಿರುಗಾಟ ಮುಗಿದು, ಮಳೆಗಾಲದಲ್ಲಿ  ಮನೆಗೆ ಬಂದ ಕೂಡಲೆ ಆಗಿನ ಪ್ರಸಿದ್ದ ವೇಷಧಾರಿ ಶ್ರೀ ಕಾವುಗೋಳಿ ಕಣ್ಣನವರನ್ನು ಮನೆಗೇ ಕರೆಸಿ ಯಕ್ಷಗಾನದ ನೃತ್ಯ ಪದ್ಧತಿಯಲ್ಲಿ ಎಲ್ಲ ನಾಟ್ಯಗಳನ್ನೂ ಅಭ್ಯಾಸ ಮಾಡುವ ವ್ಯವಸ್ಥೆಯನ್ನಾತ ಮಾಡಿಕೊಂಡ. ಜೊತೆಗೇ ಸಾಗಿತ್ತು. ಸಾಹಿತ್ಯಾಭ್ಯಾಸ. ಕುಮಾರವ್ಯಾಸ, ಲಕ್ಷ್ಮೀಶರೊಂದಿಗೇ ಕುವೆಂಪು-ಬೇಂದ್ರೆಯವರೂ ಸ್ಫೂರ್ತಿ ಕೊಡತೊಡಗಿದರು. ಪಾರ್ತಿಸುಬ್ಬನ ಮಾಯಾ ಶೂರ್ಪನಖಿಯ ಪಾತ್ರ ಪರಿಶೀಲನೆಯ ಜೊತೆಯಲ್ಲೇ…. ಪುಟ್ಟಪ್ಪನವರ ರಕ್ತಾಕ್ಷಿಯ ಓದುವಿಕೆಯೂ ಆಗುತ್ತಿತ್ತು.ಅಳಸಿಂಗಾಚಾರ್ಯರ ರಾಮಾಯಣದ ಸಂಗ್ರಹದಂತೆ, ಪ್ರಬುದ್ಧ ಕರ್ನಾಟಕದಲ್ಲಿ ಕಾಣುತ್ತಿದ್ದ ‘ಪೌರಾಣಿಕ ಪಾತ್ರಗಳ ವಿಶ್ಲೇಷಣೆ’ಗಳೂ ಪ್ರಿಯವಾದುವು.

ಮೊದಲಿನ ಮೇಳಕ್ಕೆ ಸೇರಿಸಿಕೊಂಡ ಶ್ರೀ ಶೆಟ್ಟರೇ ಮರುವರ್ಷವೂ ಕರೆದರು.

ಸುಧಾರಣೆ

ರೂಢಿಸಿಕೊಂಡ ಅನುಭವ ಹೊಸ ಧೈರ್ಯವನ್ನು ಕೊಟ್ಟಿತು. ಮನಸ್ಸಿನಲ್ಲಿ ಮೂಡಿ ಬೆಳೆದ ಭಾವನೆಗಳು ಹೊರಹೊಮ್ಮುವ ಅವಕಾಶಕ್ಕಾಗಿ ಕಾಯುತ್ತ ಇದ್ದುವು. ಕಟ್ಟುನಿಟ್ಟಿನ ಕಾಲ ಕುಣಿತಕ್ಕೇ ಮೊರೆಹೋಗಬೇಕೆಂದೇನು? ವೇಷ- ಭೂಷಣಗಳಲ್ಲಿ ತಕ್ಕ ಸುಧಾರಣೆ ಮಾಡಿಕೊಂಡರಾಗದೆ? ಎಂಬೆಲ್ಲ ಪ್ರಶ್ನೆಗಳು ಕಲಾವಿದನನ್ನು ಕಾಡತೊಡಗಿದುವು.

ಹಿಂದಿನ ವರ್ಷ ಜನಪ್ರಿಯವಾದ ಪಾತ್ರಗಳನ್ನೇ ತಿದ್ದಿ, ನೃತ್ಯದ ಹೊಸ ಆಕರ್ಷಣೆಯನ್ನೂ ಸೇರಿಸಿದ ಕಾರಣ ಆತನ ಹೆಸರು ಹತ್ತು- ಹಲವು ಕಡೆಗಳಲ್ಲಿ ಕೇಳಿಸತೊಡಗಿತು.ಬಣ್ಣಗಾರಿಕೆಯಲ್ಲೂ ಕೆಲವು ತಿದ್ದುಪಡಿಗಳನ್ನು ಸೂಚಿಸುವ ಧೈರ್ಯ ಬಂದಿತು. ಎಲ್ಲ ಅಂಗಗಳಿಂದಲೂ ಅಭಿನಯವನ್ನು ಹೊಮ್ಮಿಸಲು ಸಾಧ್ಯವಾಗದ ರೀತಿಯ ಪಾತ್ರಗಳಲ್ಲಿ ವೇಷ-ಭೂಷಣಗಳ ಬದಲಾವಣೆಯನ್ನೂ ಮಾಡಬೇಕೆಂದೆನಿಸಿತು.ಸಹೋದ್ಯೋಗಿಯಂತೆ ಸಾದರದಿಂದ ಕಂಡ ಮೇಳದ ವ್ಯವಸ್ಥಾಪಕರು ಸಂಪೂರ್ಣ ಸ್ವಾತಂತ್ರ್ಯವನ್ನೂ ಕೊಟ್ಟರು. ಸಹಕಾರವನ್ನೂ ನೀಡಿದರು.ಕಾವ್ಯಗಳ ವರ್ಣನೆಯಲ್ಲಿ ಕಂಡುಬರುವ ಕೃಷ್ಣ, ಕಲ್ಪನಾಶಕ್ತಿಯಿಂದ ಮೈಗೂಡಿ ಮೆರೆದ.ಭಕ್ತನಾಗಿದ್ದೆನೆಂದು ತಿಳಿದುಕೊಂಡ ಹನುಮಂತ, ಇತರರ ಭಕ್ತಿಯನ್ನೂ ಸೆಳೆಯ ತೊಡಗಿದ.ಫಾಲಾಕ್ಷನಾಗಿದ್ದ ಶಿವ, ಕ್ರೋಧದ ಪರಾಕಾಷ್ಠೆಯಲ್ಲಿ ಜಗತ್ತನ್ನು ಸುಡುವವನಂತೆಯೇ ಕಾಣಿಸಿಕೊಂಡ.

ತೃಪ್ತಿ ಮಾತ್ರ ಸಿಗಲಿಲ್ಲ

ಅವನ  ‘ವೇಷ’ಗಳನ್ನು ಕಾಣಲೆಂದೇ ಜನರು ಆಟ ನೋಡಲು ಬರತೊಡಗಿದರು. ಹೆಸರು ಸಿಕ್ಕಿತು; ಸ್ವಾತಂತ್ರ್ಯ ಸಿಕ್ಕಿತ್ತು. ತೃಪ್ತಿ ಮಾತ್ರ ಸಿಕ್ಕಿರಲಿಲ್ಲ. ಇತರರ ಪ್ರತಿಭೆಯ ಪ್ರಕಾಶನಕ್ಕೆ ಅವಕಾಶ ಕಡಿಮೆಯಾದಾಗ, ಅವರು ಸ್ವಾಭಾವಿಕವಾಗಿ ತಮ್ಮ ಅಸಮಾಧಾನವನ್ನು ತೋರಿದರು. ಆದರೆ ಆಡಳಿತಗಾರರ ನೆಚ್ಚು ಇದ್ದ ವ್ಯಕ್ತಿಯನ್ನು ನೇರಾಗಿ ಎದುರಿಸಲಿಲ್ಲ. ಅವ್ಯಕ್ತವಾಗಿ ಆಡುತ್ತಿದ್ದ  ಹೊಗೆ, ಮುಂದಿನ ವರ್ಷಕ್ಕಾಗುವಾಗ ಸ್ಪಷ್ಟ ಛಾಯೆ ತೋರುವ ಸೂಚನೆ ಕೊಟ್ಟಿತು.

ಇದಕ್ಕೇನು ದಾರಿ? ಎಂದು ಕಲಾವಿದ ಚಿಂತಿಸತೊಡಗಿದ.

ಚಿಂತನೆಯ ಭಾರ ಹೆಚ್ಚಿ, ತಿರುಗಾಟವೇ ಬೇಡವೆನ್ನುವ ಮಟ್ಟಕ್ಕೆ ಬಂತು.ಯಾವ ಮೇಳಕ್ಕೂ ಹೋಗದೆ ಮನೆಯಲ್ಲೇ ಕುಳಿತರೂ ನೃತ್ಯ- ಅಭಿನಯಗಳನ್ನು ತಿದ್ದಿಕೊಳ್ಳುವ ಕೆಲಸ ನಡೆಯುತ್ತಲೇ ಇತ್ತು. ಬಣ್ಣಗಾರಿಕೆಯ ಕುಸುರಿ ಕೆಲಸದ ವಿಚಾರ ವಿಮರ್ಶೆ ಆಗುತ್ತಲೇ ಇತ್ತು.

ಬೇರೆ ಬೇರೆ ಮೇಳಗಳಿಂದ ‘ವೇಷ’ ಮಾಡಬೇಕೆಂದು ಕರೆಯೂ ಬರುತ್ತಲಿತ್ತು.ಹೋಗಿ ಬರುವ ಕೆಲಸ ಆಗುತ್ತಲಿದ್ದಂತೆಯೇ- ತಾನು ಬಯಸಿದಂತೆ ಪಾತ್ರ ನಿರ್ವಹಣೆಯಾಗಬೇಕಾದರೆ, ಸೂತ್ರ ಚಾಲನೆಯ ಹೊಣೆ ಕೂಡಾ ಹೊರಬೇಕಾಗುತ್ತದೆ; ತನಗೆ ಬೇಕಾದಂತೆ ಎಲ್ಲ ಪಾತ್ರಧಾರಿಗಳೂ ನಡೆಯಬೇಕಾದರೆ ತಾನೇ ಆಡಳಿತ ನಡೆಸಬೇಕಾಗುತ್ತದೆ. -ಎಂಬ ಅರಿವು ಮೂಡಿತು. ಹದಿಮೂರು ಜನರಿಗೆ ನೂರಮೂರು ಬುದ್ಧಿ ಇರುವ ಕಾಳಗ ರಂಗ ಅದು ಎಂಬುದನ್ನರಿತೂ, ಅದನ್ನು ತಿದ್ದಿಯೇ ತೀರುವೆ ಎಂದು ಕಲಾವಿದ ನಿರ್ಧರಿಸಿದ.

ಶಿವನ ಒಲವು

ಕಲೆಗಾಗಿ ಕಲೆ ಎಂದು ಭಾವಿಸಿದ್ದರೂ, ಕಲಾವಿದರಿಗಾಗಿಯೂ ಕಲೆ ಇರುತ್ತದೆ ಎಂಬುದನ್ನು ತಿಳಿದಿದ್ದ ಶ್ರೀ ಧರ್ಮಸ್ಥಳದ ದಿ| ಮಂಜಯ್ಯ ಹೆಗ್ಗಡೆಯವರನ್ನು ಕಂಡು ಮಾತನಾಡುವ ಪ್ರಯತ್ನ ನಡೆಸಿದ. ಕಾಲ ಕೂಡಿ ಬಂದಿತ್ತು. ಹೆಗ್ಗಡೆಯವರ ಮನಸ್ಸು ಕಲಾವಿದನ ಬಯಕೆಗೆ ‘ಹೂಂ’ ಎಂದಿತು. ಹೂ ಎತ್ತಿದಷ್ಟು ಸುಲಭವಾಗಿ ಮೇಳ ಕೂಡಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ರೂಪುತಳೆದು ಧರ್ಮಸ್ಥಳದ ದೀಪೋತ್ಸವದ ಕಾಲಕ್ಕೆ ಹೊರ ಬಂದಿತು.

ಸ್ವಯಂ ಪ್ರಭೆಯೂ ಇದ್ದಿತು; ಸರಿಯಾದ ಶಿಷ್ಯವರ್ಗವೂ ದೊರಕಿತು. ಸಹಕರಿಸುವ ಹಿಮ್ಮೇಳವನ್ನೂ ಹೊಂದಿಸಿಕೊಳ್ಳಲಾಯಿತು. ಹತ್ತು-ಹಲವು ಪ್ರಯೋಗಗಳು ನಡೆದುವು. ಹೆಚ್ಚಿನವು ಯಶಸ್ವಿಯಾದುವು. ರಸಪೋಷಣೆ ಎಲ್ಲ ವಿಧದ ಪಾತ್ರಗಳಲ್ಲೂ ಇತ್ತು. ಆದರೆ ನಟರಾಜನಾದ “ಶಿವ”ನ ಒಲವೇ ಹೆಚ್ಚಾಗಿದ್ದಂತೆ ಕೆಲವೊಮ್ಮೆ ಕಂಡುಬರುತ್ತಿತ್ತು. ಗಿರಿಜಾ ಕಲ್ಯಾಣ (ದಕ್ಷಯಜ್ಞ)ದ ಈಶ್ವರ… “ವೇಷವಿದ್ದರೆ ಹೀಗಿರಬೇಕು” ಎಂದು ಹೇಳಿಸಿಕೊಳ್ಳುವಂತಿತ್ತು.

ಒಂದೆರಡು ವರ್ಷಗಳ ತಿರುಗಾಟದ ತರುವಾಯ- ಈಶ್ವರನ ಪಾತ್ರದ ಪೂರ್ಣ ಸೃಷ್ಟಿ ಆಗಲಿಲ್ಲ; ಹೆಚ್ಚಿನ ಕಥೆಗಳಲ್ಲಿ ಸಿಗುವ ಅವಕಾಶ ಸಾಲುವುದಿಲ್ಲ ಎಂದೇ ಮನಸ್ಸಿಗೆ ಅನಿಸಿತ್ತು. ದಾಕ್ಷಾಯಿಣಿಯ ಮರಣವಾರ್ತೆಯನ್ನು ಕೇಳಿದಾಗ- “ಕೆಂಡವೆ ಆಗಲಿ ಲೋಕ! ಬ್ರಹ್ಮಾಂಡಗಳುರಿಯಲಿ ಅನೇಕ!” ಎಂಬ ಪದ್ಯಕ್ಕೆ ಎಷ್ಟು ಹೊತ್ತಾದರೂ ಕುಣಿವೆ ಎಂದೆನಿಸಿತ್ತು. ಆದರೆ ಅವಕಾಶ?

ಶಿವಲಾಸ್ಯವಿರಬೇಕು- ಪ್ರಳಯ ತಾಂಡವವೂ ಬೇಕು- ಇತರರಿಗೆ ಕಲಿಸುವೆ ಎನ್ನುವ ಶಂಕರ ಬುದ್ಧಿಯನ್ನೂ ಕಲಿಯಬೇಕು-

ಹೇಗೆ? ಹೇಗೆ? ಹೇಗೆ?

ತಲೆ ಚಿವುಟಿದರೆ? ಕೈ ಕಚ್ಚಿದರೆ ? ಪ್ರಶ್ನೆಗುತ್ತರ ಸಿಕ್ಕೀತೆ?

ತಲೆ ಚಿವುಟಿ, ಕಪಾಲ ಕೈ ಕಚ್ಚಿದ ‘ಬ್ರಹ್ಮ ಕಪಾಲ’ದ ಕಥೆ ಆಗದೆ?

ಕುಣಿಯುತ್ತಿದ್ದಾಗಲೇ ಬಂದ ಯೋಚನೆ- ಬ್ರಹ್ಮ ಕಪಾಲದ ಪ್ರಸಂಗವನ್ನು ಸಿದ್ಧ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ನೂಕಿತು.

ವಾಗ್ದೇವಿಯ ವರಪ್ರಸಾದವಿದ್ದ ಕವಿ ಶ್ರೀ ವೆಂಕಟರಮಣ ಭಟ್ಟರು (ಅವರು ಈಗ ಇಲ್ಲ) ಸಿಕ್ಕಿದರು. ಕಥೆಯನ್ನು ಕೇಳಿ “ಆ ಪ್ರಸಂಗವಾಗಬೇಕೆ? ಹೇಳುತ್ತೇನೆ-ಬರೆದುಕೊಳ್ಳಿ” ಎಂದು ಬರೆಸತೊಡಗಿದರು; ಎರಡು ದಿನಗಳಲ್ಲೇ ಪ್ರಸಂಗವನ್ನು ಪೂರ್ಣಗೊಳಿಸಿದರು. “ಬ್ರಹ್ಮ ಕಪಾಲ”ದ ಪ್ರದರ್ಶನ ನಡೆಯಿತು. “ಕಪಾಲ” ಕಲಾವಿದನನ್ನು ಕೈ ಬಿಡದೆ ಕುಣಿಸಿತು.

ನ ಭೂತೋ ನ ಭವಿಷ್ಯತಿ….ಎಂದರು ಹಿರಿಯರು.

ಹಿಂದೆ ಕಂಡಿಲ್ಲ- ಮುಂದೆ? ಎಂದು ಕಿರಿಯರು ಪ್ರಶ್ನಿಸಿದರು. ಜನ ತಲೆದೂಗಿದರೂ, ಕೈ ತಟ್ಟಿದರೂ ತಿದ್ದುವ ಅಂಶಗಳಿದ್ದುದನ್ನು ತಿದ್ದಿಕೊಳ್ಳಲೇಬೇಕು ಎನಿಸಿತು. ತಿದ್ದುಪಡಿಗಳೂ ಆದುವು. ಸಾತ್ವಿಕ ಪಾತ್ರಗಳಂತೆ ರಾಕ್ಷಸ ಪಾತ್ರಗಳೂ ಪುಷ್ಟಿಯಾಗಿರುವ ಬೇರೆ-ಬೇರೆ ಪ್ರಸಂಗಗಳ ಆಯ್ಕೆ. ಪಾತ್ರಗಳ ಚಿತ್ರಣದ ಪರಿಪೂರ್ಣತೆಯ ಪ್ರಯತ್ನ-ನೃತ್ಯಕ್ಕೆ ಕಳೆ ತುಂಬುವ ಪ್ರಯೋಗ ನಡೆದೇ ಇದ್ದುವು.

ವರ್ಷಗಳೂ ಉರುಳತೊಡಗಿದುವು. ಬಿಡು ಬಯಲಾಟಗಳಿಗಾಗಿಯೇ ಬಾಯಿ ಬಿಟ್ಟು ಕಾಯುವ ಬದಲು ಡೇರೆ ಹಾಕಿ ಪ್ರವೇಶಧನವಿರಿಸಿ ಆಟವಾಡುವ ಅಭ್ಯಾಸವೂ ಬಂದಿತು. ಹೊಣೆಗಾರಿಕೆ ಹೆಚ್ಚಿತು.

ಪಾದರಸದ ಬುದ್ಧಿ ಇದ್ದಿತು; ನಿಜ. ಪ್ರಾಯ ಹೆಚ್ಚಿ, ದೇಹ ದೃಢವಾಗತೊಡಗಿತ್ತು. ಆರೋಗ್ಯ ಎಂದರೆ “ಅದೇನು?” ಎಂದು ಕೇಳುವ ಕಾಲ ಸಂದುಹೋಗಿತ್ತು. ಆದರೆ ಕಲಾವಿದನಿಗೆ ದೇವರ ಪೆಟ್ಟಿಗೆಯ ಬಳಿ ಕುಳಿತು ಬಣ್ಣಕ್ಕೆ ಕೈ ಸೋಕಿಸಿದಾಗ ಅದು ಮರೆತು ಹೋಗುತ್ತಿತ್ತು.

ಹಳೆಯದಿದ್ದುದು ಇರಲಿ- ಹೊಸತನ್ನೂ ಹುಡುಕಬೇಕು ಎಂದ ಕಲಾವಿದ. ತೆಂಕುತಿಟ್ಟಿನ ಮೇಳಗಳವರು ಹೋಗದೆ ಇದ್ದ ಕಡೆಗಳಿಗೆಲ್ಲಾ ಮೇಳವನ್ನು ಕೊಂಡೊಯ್ದ.

ಜಿಲ್ಲೆಯ ಎಲ್ಲ ಭಾಗಗಳೂ ಆದುವು. ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಿಗೂ ಹೋಗಿ ಬಂದಾಯಿತು. ಮಠಾಧಿಪತಿಗಳೆದುರು ಕುಣಿದಾಯಿತು. ಪಂಡಿತ ಸಮ್ಮೇಳನಗಳಲ್ಲೂ ಪ್ರಸಂಗವಾಯಿತು. ಮಾನಪತ್ರಗಳನ್ನು ಪಡೆಯುವ ಕ್ರಮವೂ ಗೊತ್ತಾಯಿತು.

ದಸರಾ ವಸ್ತುಪ್ರದರ್ಶನಗಳಲ್ಲಿ ಮೂರು ಬಾರಿ ಪ್ರದರ್ಶನ ನಡೆಸಲಾಯಿತು. ರಷ್ಯಾವನ್ನು ಬಿಟ್ಟು ಮೊದಲನೆಯ ಬಾರಿ ‘ಪರದೇಶ ಪ್ರವಾಸ’ ನಡೆಸಿ ಭಾರತಕ್ಕೆ ಬಂದಿದ್ದ ಬುಲ್ಗಾನಿನ್- ಕ್ರುಶ್ಚೇವರ ಕಣ್ಣೆದುರಿಗೂ ‘ದಕ್ಷಯಜ್ಞ’ ನಡೆಯಿತು. (ಬೆಂಗಳೂರು ಲಾಲ್ ಬಾಗಿನಲ್ಲಿ)  ದೆಹಲಿಯಲ್ಲೂ ಪ್ರದರ್ಶನವೀಯುವ ಸಂದರ್ಭ ದೊರಕಿತ್ತು.

ಯಕ್ಷಗಾನಕ್ಕೂ ಬೆಲೆ ಇದೆ ಎಂಬ ಮಾತಿಗೆ ಬೆಲೆ ಬಂದಿತು. ಬುದ್ಧಿ ಕೆಲಸ ಮಾಡುತ್ತಿತ್ತು. ಕಲ್ಪನೆಯ ಶಕ್ತಿ ಮೆರೆಯುತ್ತಿತ್ತು. ಈಶ್ವರನಾಗಿ ಕಂಡಾಗ ಪಾದಕ್ಕೆಅಡ್ಡ ಬಿದ್ದ ಸರಳ ವ್ಯಕ್ತಿಗಳೂ, ಕೃಷ್ಣನಾಗಿ ಕುಣಿದಾಗ ಕುಡಿಗಣ್ಣ ನೋಟಕ್ಕೇ ಮೋಹಗೊಂಡ ಕಾಮಿನಿಯರೂ- ಹಗಲಿನಲ್ಲಿ, ಬಣ್ಣವಿಲ್ಲದಿದ್ದಾಗ ‘ಇವರೇಕೆ ಹೀಗಿದ್ದಾರೆ?’ ಎನ್ನುವಂತಾಗಿತ್ತು.

ತಾಳಗಳ ಪ್ರತಿಯೊಂದು ಮಾತ್ರೆಗಳಿಗೂ ಕುಣಿತ ಚಿಮ್ಮಿಸುವ ಕಾಲುಗಳು, ಸೂರ್ಯನ ಬೆಳಕಿರುವ ಹೊತ್ತಿನಲ್ಲಿ ಸಿಡಿದು ಸೆಟೆದುಕೊಳ್ಳುತ್ತಿದ್ದವು. ರಾತ್ರೆ ಲೀಲಾಜಾಲವಾಗಿ ವಾಕ್ಪ್ರವಾಹ ಹೊರಡಿಸುತ್ತಿದ್ದ ಬಾಯಿ ಹಗಲು ಶ್ವಾಸೋಚ್ಛ್ವಾಸಕ್ಕೂ ಸಹಾಯ ಮಾಡಬೇಕಾಗುತ್ತಿತ್ತು. ಕಲಾರಂಗದ ಹೊರಗಿನ ಜೀವನ, ಅವ್ಯವಹಾರಿಕವೆ? ಎನಿಸಿತ್ತು. ಜಂಜಾಟಗಳಿಗೆ ಜಗ್ಗುತ್ತಿದ್ದರೂ, ಜಗ್ಗಿಲ್ಲವೆಂದು ತೋರಿಸುತ್ತಾ-

“ನನ್ನಿಂದಾದಷ್ಟು ಸಮಯ… ಈ ಜೀವನ ನನ್ನನ್ನು ಕುಣಿಸಿದಷ್ಟು ದಿನವೂ ಕುಣಿಯುತ್ತೇನೆ… ಕುಣಿಯುತ್ತಲಿರುತ್ತೇನೆ….” ಎಂದು ತೀರ್ಮಾನಿಸಿರುವಾಗಲೇ ಗೆಜ್ಜೆಗಳನ್ನು ಕೈಗೆತ್ತಿ ಇಪ್ಪತ್ತೆಂಟು ವರ್ಷಗಳಾಗುತ್ತಾ ಬಂದಿದ್ದುವು.

 ಶಿವ ಕುಸಿದ

ಶಿವನಾಗಿಯೇ ಮೆರೆದ ಕಲಾವಿದನ ಕಲೆ ಮಣಿಪಾಲದ ಬಳಿ ಅವನನ್ನು ಮಣಿಸಿತು. ಆಡುತ್ತಿದ್ದಾಗ ಹೃದಯಕ್ಕೆ ಆಘಾತವಾಯಿತು. ಮನಸ್ಸು ತಡೆಯದಿದ್ದರೂ ದೇಹ ತಡೆಯಿತು. ಕುಣಿಯುತ್ತಿದ್ದ ಶಿವ ಕುಸಿಯುವಂತಾಯಿತು. ಕುಸಿದು ಮಲಗಿದ್ದಲ್ಲಿಂದಲೂ-

“…ಬೇರೆಯವರು ನನ್ನ ವೇಷ ಮಾಡಲಿ, ಆಟವನ್ನು ಮುಂದುವರಿಸಿ….” ಎಂದು ಹೇಳಿ, ತೆರೆ ಸರಿಸಿ ತೆವಳುತ್ತಾ ಚೌಕಿಯನ್ನು ಮುಟ್ಟಿದ ಕಲಾವಿದ ಸ್ಮೃತಿ ತಪ್ಪಿದ.

ಡಾ. ಎಂ. ಆರ್. ಹೆಗ್ಡೆಯವರು ಆತನನ್ನು ಮಣಿಪಾಲದ ಆಸ್ಪತ್ರೆಗೆ ಸಾಗಿಸಿದರು. ಕಲೆಯನ್ನೇ ಅಪ್ಪಿ ಹಿಡಿದ ಮಾರ್ಕಾಂಡೇಯ! ಕಾಲನ ಸೆಣಸಾಟ ಸೋತು ಹೋಯಿತು. ಕೆಲವು ವಾರಗಳ ‘ತೀವ್ರಚಿಕಿತ್ಸೆ’ಯ ತರುವಾಯ- “ದೇಹಕ್ಕೆ ಸಂಪೂರ್ಣ ವಿಶ್ರಾಂತಿ – ಯಾವುದೇ ದೇಹಶ್ರಮಕ್ಕೆ ಪೂರ್ಣ ನಿಷೇಧ”ದ ಆಜ್ಞೆಕೊಟ್ಟು ಮನೆಯ ಕಡೆಗೆ ಡಾಕ್ಟರರು ಕಳುಹಿದರು.

ಕುಣಿತದ ಜೀವನ ಕಣ್ಮರೆಯಾಯಿತು. ಈಗ ಆ ಕಲಾವಿದ ನನ್ನ- ನಿಮ್ಮಂತೆ ‘ಕ್ರಾಪ್’ ಬಿಡಿಸಿರುವ, ನಮ್ಮಲ್ಲಿನ ಕೆಲವರಂತೆ ಕನ್ನಡಕ ಧರಿಸಿರುವ ಸಾಮಾನ್ಯ ಮಧ್ಯಮ ವರ್ಗದ ತೆರಿಗೆದಾರ.

ಅವರು ಯಾರು?

ಮೊನ್ನೆ ಮೊನ್ನೆ- ಹೋಟೆಲೊಂದರ ಜಗುಲಿಯಲ್ಲಿ ನಿಂತಿದ್ದೆ. ಪತ್ರಿಕೋದ್ಯಮಿ ಗೆಳೆಯರೊಬ್ಬರು ಎದುರಾಗಿ ಬಂದರು. “…ಏನಿಲ್ಲಿ ನಿಂತಿದ್ದೀರಿ?” ಎಂದರು.

“ಇವರನ್ನು ಕರೆದುಕೊಂಡು ಡಾಕ್ಟರಲ್ಲಿ ಹೋಗಬೇಕಾಗಿತ್ತು….ಕಾಫಿಯಾಗಲಿ ಎಂದು ಹೊರಟಿದ್ದೇವೆ” ಎಂದೆ; ನನ್ನ ಜೊತೆಯಲ್ಲಿದ್ದ ಅವರತ್ತ ತಿರುಗಿದೆ.

“ಅವರು ಯಾರು?” ಎಂದರು ಆ ಮಿತ್ರರು; ನೆನಪನ್ನು ಕೆದಕಲು ಪ್ರಯತ್ನಿಸಿದರು. “ಕುರಿಯ ವಿಠಲ ಶಾಸ್ತ್ರಿ ಎಂದರೆ ಇವರೇ” ಎಂದೆ. ಶಾಸ್ತ್ರಿಗಳು ಕೈಗಳನ್ನು ಮೆಲ್ಲನೆ ಎತ್ತಿ (ಬಲಗೈ ಎತ್ತಿ ಮಡಚಲು ಕಷ್ಟವಾಗಿದೆ) “ನಮಸ್ಕಾರ” ಎಂದರು.

ಪತ್ರಿಕೋದ್ಯಮಿ ಮಿತ್ರರು ಸ್ತಂಭೀಭೂತರಾದರು. ಶಾಸ್ತ್ರಿಗಳ ಪರಿಚಯ ಅವರಿಗೆ ಚೆನ್ನಾಗಿ ಇದ್ದಿತು. ಆಸ್ವತ್ರೆಗೆ ಸೇರಿದ ನಂತರ ಅವರನ್ನು ಕಂಡಿರಲಿಲ್ಲ, ಗುರುತು ಬದಲಿಸಿತ್ತು. ಮೆಲುದನಿಯಲ್ಲಿ ಏನನ್ನೋ ಹೇಳಿ ಅವರು ಹೊರಟುಹೋದರು. ಬಾಯಿಯಲ್ಲಿ ಅವರು ಹೇಳಲಾರದ ಮಾತುಗಳನ್ನು ಕಣ್ಣುಗಳು ಹೇಳಿದ್ದುವು.

“ವಿಠಲ ಶಾಸ್ತ್ರಿಗಳ ಹೋಲಿಕೆ ನಿಮಗಿದ್ದ ಹಾಗಿದೆ…. ನೀವೂ ಅವರೂ ಸಂಬಂಧಿಕರೆ?” ಎಂದು ಯಾರಾದರೂ ಪ್ರಶ್ನಿಸುವಷ್ಟು ಬದಲಾವಣೆ ಅವರಲ್ಲೀಗ ಆಗಿದೆ.

ಡಾಕ್ಟರರ ಅಪ್ಪಣೆ ಪ್ರಕಾರ- ಮನೆ ಮಂಚದಲ್ಲಿ ಮಲಗಿರುವಾಗಲೂ, ತಾಳಬದ್ಧವಾಗಿ ಮೇಜಿಗೆ ಬೆರಳು ಬಾರಿಸಿದರೆ, ಮಲಗಿದಲ್ಲೇ ಅವರ ಪಾದಗಳು ಲಯಬದ್ಧವಾಗಿ ಅಲುಗಾಡುತ್ತವೆ ಎಂಬುದನ್ನು ಅವರೂ ಗಮನಿಸಿಲ್ಲ.

ಪುರಾಣ ಕಥೆಗಳ ಪಾಠಗಳನ್ನು ಮನೆಮಕ್ಕಳು ಓದಿದರೂ ಸಾಕು. ಪಾತ್ರ ಸೃಷ್ಟಿಯ ಕಲ್ಪನಾಶಕ್ತಿ ಹೆಡೆಯೆತ್ತುತ್ತದೆ. ಯಕ್ಷಗಾನ ಕಲೆ ನಿಮಗೇನು ಕೊಟ್ಟಿತು? ನೀವು ಆ ಕಲೆಗೆ ಏನು ಇತ್ತಿದ್ದೀರಿ? ಎಂಬ ಎರಡು ಪ್ರಶ್ನೆಗಳನ್ನು ನಾನು ಅವರೊಡನೆ ಕೇಳಿದ್ದೇನೆ.

ಮೊದಲನೆಯ ಪ್ರಶ್ನೆಗೆ- ರೂಪಾಯಿ, ಪೈಸೆಗಳ ಹಿನ್ನೆಲೆಯಲ್ಲಿ ಉತ್ತರ ಬೇಕಾದರೆ “ಕೆಲವು ಸಾವಿರಗಳ ಸಾಲ” ಎಂಬ ಉತ್ತರವನ್ನು –ಅವರನ್ನು ಕೇಳದೆಯೇ- ಪಡೆಯಬಹುದು. ಅವರೇ ಕೊಡಬಹುದಾದ ಉತ್ತರಕ್ಕೆ ಇನ್ನೂ ಸ್ವಲ್ಪ ಸಮಯ ಕಾಯಬೇಕು.

ಎರಡನೆಯ ಪ್ರಶ್ನೆಗೆ- ಇರುವ ಉತ್ತರವನ್ನು ಕನ್ನಡ ಕರಾವಳಿ ಕಣ್ಣಾರೆ ಕಂಡಿದೆ. ಅವರ ಮನೆ ಮಾತಿನಲ್ಲಿ ಹೇಳುವಂತೆ “ದೇವರು ಎತ್ತಿಸಿದರೆ” ಒಂದು ಗ್ರಂಥ ರೂಪದ ಉತ್ತರವೂ ಅವರಿಂದ ಬರಬಹುದು. “ಕಾಸರಗೋಡು ತಾಲೂಕಿನ ಪೈವಳಿಕೆ ಗ್ರಾಮದ ಕುರಿಯ ಎಂಬಲ್ಲಿರುವ ವೆಂಕಟ್ರಮಣ ಶಾಸ್ತ್ರಿಗಳ ಪ್ರಥಮ ಪುತ್ರ ವಿಠಲ ಶಾಸ್ತ್ರಿಯವರು ಕ್ರಿಸ್ತಶಕ 1912ನೇ ಸೆಪ್ಟೆಂಬರ್ ತಿಂಗಳ 8ನೇ ತಾರೀಖಿನಂದು ಜನಿಸಿದರು….”

….ಎಂದು ತಿರುಗಿ ಪ್ರಾರಂಭಿಸಬೇಕಾದ ಅವಶ್ಯವಿಲ್ಲವಷ್ಟೆ?

ಈ ಮೊದಲು ರೂಪಿಸಿದುದು ಅವರ ಜೀವನ ಚಿತ್ರ, ಅವರನ್ನು ಬೇರೆಯವರು ಕಂಡಂತೆ.

-ಪ. ಗೋಪಾಲಕೃಷ್ಣ

ಸುಧಾ, ಫೆಬ್ರವರಿ 6, 1966

(ಈ ಲೇಖನ ಮರುಪ್ರಕಟಣೆಗೆ ಪದ್ಯಾಣ ಗೋಪಾಲಕೃಷ್ಣ ಅವರ ಪುತ್ರ ಪ.ರಾಮಚಂದ್ರ ಅನುಮತಿ ನೀಡಿದ್ದು, ಡಿಜಿಟಲ್ ರೂಪದಲ್ಲಿ ಓದುಗರಿಗೆ ಒದಗಿಸಲಾಗಿದೆ)

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ – ಬಣ್ಣದ ಬದುಕು ಕೃತಿ ಮರುಓದು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*