ಬಂಟ್ವಾಳ: ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ ನ 46 ನೇ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಈ ಸಂದರ್ಭ ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಒತ್ತಾಯಿಸಲಾಯಿತು. ಎಐಟಿಯುಸಿ ಸಂಯೋಜಿತ ಎಸ್ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಿ.ಎಸ್.ಬೇರಿಂಜ ಮಾತನಾಡಿ, ಬೀಡಿ ಕಾರ್ಮಿಕರಿಗೆ ಕನಿಷ್ಟ ವೇತನ 5 ವರ್ಷಕ್ಕೊಮ್ಮೆ ಪರಿಷ್ಕರಣೆಯಾಗಿ ಜಾರಿಗೆ ಬರಬೇಕಾದುದು ರೂಢಿ. ಆದರೆ ಇದೀಗ 5 ವರ್ಷ ಕಳೆದರೂ ಮಾಲೀಕರು ಕನಿಷ್ಠ ವೇತನ ಜಾರಿಗೊಳಿಸುವ ಬಗ್ಗೆ ಕರೆದ ಪ್ರಮುಖ ಸಭೆಗಳಲ್ಲಿ ಆಸಕ್ತಿ ತೊರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಮುತುವರ್ಜಿ ವಹಿಸಿ ಕನಿಷ್ಟ ವೇತನ ಅತೀ ಶೀಘ್ರ ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಳಪೆ ಗುಣಮಟ್ಟದ ಕಚ್ಚಾ ಸಾಮಾಗ್ರಿಗಳನ್ನು ವಿತರಿಸಿ ಬೀಡಿ ತಯಾರಿಸುವಾಗ ಆಗುವ ನಷ್ಟವನ್ನು ಕಾರ್ಮಿಕರಿಂದಲೇ ವಸೂಲಿ ಮಾಡುವ ಪದ್ಧತಿ ವಿರುದ್ಧ ಬೀಡಿ ಕಾರ್ಮಿಕರು ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್‌ಮ ಬೀಡಿ ಕಾರ್ಮಿಕರು ತಮ್ಮ ಐತಿಹಾಸಿಕ ಹೋರಾಟಗಳಿಂದ ಗಳಿಸಿಕೊಂಡ ಕಾನೂನುಗಳನ್ನು ಕಸಿದುಕೊಳ್ಳು ಸರಕಾರ ಹವಣಿಸುತ್ತಿದೆ ಎಂದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ವಿ.ಕುಕ್ಯಾನ್ ಮಾತನಾಡಿ ಬೀಡಿ ಕಾರ್ಮಿಕರಿಗೆ ತಮ್ಮ ಪರವಾಗಿ ಧ್ವನಿ ಎತ್ತಲು ದುಡಿಯುವ ವರ್ಗದ ಪ್ರತಿನಿಧಿಯೊಬ್ಬನನ್ನು ಶಾಸನ ಸಭೆಗೆ ಕಳುಹಿಸುವ ಸಾಮರ್ಥ್ಯ ಇದೆ ಎಂದರು.
ಸಿಪಿಐ ಪಕ್ಷ ಶತಮಾನೋತ್ಸವ ಯಶಸ್ವಿಗೊಳಿಸಲು ಈ ಸಂದರ್ಭ ತೀರ್ಮಾನಿಸಲಾಯಿತು. ಮಹಾಸಭೆಯನ್ನುದ್ದೇಶಿಸಿ ಬೀಡಿ ಎಂಡ್ ಟೊಬೆಕ್ಕೋ ಲೇಬರ್ ಯೂನಿಯನ್ ಮಂಗಳೂರು ನ ಕೋಶಾಧಿಕಾರಿ ಎಂ.ಕರುಣಾಕರ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಶಂಭೂರು ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಉಮಾವತಿ ಕುರ್ನಾಡು ವಹಿಸಿದ್ದರು. 2023-24 ನೇ ಸಾಲಿನ ಚಟುವಟಿಕಾ ವರದಿ ಮತ್ತು ಲೆಕ್ಕ ಪತ್ರವನ್ನು ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಮಂಡಿಸಿದರು. ಕನಿಷ್ಠ ವೇತನ ತುಟ್ಟಿಭತ್ತೆ ನಿರ್ಣಯ ಸೇರಿದಂತೆ ಸುಮಾರು ಹತ್ತು ಹಲವಾರು ಪ್ರಮುಖ ಬೇಡಿಕೆಗಳ ನಿರ್ಣಯ ಮಂಡಿಸಲಾಯಿತು.
2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಅಧ್ಯಕ್ಷರಾಗಿ ಉಮಾವತಿ ಕುರ್ನಾಡು, ಉಪಾಧ್ಯಕ್ಷರುಗಳಾಗಿ ಸೀತಾ ಅನಂತಾಡಿ, ಭಾರತಿ ಪ್ರಶಾಂತ್, ಕುಸುಮ ಕಳ್ಳಿಗೆ, ರೇವತಿ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಸಹಕಾರ್ಯದರ್ಶಿಗಳಾಗಿ ಶಮಿತಾ, ಮಮತಾ. ಮೋಹಿನಿ ಬಿಸಿರೋಡು. ಯಶವಂತಿ ಚೇಳೂರು ಹಾಗೂ ಕೋಶಾಧಿಕಾರಿಯಾಗಿ ಬಿ.ಶೇಖರ್ ಅವರುಗಳು ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ವಂದಿಸಿದರು.
Be the first to comment on "ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಎಐಟಿಯುಸಿ ಒತ್ತಾಯ"