ಬಿ.ಸಿ.ರೋಡ್ ಬಸ್ ನಿಲ್ದಾಣ ಈಗ ಅಲೆಮಾರಿಗಳ ಅಡ್ಡೆಯಾಗುತ್ತಿದೆಯಾ? ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಹಾಗೆ ಕಾಣಿಸುತ್ತದೆ. ಬಿ.ಸಿ.ರೋಡ್ ನಲ್ಲಿ ಪುರಸಭೆ ವತಿಯಿಂದ ಕಟ್ಟಿಸಲಾದ ಪ್ರಯಾಣಿಕರ ತಂಗುದಾಣ ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗಗಳ ಬಸ್ಸುಗಳಲ್ಲಿ ಸಾಗುವವರಿಗೆಂದು ಇದೆ. ಇಲ್ಲಿ ಶುಚಿತ್ವದ ಪ್ರಶ್ನೆಯೇ ಇಲ್ಲ. ಸೂರ್ಯ ನಡುನೆತ್ತಿಗೆ ತಲುಪುತ್ತಿದ್ದಂತೆ ಅಲೆಮಾರಿಗಳು ಠಳಾಯಿಸುತ್ತಾರೆ. ಅಲ್ಲೇ ಗೊರಕೆ ಹೊಡೆಯುತ್ತಾರೆ. ಯಾರೂ ಹೇಳುವವರು, ಕೇಳುವವರು ಇಲ್ಲ.
ಬೆಂಚ್ ಕಟ್ಟಿಕೊಟ್ಟರೂ ಪ್ರಯೋಜನ ಆಗಿಲ್ಲ:
ಪ್ರಯಾಣಿಕರು ತೊಂದರೆಗೊಳಗಾಗಬಾರದು ಎಂಬ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಗಳು ಇಲ್ಲಿ ಫ್ಯಾನ್ ಅಳವಡಿಸಿವೆ. ಕುಡಿಯುವ ನೀರಿನ ಘಟಕವನ್ನು ಕೊಡಲಾಗಿದೆ. ಏನು ಬೇಕೋ ಎಲ್ಲವನ್ನೂ ಕೊಟ್ಟರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡಲು ಪ್ರಯಾಣಿಕರು ಪ್ರಯತ್ನಿಸಿದರೆ, ಶುಚಿತ್ವದ ಸಮಸ್ಯೆ ಕಾಡುತ್ತದೆ. ಕಂಡಕಂಡಲ್ಲಿ ಉಗುಳುವ ಪ್ರವೃತ್ತಿ ಹೆಚ್ಚಾಗಿ ಇಲ್ಲಿ ಕಾಣುತ್ತದೆ. ಹಾಗೆ ನೋಢಿದರೆ, ಇಲ್ಲಿ ವಾಣಿಜ್ಯ ಸಂಕೀರ್ಣದಲ್ಲಿ ವ್ಯಾಪಾರಿ ಮಳಿಗೆಗಳು ಇದ್ದರೆ, ಎರಡು ಕಡೆ ಮಾತ್ರ ಪ್ರಯಾಣಿಕರು ನಿಲ್ಲಲು ಅವಕಾಶವಿದೆ. ಉಳಿದಂತೆ ಅಂಗಡಿ, ಮಳಿಗೆಗಳ ಮುಂಭಾಗವೇ ಜನ ನಿಲ್ಲುತ್ತಾರೆ. ಅಲ್ಲೂ ಗುಟ್ಕಾ ಪ್ಯಾಕೆಟ್, ಉಗುಳಿದ ಜೊಲ್ಲು, ಕಫಗಳು ಎದ್ದು ಕಾಣುತ್ತವೆ. ಅಂಗಡಿಯಲ್ಲಿ ಹಣ್ಣು ತಿಂದು ಅದರ ಸಿಪ್ಪೆಗಳನ್ನು ಹಾಗೆಯೇ ಎಸೆಯುವ ಅರ್ಜಂಟು ಮನುಷ್ಯರೂ ಇದ್ದಾರೆ. ಆದರೆ ಇಡೀ ಬಸ್ ನಿಲ್ದಾಣದಲ್ಲ ಎದ್ದು ಕಾಣಿಸುವ ಜಾಗ ಪ್ರಯಾಣಿಕರು ಕುಳಿತುಕೊಳ್ಳಲೆಂದು ಹಾಕಲಾದ ಬೆಂಚುಗಳು. ಅದು ಅಲೆಮಾರಿಗಳ ಕಾಯಂ ಅಡ್ಡೆಯಾದಂತಿದೆ. ಕುಡಿದು ಟೈಟ್ ಆಗಿ ಅಲ್ಲಿ ಠಳಾಯಿಸುವುದು, ಅಲ್ಲೇ ಬೀಳುವುದು, ಬಟ್ಟೆಯನ್ನು ಸರಿಯಾಗಿ ಹಾಕದೆ, ಮಹಿಳೆಯರ ಎದುರು ನಿಲ್ಲುವ ವಿಚಿತ್ರ ಜೀವಿಗಳೂ ಅಲ್ಲಿ ಕಾಣಿಸಿಕೊಳ್ಳುತ್ತಾರೆ. ಒಮ್ಮೆ ಓಡಿಸಿದರೆ, ಮತ್ತೊಮ್ಮೆ ಪ್ರತ್ಯಕ್ಷರಾಗುತ್ತಾರೆ.
Be the first to comment on "ಬಸ್ ನಿಲ್ದಾಣದ ಬೆಂಚಲ್ಲಿ ಹಾಯಾಗಿ ನಿದ್ದೆ!!!, ಅಲೆಮಾರಿಗಳ ಅಡ್ಡೆಯಾಗುತ್ತಿದೆಯಾ ಬಿ.ಸಿ.ರೋಡ್ ನಿಲ್ದಾಣ?"