99 ಕೋಟಿ ರೂ ವೆಚ್ಚದಲ್ಲಿ ಕಾಪುವಿನಲ್ಲಿ ಭವ್ಯವಾದ ಮಾರಿಕಾಂಬಾ ದೇವಸ್ಥಾನ ನಿರ್ಮಾಣವಾಗಲಿದ್ದು, ಇದರ ಬ್ರಹ್ಮಕಲಶಾದಿ ಕಾರ್ಯಕ್ರಮಗಳು ಫೆಬ್ರವರಿ 25ರಿಂದ ಮಾರ್ಚ್ 5ರವರೆಗೆ (2025) ನಡೆಯಲಿವೆ. ಈ ಸಂದರ್ಭ, ಕ್ಷೇತ್ರದ ಅಭಿವೃದ್ಧಿ ಹಾಗೂ ಲೋಕಕಲ್ಯಾಣಾರ್ಥವಾಗಿ ನವದುರ್ಗಾ ಲೇಖನ ಯಜ್ಞ ನಡೆಯಲಿದೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ ವತಿಯಿಂದ ಕಾಪುವಿನ ಶ್ರೀ ಮಾರಿಯಮ್ಮ ಕ್ಷೇತ್ರದ ಸಾನಿಧ್ಯವೃದ್ಧಿಗಾಗಿ ನವವಿಧದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿಕಾಯಾಗ ಇದರಲ್ಲೊಂದಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಇದರ ಮೂಲಕ ನವದುರ್ಗಾ ಲೇಖನ, ಯಜ್ಞದಲ್ಲಿ ಸಂಕಲ್ಪಪೂರ್ವಕ ಭಾಗಿಯಾಗಲು ಸಾಧ್ಯವಿದೆ ಎಂದು ಯಜ್ಞ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಹೇಳಿದರು.
ಬಂಟ್ವಾಳ ತಾಲೂಕು ಮಟ್ಟದ ಸಮಿತಿ ರಚನೆ ಸಂದರ್ಭ ಈ ಕುರಿತು ಶನಿವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಲೇಖನ ಯಜ್ಞದಲ್ಲಿ ಭಾಗಿಯಾದವರು, ಅಕ್ಟೋಬರ್ 29ರಂದು ನಡೆಯಲಿರುವ ವಾಗೀಶ್ವರಿ ಪೂಜೆಯಂದು ಪುಸ್ತಕ ಪಡೆದುಕೊಂಡು, 45 ದಿನಗಳ ಒಳಗಾಗಿ ಪುಸ್ತಕವನ್ನು ಸಾನಿಧ್ಯಕ್ಕೆ ತಲುಪಿಸಿ, ಫೆ.4, 2025ರಂದು ನಡೆಯಲಿರುವ ನವಚಂಡಿಯಾಗದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
99999 ಭಕ್ತರು ಸೇರಿ ಒಂಭತ್ತು ದಿನ ದಿನಕ್ಕೆ 9 ಬಾರಿ ನದುರ್ಗೆಯರ ಹೆಸರು ಬರೆದು, ಕಾಪುವಿನ ಅಮ್ಮನ ಹೆಸರಿನೊಂದಿಗೆ ಮುಕ್ತಾಯ ಮಾಡುವುದು, ಒಂಭತ್ತು ದಿನಗಳವರೆಗೆ ನವದುರ್ಗೆಯರ ಲೇಖನ ಬರೆದು, ಕೊನೆ ಪುಟದಲ್ಲಿ ತಮ್ಮ ಹೆಸರು, ರಾಶಿ, ನಕ್ಷತ್ರ ಮತ್ತು ವಿಳಾಸ ಹಾಗು ಮೊಬೈಲ್ ಸಂಖ್ಯೆ ನಮೂದಿಸಿ, ಕಾಪುವಿನ ಅಮ್ಮನನ್ಉ ನೆನೆದು ಒಂಭತ್ತನೇ ದಿನಕ್ಕೆ ಮುಕ್ತಾಯಗೊಳಿಸುವುದು. ತಾವು ಬರೆದ ಪುಸ್ತಕ ಹಾಗೂ ತೆಗೆದಿಟ್ಟ 9 ಮುಷ್ಠಿ ಅಕ್ಕಿಯನ್ನು ಹಾಗೂ ಶಿಲಾಸೇವೆಯೊಂದಿಗೆ ಕಾಪುವಿನ ಅಮ್ಮನ ಸನ್ನಿಧಾನಕ್ಕೆ ಸಮರ್ಪಣೆ ಮಾಡಬೇಕು ಎಂದರು.
ಸಮಿತಿಯಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಪುರುಷೋತ್ತಮ ಭಂಡಾರಿ ಅಡ್ಯಾರ್, ಸಂಚಾಲಕರಾಗಿ ಮನೀಶ್ ರೈ, ಕೃಷ್ಣ ಶೆಟ್ಟಿ ತಾರೆಮಾರ್, ಅಶ್ವತ್ಥಾನ ಹೆಗ್ಡೆ, ಪ್ರದೀಪ್ ಆಳ್ವ ಕದ್ರಿ, ಸಂತೋಷ್ ಶೆಟ್ಟಿ ಶೆಡ್ಡೆ, ಅಶ್ವಿತ್ ಸುವರ್ಣ, ಬಾಲಕೃಷ್ಣ ಕೊಟ್ಟಾರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದು, ಬಂಟ್ವಾಳ ತಾಲೂಕಿನಲ್ಲಿ ಸಮಿತಿಯ ಸಂಚಾಲಕರಾಗಿ ತಾರಾನಾಥ ಕೊಟ್ಟಾರಿ ಹಾಗು ಮಣಿಮಾಲಾ ಶೆಟ್ಟಿ ಕಾರ್ಯನಿರ್ವಹಿಸುತ್ತಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಪುರುಷೋತ್ತಮ ಭಂಡಾರಿ ಅಡ್ಯಾರ್ ಸಹಿತ ಸಂಚಾಲಕರು, ತಾಲೂಕಿನ ನಾನಾ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ತಾಲೂಕು ಸಂಚಾಲಕ ತಾರಾನಾಥ ಕೊಟ್ಟಾರಿ ಸ್ವಾಗತಿಸಿ ವಂದಿಸಿದರು.
Be the first to comment on "ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ನವದುರ್ಗಾ ಲೇಖನ ಯಜ್ಞ ಕುರಿತ ಮಾಹಿತಿ, ಸಮಿತಿ ಸಭೆ"