ಸೆ.26ರಿಂದ ಲೇಖನಿ ಸ್ಥಗಿತ ಮುಷ್ಕರ, ಗ್ರಾಮಾಡಳಿತಾಧಿಕಾರಿಗಳ ಎಚ್ಚರಿಕೆ, ಮನವಿಯಲ್ಲೇನಿದೆ?

ಬಂಟ್ವಾಳ: ಸೆಪ್ಟೆಂಬರ್ 26ರಿಂದ ಅನಿರ್ದಿಷ್ಟಾವಧಿ ಲೇಖನಿ ಸ್ಥಗಿತ ಮುಷ್ಕರ ನಡೆಸುವುದಾಗಿ ಗ್ರಾಮಾಡಳಿತಾಧಿಕಾರಿಗಳ ರಾಜ್ಯ ಸಂಘ ತಿಳಿಸಿದ್ದು, ಅದಕ್ಕೆ ಪೂರಕವಾಗಿ ಇಡೀ ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಆಯಾ ತಹಸೀಲ್ದಾರ್ ಗಳಿಗೆ ಈ ಕುರಿತು ಮನವಿಪತ್ರ ಸಲ್ಲಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಕರ್ನಾಟಕ ಗ್ರಾಮಾಡಳಿತಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಕೆ. ಪೂಜಾರಿ, ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಎಂ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಪ್ರತಿನಿಧಿ ಮತ್ತಿಹಳ್ಳಿ ಪ್ರಕಾಶ್, ಕ್ರೀಡಾ ಕಾರ್ಯದರ್ಶಿ ಪರೀಕ್ಷಿತ್, ಖಜಾಂಚಿ ವೈಶಾಲಿ ಉಪಸ್ಥಿತರಿದ್ದರು. ರಾಜ್ಯ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ರಾಜ್ಯದ 31 ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ತಾಲೂಕು ಅಧ್ಯಕ್ಷರು, ಸರ್ವಸದಸ್ಯರ ಒಪ್ಪಿಗೆಯಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘ ಮಾಹಿತಿ ನೀಡಿದೆ. ಮುಷ್ಕರಕ್ಕೆ ಕಾರಣವೇನು? ಮುಂದೆ ಓದಿರಿ

ಸುಮಾರು 17 ಮೊಬೈಲ್ ಆಪ್ ಗಳಲ್ಲಿ ಕೆಲಸ ನಿರ್ವಹಿಸಲು ಒತ್ತಡ ಹೇರಲಾಗುತ್ತಿದ್ದು, ಪೂರಕ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ 22ರಿಂದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗೈರ್ ಹುಕುಂ, ಹಕ್ಕುಪತ್ರ, ನಮೂನೆ 1ರಿಂದ 5ರ ವೆಬ್ ಅಪ್ಲಿಕೇಶನ್, ಪೌತಿ ಆಂದೋಲನ ಆಪ್ ಗಳಲ್ಲಿ ಕೆಲಸ ಮಾಡುವುದಿಲ್ಲ ಎಂದು ಗ್ರಾಮಾಡಳಿತ ಸಂಘ ತಿಳಿಸಿದೆ.ಈಗಲೂ ಉತ್ತಮ ಗುಣಮಟ್ಟದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಸೇವಾ ವಿಷಯಕ್ಕೆ ಸಂಬಂಧಿಸಿದಂತೆ ಸೌಲಭ್ಯಗಳು ದೊರಕಿಲ್ಲ. ತಾಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯೋಜನೆ ಮೇಲೆ ಕೆಲಸ ನಿರ್ವಹಿಸುತ್ತಿರುವ ಗ್ರಾಮಾಡಳಿತಾಧಿಕಾರಿಗಳನ್ನು ವಿಶೇಷ ಚೇತನ ಮತ್ತು ಕೆಲ ಅನಾರೋಗ್ಯ ಪ್ರಕರಣ ಹೊರತುಪಡಿಸಿ, ಅವರ ಮೂಲ ವೃತ್ತಗಳಿಗೆ ನಿರ್ವಹಿಸಲು ಆದೇಶಿಸಬೇಕು ಹಾಗೂ ರಾಜ್ಯದ ಎಲ್ಲ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಸಂಘ ಹೇಳಿದೆ.