ಬಂಟ್ವಾಳ: ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿ ಜಮಾ ಖರ್ಚಿನ ಕುರಿತು ನಿಖರವಾದ ಮಾಹಿತಿಯನ್ನು ಪಡೆದುಕೊಳ್ಳಲು ಜಮಾಬಂದಿ ನಡೆಸಲಾಗುತ್ತಿದ್ದು, ತಾಲೂಕು ಪಂಚಾಯಿತಿ ಅಧೀನ ಇಲಾಖೆಗಳು ಎಷ್ಟು ಹಣ ಉಳಿಕೆಯಾಗಿದೆ, ಯಾವ ಕಾರಣಕ್ಕಾಗಿ ಉಳಿಕೆಯಾಗಿದೆ ಎಂಬ ಕುರಿತು ಲಿಖಿತ ಮಾಹಿತಿಯನ್ನು ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಯರಾಮ್ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಮತ್ತು ವಿವಿಧ ಇಲಾಖೆಗಳಲ್ಲಿನ ಜಮಾ ಖರ್ಚಿನ ಬಗ್ಗೆ ಸಾರ್ವಜನಿಕರ ಸಮ್ಮುಖದಲ್ಲಿ ನಡೆಯುವ ಜಮಾಬಂಧಿ ಕಾರ್ಯಕ್ರಮದಲ್ಲಿ ಅವರು ಸೂಚನೆ ನೀಡಿದರು.
ಯೋಜನೆಗಳ ಅನುಷ್ಠಾನ ಸಂದರ್ಭ ಪಾರದರ್ಶಕತೆಯನ್ನು ಒದಗಿಸುವುದು ಮತ್ತು ನಾಗರಿಕರಿಗೆ ಮಾಹಿತಿ ಒದಗುವಂತೆ ಮಾಡುವುದಲ್ಲದೆ, ತಾಪಂ ಮತ್ತು ಇತರ ಅಧೀನ ಇಲಾಖೆಗಳಲ್ಲಿನ ಕಾರ್ಯಕ್ರಮಗಳು ಖರ್ಚು ವೆಚ್ಚಗಳ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ದೊರಕುವಂತೆ ಮಾಡುವ ಉದ್ದೇಶ ಇದರಲ್ಲಿದ್ದು, ಘೋಶ್ವಾರೆಯಲ್ಲಿ ನಮೂದಿಸಲಾದ ಯೋಜನೇತರ ಗುರಿ, ಬಿಡುಗಡೆಗೊಂಡ ಹಣ ಹಾಗೂ ಖರ್ಚಾದ ಹಣದೊಂದಿಗೆ ಉಳಿಕೆಯಾದ ಅನುದಾನವನ್ನು ಪ್ರಸ್ತಾಪಿಸಿದ ಅವರು, ಇದು ಯಾವ ಕಾರಣಕ್ಕಾಗಿ ಆಗಿದೆ ಎಂಬ ಕುರಿತು ಪ್ರತಿಯೊಂದು ಇಲಾಖೆಗಳಿಂದ ಮಾಹಿತಿ ಪಡೆದುಕೊಂಡರು. ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಸಿಪಿಡಿಒ, ಕೃಷಿ, ತೋಟಗಾರಿಕೆಪಶುವೈದ್ಯ ಇಲಾಖೆ, ಪಂಚಾಯತ್ ರಾಜ್, ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಸಹಿತ ಹಲವು ವಿಚಾರಗಳಿಗೆ ಸಂಬಂಧಿಸಿ ಖರ್ಚುವೆಚ್ಚನ ನಿರ್ವಹಣೆ, ಉಳಿಕೆಯ ಮಾಹಿತಿಯನ್ನು ಅವರು ಪಡೆದುಕೊಂಡರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಮಾತನಾಡಿ, ಕಳೆದ ವರ್ಷ ಹಲವಾರು ಅಭಿವೃದ್ಧಿ ಕಾರ್ಯಗಳ ಅನುಷ್ಠಾನವನ್ನು ಮಾಡಲಾಗಿದೆ ಎಂದ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎ.ಮಂಜುನಾಥ್ ವಹಿಸಿದ್ದರು. ವ್ಯವಸ್ಥಾಪಕ ಪ್ರಕಾಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲ್ಯಾನ್, ಸಿಡಿಪಿಒ ಮಮ್ತಾಜ್, ತೋಟಗಾರಿಕಾ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಪಶುವೈದ್ಯಾಧಿಕಾರಿ ಡಾ. ಅವಿನಾಶ್ ಭಟ್, ತಾಪಂ ಸಿಬಂದಿಗಳಾದ ಚಂದ್ರಾವತಿ, ಕುಶಾಲಪ್ಪ ಮತ್ತಿತರರು ಪೂರಕ ಮಾಹಿತಿ ನೀಡಿದರು. ತಾಪಂ ಇಒ ಸಚಿನ್ ಕುಮಾರ್ ಸ್ವಾಗತಿಸಿದರು. ಸಿಬಂದಿ ಚಂದ್ರಾವತಿ ವಂದಿಸಿದರು.
Be the first to comment on "ಅನುದಾನ ಸದ್ಬಳಕೆಯೊಂದಿಗೆ ಕಾರ್ಯಕ್ರಮ ರೂಪಿಸಿ – ತಾಪಂ ಜಮಾಬಂಧಿಯಲ್ಲಿ ಜಿಪಂ ಯೋಜನಾ ನಿರ್ದೇಶಕ ಜಯರಾಮ್"