ಬಂಟ್ವಾಳ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಹಿಂದು ಸಮಾಜವನ್ನೇ ನಾಶ ಮಾಡುವ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದು ಸಮಾಜ ಎದ್ದು ನಿಂತಿದೆ ಎಂದು ಹಿರಿಯ ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಬಾಂಗ್ಲಾ ದೇಶದಲ್ಲಿ ಹಿಂದುಗಳ ನರಮೇಧ ಖಂಡಿಸಿ, ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ವಿಶ್ವ ಹಿಂದು ಪರಿಷದ್ ಸಹಿತ ಪರಿವಾರ ಸಂಘಟನೆಗಳಿಂದ ಬಿ.ಸಿ.ರೋಡಿನಲ್ಲಿ ಮಾನವ ಸರಪಳಿ ರಚನೆ ನಡೆಯಿತು. ಬಳಿಕ ಮಾತನಾಡಿದ ಡಾ.ಪ್ರಭಾಕರ ಭಟ್, ಹಿಂದುಗಳ ಮೇಲೆ ಆಕ್ರಮಣ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಬಾಂಗ್ಲಾದಲ್ಲಿ ನಡೆಯುತ್ತಿರುವ ಘಟನೆಯ ಹಿನ್ನೆಲೆಯನ್ನು ನೋಡಿದಾಗ, ಇದು ಇಡೀ ಹಿಂದು ಸಮಾಜವನ್ನು ನಾಶ ಮಾಡುವ ಹುನ್ನಾರವಾಗಿದೆ. ಭಾರತದ ಪ್ರತಿಪಕ್ಷ ಈ ವಿಚಾರದಲ್ಲಿ ಮೌನವಾಗಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ ಮಾತನಾಡಿ, ಭಾರತದ ಹಿಂದುಗಳು ಬಾಂಗ್ಲಾದೇಶದಲ್ಲಿ ನಡೆದ ಹಿಂದುಗಳ ನರಮೇಧವನ್ನು ಖಂಡಿಸುವ ಸಲುವಾಗಿ ಇಲ್ಲಿ ಸೇರಿದ್ದೇವೆ ಎಂದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ವಿಹಿಂಪ ತಾಲೂಕು ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಸಹಿತ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
Be the first to comment on "ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆ ವಿರೋಧಿಸಿ ಬಿ.ಸಿ.ರೋಡ್ ನಲ್ಲಿ ಮಾನವ ಸರಪಳಿ"