ತುಳುವರ ಆಚರಣೆಗಳಲ್ಲಿ ಆಟಿ ತಿಂಗಳು ಮಹತ್ವದ್ದಾಗಿದೆ. ತುಳು ನೆಲದ ಹಾಡು ಕುಣಿತ, ಆಹಾರ ಕ್ರಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಚರಣೆಯಾಗಿ ಆಟಿ ತಿಂಗಳು ಇಂದು ಆಚರಿಸಲ್ಪಡುತ್ತಿದೆ. ಕೃಷಿ ಆಧಾರಿತ ಬದುಕಿನಲ್ಲಿ ಆಷಾಢವು ತುಳುವರಿಗೆ ಬಲುಕಷ್ಟದ ದಿವಸವಾಗಿತ್ತು. ಆ ದಿನಗಳ ನೋವು ನಲಿವುಗಳನ್ನು ನೆನಪಿಸುವ ಹಬ್ಬವಾಗಿ ಆಟಿ ಆಚರಣೆ ಕಂಡುಬರುತ್ತಿದೆ. ಹಾಗಾಗಿ ಹಿಂದಿನ ಕಾಲದ ಆಟಿಗೂ ಇಂದಿನ ಕಾಲದ ಆಟಿ ಆಚರಣೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಆಟಿ ತುಳುನಾಡಿನ ಸಂಪ್ರದಾಯ ಮತ್ತು ಪರಂಪರೆಯ ಮಹತ್ವದ ಕೊಂಡಿ ಎಂಬ ಬಗ್ಗೆ ಎರಡು ಮಾತಿಲ್ಲ. ಆಟಿ ಆಚರಣೆಯನ್ನು ಇಂದು ಸಂಭ್ರಮದ ಆಚರಣೆಯಾಗಿ ಯುವಸಮುದಾಯ ಮುತುವರ್ಜಿಯಿಂದ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಚೇತನ್ ಮುಂಡಾಜೆ ಅಭಿಪ್ರಾಯ ಪಟ್ಟರು
ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಪೆರಿಯ ಕಾಸರಗೋಡಿನ ಕನ್ನಡ ವಿಭಾಗವು ಆಯೋಜಿಸಿದ್ದ ‘ಆಟಿ-ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿಶೇಷ ಉಪನ್ಯಾಸವನ್ನು ನೀಡಿದರು. ಆಟಿ ತಿಂಗಳಲ್ಲಿ ಕೆಲವೊಂದು ವಿಶೇಷ ಆಚರಣೆಗಳು ಗಮನಸೆಳೆಯುತ್ತವೆ. ಆಟಿಕಳೆಂಜ ಊರಿಗೆ ಬಂದ ಕೆಡುಕನ್ನು ಕಳೆಯುವ ಮಾಂತ್ರಿಕನಾಗಿ ಕಂಡುಬರುತ್ತಾನೆ. ಹಾಗೆಯೇ ಹಿರಿಯರ ಆರಾಧನೆ, ದಾನ ಬೀಡುವುದು, ಆಟಿ ಅಮಾವಾಸ್ಯೆ ಆಚರಣೆಗಳು ತನ್ನವೇ ಆದ ವಿಶೇಷತೆಗಳಿಂದ ಗಮನಸೆಳೆಯುತ್ತವೆ. ಪ್ರಕೃತಿಯಿಂದ ನೇರವಾಗಿ ದತ್ತವಾಗುವ ತಿಂಡಿ ತಿನಿಸುಗಳೇ ಈ ತಿಂಗಳ ಮುಖ್ಯ ಆಹಾರ. ಇದು ಒಂದು ಕಾಲದ ಬದುಕಿನ ಬವಣೆಯನ್ನು ಯುವಪೀಳಿಗೆಗೆ ತಿಳಿಯಪಡಿಸುವಲ್ಲಿಯೂ ಪ್ರಮುಖ ಪಾತ್ರವನ್ನುವಹಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸೌಮ್ಯ ಮಾತನಾಡಿ, ಯಾವುದೇ ಸಂಸ್ಕೃತಿಯ ತಾಯಿಬೇರು ಕೃಷಿ ಸಂಸ್ಕೃತಿಯ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ತುಳುವರ ಆಟಿ ಆಚರಣೆಯೂ ಈ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಹೆಚ್ ಸ್ವರಚಿತ ಕುಂದಾಪುರ ಕನ್ನಡ ಭಾಷೆಯ ಕವನ ವಾಚಿಸುವ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಿದರು. ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ್ ಪದ್ಯಾಣ, ಗೋವಿಂದರಾಜು ಕಲ್ಲೂರ್, ಚೇತನ್ ಮುಂಡಾಜೆ ಮತ್ತು ವಿದ್ಯಾರ್ಥಿಗಳಾದ ವಿನಯ ಎಂ, ರಕ್ಷಾ ಬಿ, ಮಣಿಕಂಠ ಎಸ್ ಇವರು ಕ್ರಮವಾಗಿ ತುಳು, ಹವ್ಯಕ, ಕೊಂಕಣಿ, ಮಲಯಾಳಿ, ಅರೆಭಾಷೆ, ಕವಿತೆಗಳನ್ನು ವಾಚಿಸುವ ಮೂಲಕ ಬಹುಭಾಷಾ ಕವಿಗೋಷ್ಠಿಯನ್ನು ಸಂಪನ್ನಗೊಳಿಸಿದರು. ವಿದ್ಯಾರ್ಥಿನಿ ಜ್ಯೋತಿರತ್ನ ಕವಿಗೋಷ್ಠಿ ನಡೆಸಿಕೊಟ್ಟರು.
ಸ್ವತಃ ವಿದ್ಯಾರ್ಥಿಗಳೇ ತಮ್ಮ ಮನೆಯಿಂದ ಆಟಿ ತಿಂಗಳಲ್ಲಿ ಸವಿಯುವ ವಿವಿಧ ಖಾದ್ಯಗಳನ್ನು ತಯಾರಿ ಮಾಡಿಕೊಂಡು ಬಂದು ವಿಭಾಗದ ಎಲ್ಲಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಟ್ಟಿಗೆ ಸಹಭೋಜನ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಚೇತನ್ ಎಂ ಸಂಯೋಜಕರಾಗಿದ್ದು, ದ್ವಿತೀಯ ಎಂ ಎ ವಿದ್ಯಾರ್ಥಿಗಳಾದ ರಂಜಿತ್ ಸ್ವಾಗತಿಸಿ, ಹರ್ಷಿತ್ ವಂದಿಸಿದರು. ಸಚಿನ್ ಕಾರ್ಯಕ್ರಮ ನಿರೂಪಿಸಿದರು. ಸಂಶೋಧನಾರ್ಥಿಗಳಾದ ಸಂಜಯ್ ಉಪ್ಪಿನ್, ಶಶಾಂಕ್ ಸಾಂದರ್ಭಿಕವಾಗಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು
Be the first to comment on "ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕನ್ನಡ ವಿಭಾಗದಲ್ಲಿ ಸಂಭ್ರಮದ ಆಟಿ ಆಚರಣೆ ಮತ್ತು ಬಹುಭಾಷಾ ಕವಿಗೋಷ್ಠಿ"