ಮಂಗಳೂರು ಬಲ್ಮಠದಲ್ಲಿ ಕಟ್ಟಡ ಕಾಮಗಾರಿ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಮಳೆಗೆ ಭೂಕುಸಿತ ಉಂಟಾಗಿ ಕಾರ್ಮಿಕನೋರ್ವ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಸೂಚನೆಯೊಂದನ್ನು ಹೊರಡಿಸಿದ್ದು, ಮಳೆಗಾಲ ಮುಕ್ತಾಯದವರೆಗೆ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಬಲ್ಮಠದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ, ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ತಿಳಿದುಬಂದಿದೆ. ಮಧ್ಯಾಹ್ನ ಕಟ್ಟಡದ ಕಾಮಗಾರಿ ನಡೆಯು್ತಿದ್ದ ವೇಳೆ ಭೂಕುಸಿತ ಸಂಭವಿಸಿತ್ತು. ಸುಮಾರು ಏಳು ತಾಸುಗಳ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಏಳು ಗಂಟೆ ವೇಳೆ ಮೃತದೇಹವನ್ನು ಎನ್.ಡಿ.ಆರ್.ಎಫ್. ತಂಡ ಹೊರತೆಗೆಯಿತು. ಯಾವುದೇ ಕಟ್ಟಡದ ಕಾಮಗಾರಿಯನ್ನು ಮಳೆಗಾಲ ಮುಕ್ತಾಯವಾಗುವವರೆಗೆ ನಡೆಸದಂತೆ ಹಾಗೂ ಈಗಾಗಲೇ ಪ್ರಾರಂಭಿಸಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅಳವಡಿಸಿಕೊಂಡು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದೆ. ಉಲ್ಲಂಘನೆ ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯುಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ಎಚ್ಚರಿಸಿದ್ದಾರೆ.
Be the first to comment on "ಮಳೆಗಾಲ ಮುಗಿಯುವವರೆಗೆ ಕಟ್ಟಡ ಕಾಮಗಾರಿ ಸ್ಥಗಿತ: ಮಂಗಳೂರು ದುರ್ಘಟನೆ ಬಳಿಕ ಪಾಲಿಕೆ ಸೂಚನೆ"