ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನು ‘ಅನುಗ್ರಹ ಸಭಾಭವನ’ದಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಪದುವಾ ಕಾಲೇಜು , ನಂತೂರು ಇಲ್ಲಿನ ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ವಂದನೀಯ ಗುರು ಅರುಣ್ ವಿಲ್ಸನ್ ಲೋಬೋರವರು, ಸ್ಥಳೀಯ ಧರ್ಮ ಪ್ರಾಂತ್ಯದ ಸಹಾಯಕ ಗುರುಗಳಾದ ವಂದನೀಯ ಗುರು ಲ್ಯಾನ್ಸಿ ಡಿಸೋಜರವರು, ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಸ್ಮಿತಾ ಡಿಸೋಜರವರು, ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಗುರು ಮೆಲ್ವಿನ್ ಲೋಬೋರವರು, ಸಹ ಮುಖ್ಯೋಪಾಧ್ಯಾಯಿನಿ ಗ್ಲ್ಯಾಡಿಸ್ ರವರು ಸಭೆಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನೆಯೊಂದಿಗೆ ಸಭೆಯನ್ನು ಆರಂಭಿಸಿ, ದೀಪ ಬೆಳಗಿಸುವುದರೊಂದಿಗೆ ಸಭೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು . ಶಿಕ್ಷಕಿ ಗ್ಲ್ಯಾಡಿಸ್ ಡಿಸೋಜರವರು ಸ್ವಾಗತಿಸಿದರು. ಶಿಕ್ಷಕಿ ಲಿನೆಟ್ ರವರು ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ವಂದನೀಯ ಗುರು ಅರುಣ್ ವಿಲ್ಸನ್ ಲೋಬೊರವರ ಕಿರು ಪರಿಚಯವನ್ನು ಮಾಡಿಕೊಟ್ಟರು.
ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ಗೋಣಿಯಲ್ಲಿ ತುಂಬಿಸುವ ಭತ್ತವಾಗಬಾರದು. ಲವಲವಿಕೆಯೊಂದಿಗೆ ಗದ್ದೆಯಲ್ಲಿ ಬೆಳೆಯುತ್ತಿರುವ ಭತ್ತದಂತಿರಬೇಕು. ಹೆತ್ತವರಾಗಿ ಮಕ್ಕಳಿಗೆ ಬೇಕಾದುದೆಲ್ಲವನ್ನು ಕೊಡುತ್ತೇವೆ. ಆದರೆ ಮಕ್ಕಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ತಮ್ಮ ಒಂದಿಷ್ಟು ಸಮಯವನ್ನು ಅವರಿಗಾಗಿ ಮೀಸಲಿಡಬೇಕು. ಇದರಿಂದ ನಮ್ಮ ಮಕ್ಕಳು ಕುಟುಂಬ ಹಾಗೂ ಸಮಾಜಕ್ಕೆ ಅಲಂಕಾರವಾಗಬಲ್ಲರು. ಈ ನಿಟ್ಟಿನಲ್ಲಿ ಹೆತ್ತವರು ಹಾಗೂ ಶಿಕ್ಷಕರ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟರು.
ಶಿಕ್ಷಕಿ ಜಾನಿಸ್ ರವರು ಗತ ವರ್ಷದ ವರದಿಯನ್ನು ವಾಚಿಸಿದರು. ಶಿಕ್ಷಕಿ ವಿಲ್ಮಾ ರವರು ಆಯವ್ಯಯ ಪಟ್ಟಿಯನ್ನು ಮಂಡಿಸಿದರು. ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಸ್ಮಿತಾರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ , ಸಹಕಾರವಿತ್ತ ಸರ್ವರನ್ನು ವಂದಿಸಿ ಅಭಿನಂದಿಸಿದರು.
ಶಾಲಾ ಮುಖ್ಯೋಪಾಧ್ಯಾಯರು ಶಾಲಾ ನಿಯಮಾವಳಿಗಳು ಹಾಗೂ ಶಾಲಾ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗಬಲ್ಲ ಹಲವಾರು ಅಂಶಗಳನ್ನು ಸಭೆಯ ಮುಂದಿಟ್ಟರು. ಶಿಕ್ಷಕಿ ಶ್ರೀಮತಿ ಸುನಿತಾರವರು ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯರು ಹೆತ್ತವರು ಬರೆದು ಕಳಿಸಿರುವ ಸಲಹೆ ಸೂಚನೆಗಳನ್ನು ಸಭೆಯ ಮುಂದಿಟ್ಟು , ಅವುಗಳನ್ನು ಸಮಿತಿಯಲ್ಲಿ ಚರ್ಚಿಸಿ , ಅಗತ್ಯವಿದ್ದಲ್ಲಿ ನೆರವೇರಿಸುವುದಾಗಿ ತಿಳಿಸಿದರು. ಶಿಕ್ಷಕಿ ಪ್ರೆಸಿಲ್ಲಾರವರು ವಂದಿಸಿದರು. ಶಿಕ್ಷಕಿ ಉಷಾ ಕಾರ್ಯಕ್ರಮವನ್ನು
ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
Be the first to comment on "ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ"