ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರಲ್ಲಿ ಹಲಸು ಮೇಳ, ಏನಿವೆ ವಿಶೇಷ?

ಮೇ 18 ಮತ್ತು 19ರಂದು ಮಂಗಳೂರಿನ ಬಾಳಂಭಟ್ ಸಭಾಂಗಣದಲ್ಲಿ, ಮೇ 24, 25 ಮತ್ತು 26ರಂದು ಪುತ್ತೂರಿನ ಜೈನ ಭವನದಲ್ಲಿ ಹಾಗೂ ಜೂನ್ 16ರಂದು ಮಂಗಳೂರು ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ಖಾಸಗಿ ಸಂಸ್ಥೆಗಳ ವತಿಯಿಂದ ಮೇಳಗಳು ಭರ್ಜರಿಯಾಗಿಯೇ ಆಯೋಜನೆಯಾಗಲಿವೆ. ಇದರಲ್ಲಿ ಹಲಸಿನ ಖಾದ್ಯಗಳ ಸಹಿತ ಹಲವು ವೈವಿಧ್ಯಮಯ ಉತ್ಪನ್ನಗಳು ದೊರೆಯುವುದು ಗ್ಯಾರಂಟಿ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ವತಿಯಿಂದ ಮೇ 18 ಶನಿವಾರ ಮತ್ತು 19 ಭಾನುವಾರ ಮಂಗಳೂರಿನ ಶರವು ದೇವಳ ಸಮೀಪದ ಬಾಳಂಭಟ್ ಸಭಾಂಗಣದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ವೈವಿಧ್ಯಮಯ ಹಲಸಿನ ಹಣ್ಣು, ಹಲಸಿನ ಗಿಡ, ಹಲಸಿನ ಗಾರಿಗೆ, ಗಟ್ಟಿ, ಮುಳ್ಕ, ಚಿಪ್ಸ್, ಪಾಯಸ, ಬಿರಿಯಾನಿ, ಜ್ಯೂಸ್, ಹೋಳಿಗೆ, ತರಕಾರಿ ಗಿಡಗಳು, ಬಗೆ ಬಗೆಯ ಸಾವಯವ ಉತ್ಪನ್ನಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಹಲಸು ಮೇಳ ಆಹಾರೋತ್ಸವ ಸಮಿತಿ ಮತ್ತು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಯೋಜನೆಯಲ್ಲಿ ಜೂನ್ 16ರಂದು ಬೆಳಗ್ಗೆ 8ರಿಂದ ರಾತ್ರಿ 8ವರೆಗೆ ನಂತೂರು ಶ್ರೀಭಾರತೀ ಕಾಲೇಜು ಆವರಣದಲ್ಲಿ ನಡೆಯಲಿದೆ. ಕಳೆದ ವರ್ಷದಂತೆ ಈ ವರ್ಷವೂ ಹಲಸಿನ ಹಣ್ಣು, ಗಿಡ ಸಹಿತ ಖಾದ್ಯೋತ್ಪನ್ನಗಳು ಇರಲಿವೆ ಎಂದು ಆಯೋಜಕರು ಹೇಳಿದ್ದಾರೆ.

ಹಲಸು ಮತ್ತು ಹಣ್ಣುಗಳ ಮೇಳ ಆರು ವರ್ಷಗಳ ಯಶಸ್ವಿ ಆಯೋಜನೆ ಬಳಿಕ ಈ ಬಾರಿ ಮತ್ತೆ ಪುತ್ತೂರಿನ ಜೈನ ಭವನದಲ್ಲಿ ಏಳನೇ ಬಾರಿ ಮೇ 24, 25 ಮತ್ತು 26ರಂದು ನಡೆಯಲಿದೆ. ನವತೇಜ ಟ್ರಸ್ಟ್ ಪುತ್ತೂರು, ಅಡಿಕೆ ಪತ್ರಿಕೆ ಪುತ್ತೂರು ಮತ್ತು ಜೆ.ಸಿ.ಐ. ಪುತ್ತೂರು ಸಂಯುಕ್ತ ಆಶ್ರಯದಲ್ಲಿ ಏಳನೇ ವರುಷದ ’ಹಲಸು ಮತ್ತು ಹಣ್ಣುಗಳ ಮೇಳ’ವು 2024 ಮೇ 24 ರಿಂದ 26ರ ತನಕ ಜರುಗಲಿದೆ. ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ’ಜೈನ್ ಭವನ’ದಲ್ಲಿ ದಿನಪೂರ್ತಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇಲ್ಲಿ ಸುಮಾರು ಅರುವತ್ತಕ್ಕೂ ಮಿಕ್ಕಿ ಮಳಿಗೆಗಳಿರಲಿವೆ. ಯಾವುದೇ ಕೃತಕ ಬಣ್ಣ, ಒಳಸುರಿಗಳನ್ನು ಬಳಸದ ಉತ್ಪನ್ನಗಳು ಮೇಳದ ಹೈಲೈಟ್. ಸ್ಥಳದಲ್ಲೇ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಗ್ರಾಹಕರಲ್ಲಿ ರುಚಿವರ್ಧನೆಯನ್ನು ಮಾಡಲಿವೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ.

ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶ. ಹಲಸಿನ ಹಣ್ಣಿನ ಮಳಿಗೆಯಿದೆ. ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಖಾದ್ಯಗಳಲ್ಲಿ ಹೈಲೈಟ್. ಹಲಸಿನ ಇಷ್ಟೊಂದು ಖಾದ್ಯಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗುತ್ತಿರುವುದು ಹಲಸು ಪ್ರಿಯರಿಗೆ ಖುಷಿ ತರಬಹುದಾದ ವಿಚಾರ ಎಂದು ಆಯೋಜಕ ಸುಹಾಸ್ ಮರಿಕೆ ತಿಳಿಸಿದ್ದಾರೆ.

ತಿಪಟೂರು ಮತ್ತು ಚೆನ್ನಪಟ್ಟಣದಿಂದ ಮೇಳಕ್ಕಾಗಿಯೇ ಹಲಸು ಮತ್ತು ಮಾವು ಬೆಳೆಗಾರರು ಸ್ವತಃ ಹಣ್ಣುಗಳೊಂದಿಗೆ ಮೇಳಕ್ಕೆ ಬರಲಿದ್ದಾರೆ. ಮುಖ್ಯವಾಗಿ ’ಕೆಂಪು ಹಲಸು’ ಗ್ರಾಹಕರ ಮನ ಸೆಳೆಯಲಿದೆ. ಕೊಕ್ಕೋ ಉತ್ಪನ್ನಗಳ ಮಳಿಗೆಗಳಿವೆ. ಈ ಋತುವಿನಲ್ಲಿ ಸಿಗುವ ರಂಬುಟಾನ್, ಡ್ರ್ಯಾಗನ್, ಮ್ಯಾಂಗೋಸ್ಟಿನ್, ಬೆಣ್ಣೆಹಣ್ಣು.. ಮೊದಲಾದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ವಿಶೇಷ ಆಹಾರ ಮಳಿಗೆ, ಅಗ್ರಿ ಬ್ಯುಸಿನೆಸ್ ಮಳಿಗೆಗಳು ಇರಲಿವೆ.

ಹಲಸು ಕೃಷಿಕರ ಅನುಭವದ ಮಾತುಗಳು, ಹೊಸ ಹೊಸ ತಳಿಗಳ ಪರಿಚಯ.. ಹೀಗೆ ಹಲಸು ಮೇಳದಲ್ಲಿ ವಿವಿಧ ವೈವಿಧ್ಯಗಳು. ವಿದ್ಯಾರ್ಥಿಗಳಿಗೆ ಹಲಸಿನ ಅರಿವನ್ನು ಮೂಡಿಸುವ ಉದ್ದೇಶದಿಂದ ಚಿತ್ರಬಿಡಿಸುವ, ಕವನ ರಚಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಲಸಿನ ಹಣ್ಣಿನ ಸೊಳೆಯನ್ನು ತಿನ್ನುವ ಸ್ಪರ್ಧೆಯಿದೆ.  ಮೇಳದಲ್ಲಿ ಸಂಶೋಧನಾ ಕೇಂದ್ರಗಳು ಹಾಗೂ ಕೃಷಿಕರನ್ನು ಒಂದೇ ಸೂರಿನಡಿ ತಂದು ಕೃಷಿ ಉತ್ಪನ್ನಗಳಿಗೆ ಉದ್ಯಮದ ಸ್ವರೂಪ ನೀಡುವ ಯತ್ನವು ಮೇಳದ ಉದ್ದೇಶಗಳಲ್ಲೊಂದು.  ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ರಂಗದ ಗಣ್ಯರು, ಕೃಷಿಕರು ಆಗಮಿಸಲಿದ್ದಾರೆ. ನವತೇಜ ಟ್ರಸ್ಟಿನೊಂದಿಗೆ ಅಕ್ಷ ಕಾಟೇಜ್ ಇಂಡಸ್ಟ್ರೀಸ್, ನವನೀತ್ ಫಾರ್ಮ್ ನರ್ಸರಿ, ಮರಿಕೆ ಸಾವಯವ ಮಳಿಗೆ, ನಿರ್ಮಾಣ್ ಅಸೋಸಿಯೇಟ್ಸ್,.. ಮೊದಲಾದ ಸಂಸ್ಥೆಗಳ ಹೆಗಲೆಣೆ. ಎಲ್ಲರಿಗೂ ಮುಕ್ತ ಪ್ರವೇಶ ಎಂದು ನವತೇಜ ಪುತ್ತೂರಿನ ಸುಹಾಸ್ ಮರಿಕೆ ತಿಳಿಸಿದ್ದಾರೆ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರಲ್ಲಿ ಹಲಸು ಮೇಳ, ಏನಿವೆ ವಿಶೇಷ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*