ದಕ್ಷಿಣ ಕನ್ನಡ ಜಿಲ್ಲೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 1.84 ಲಕ್ಷದಷ್ಟು ಕುಲಾಲ ಸಮುದಾಯದ ಮತದಾರರು ಇದ್ದು, ಉದ್ದೇಶಪೂರ್ವಕವಾಗಿಯೇ ನಮ್ಮ ಸಮುದಾಯದವರು ಕೇವಲ 40 ಸಾವಿರದಷ್ಟಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಬಂಟ್ವಾಳ ತಾಲೂಕು ಕುಲಾಲ ಸಂಘದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಲಾಲ ಯಾನೆ ಮೂಲ್ಯ ಸಮುದಾಯದ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದ್ದು, ಮೂರನೇ ಅತಿ ಹೆಚ್ಚು ಮತದಾರರಿರುವ ಸಮುದಾಯವಾಗಿದೆ, ಕುಲಾಲ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಅಂದಾಜು ಲೆಕ್ಕಾಚಾರದ ಪ್ರಕಾರ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 39 ಸಾವಿರ, ಮೂಡುಬಿದಿರೆಯಲ್ಲಿ 26 ಸಾವಿರ, ಬೆಳ್ತಂಗಡಿಯಲ್ಲಿ 22 ಸಾವಿರ, ಪುತ್ತೂರಲ್ಲಿ 19 ಸಾವಿರ, ಸುಳ್ಯದಲ್ಲಿ 16 ಸಾವಿರ, ಮಂಗಳೂರು ಕ್ಷೇತ್ರದಲ್ಲಿ 26 ಸಾವಿರ, ಮಂಗಳೂರು ಉತ್ತರದಲ್ಲಿ 19 ಸಾವಿರ, ದಕ್ಷಿಣದಲ್ಲಿ 17 ಸಾವಿರದಷ್ಟು ಕುಲಾಲ ಸಮುದಾಯದವರು ಮತ ಚಲಾಯಿಸಲಿದ್ದಾರೆ ಎಂದು ಪ್ರತಿಪಾದಿಸಿದ ಅವರು, ಸಾಮಾಜಿಕ ಮಾಧ್ಯಮಗಳು ಹಾಗೂ ಇತರೆ ಮಾಧ್ಯಮಗಳಲ್ಲಿ ನಾನಾ ಸಮುದಾಯಗಳ ಲೆಕ್ಕಾಚಾರಗಳನ್ನು ಬಣ್ಣಿಸುವಾಗ ಎರಡು ಸಮುದಾಯಗಳ ಅಂಕಿ ಅಂಶ ತೋರಿಸಿ, ಉಳಿದಂತೆ ಇತರ ಎಲ್ಲ ಹಿಂದುಳಿದ ವರ್ಗಗಳ ಒಟ್ಟು ಸಂಖ್ಯೆ 40 ಸಾವಿರ ಎಂದು ತೋರಿಸಲಾಗುತ್ತಿದೆ. ಇದು ಖಂಡನೀಯ. ಪ್ರತಿ ಕ್ಷೇತ್ರದಲ್ಲೂ ನಿರ್ಣಾಯಕ ಸಂಖ್ಯೆಯಲ್ಲಿರುವ ಕುಲಾಲ ಮತದಾರರು ಜನಪ್ರತಿನಿಧಿ ಆಯ್ಕೆ ಸಂದರ್ಭ ನಿರ್ಣಾಯಕರಾಗಿರುತ್ತಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾರಾಯಣ ಸಿ.ಪೆರ್ನೆ, ಸುಕುಮಾರ ಬಂಟ್ವಾಳ, ರಮೇಶ್ ಪಣೋಲಿಬೈಲು ಉಪಸ್ಥಿತರಿದ್ದರು.
Be the first to comment on "ನಿರ್ಣಾಯಕ ಸ್ಥಾನದಲ್ಲಿ ಕುಲಾಲ ಸಮುದಾಯ ಮತದಾರರು: ಮುಖಂಡ ಸದಾಶಿವ ಬಂಗೇರ"