ಕಲ್ಲಡ್ಕ ಶ್ರೀರಾಮ ಮಂದಿರದ ಶತಾಬ್ಧಿ ಸಂಭ್ರಮದ ಎರಡನೇ ದಿನವಾದ ಗುರುವಾರ, ಶ್ರೀ ವಿದ್ಯಾಗಣಪತಿ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಹಾಗೂ ಶ್ರೀ ರಾಮಾಂಗಣ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ 108 ತೆಂಗಿನಕಾಯಿ ಗಣಪತಿ ಹವನ, ಅಥರ್ವ ಶೀರ್ಷ ಹವನ, ಪ್ರತಿಷ್ಠಾಂಗ ಹವನದ ಬಳಿಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಬೆಳಗಾಗಿ ಜಿಲ್ಲೆಯ ನಿಡಸೋಸಿ ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿಯೂ ದೇವಸ್ಥಾನಕ್ಕೆ ಮಹತ್ವವಿದೆ. ಮಂದಿರದಿಂದ ಮನಸ್ಸು ಕಟ್ಟುವ ಕೆಲಸ ಜೊತೆಗೆ ರಾಷ್ಟ್ರದ ನಿರ್ಮಾಣವಾಗುತ್ತದೆ ಎಂದರು.
ಕೊಲ್ಹಾಪುರ ಶ್ರೀ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಠಾಧೀಶರು ಶ್ರೀ ವಿದ್ಯಾಗಣಪತಿ ದೇವರ ಪ್ರಾಣಪ್ರತಿಷ್ಠೆ ನೆರವೇರಿಸಿ ಮಾತನಾಡಿ, ರಾಮನ ರಾಜ್ಯ ಮರಳಿ ಭಾರತದಲ್ಲಿ ಸ್ಥಾಪನೆ ಆಗುತ್ತಿದೆ ಎಂಬುದು ದೇಶದಾದ್ಯಂತ ಇರುವ ಬದಲಾವಣೆಗಳಿಂದ ಗೋಚರವಾಗುತ್ತಿದೆ. ವಿಶ್ವಮನ್ನಣೆ ಗಳಿಸುತ್ತಿದೆ ಎಂದರು. ಶ್ರೀರಾಮಚಂದ್ರ, ಹನುಮನಂಥ ಮಕ್ಕಳು ಪ್ರತಿಯೊಂದು ಮನೆಯಲ್ಲಿ ಜನ್ಮತಾಳಲಿ ಎಂದರು. ಕಲ್ಲಡ್ಕ ಶ್ರೀರಾಮಮಂದಿರದ ವೈಶಿಷ್ಟ್ಯ, ವಿಚಾರಗಳು ದೇಶಕ್ಕೆ ಮಾದರಿಯಾಗಿದ್ದು,ಇನ್ನಷ್ಟು ಹೊಸ ಹೊಸ ಚಿಂತನೆಗಳಿಗೆ ಅವಕಾಶ ನೀಡುತ್ತಾ ಎತ್ತರಕ್ಕೆ ಬೆಳೆಯಲಿ ಎಂದು ಅವರು ಹಾರೈಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಮುಖ್ಯ ಭಾಷಣ ಮಾಡಿ, ಸಂಘಪರಿವಾರದ ಹಿರಿಯರ ಮುಂದಾಳತ್ವದಲ್ಲಿ ನಡೆದ ರಾಷ್ಟ್ರೀಯ ಹೋರಾಟದ ತಾರ್ಕಿಕ ಅಂತ್ಯ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಕಾರಣವಾಗಿದೆ. ಸಮಾಜದಲ್ಲಿರುವ ಜಾತಿ ಮತ್ತು ಅಸ್ಪ್ರಶ್ಯತೆ ಎಂಬ ಮೂಢನಂಬಿಕೆಯ ವಿರುದ್ದ ಹೋರಾಟ ಮಾಡಬೇಕಾಗಿದೆ ಎಂದರು.
ಶ್ರೀರಾಮಾಂಗಣವನ್ನು ಲೋಕಾರ್ಪಣೆಗೊಳಿಸಿದ ಮುಂಬಯಿ ಉದ್ಯಮಿ ಹಾಗೂ ಶತಾಬ್ಧಿ ಸಂಭ್ರಮ ಸ್ವಾಗತ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ದಳಂದಿಲ ಶುಭ ಹಾರೈಸಿದರು. ಶತಾಬ್ದಿ ಸಂಭ್ರಮ ಸಮಿತಿ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀರಾಮ ಮಂದಿರ ನೂರು ವರ್ಷಗಳಲ್ಲಿ ಬೆಳೆದು ಬಂದ ಹಾದಿಯನ್ನು ವಿವರಿಸಿದರು.
ಮಂಗಳೂರು ಮಹಾನಗರದ ಆರೆಸ್ಸೆಸ್ ಸಹಸಂಘಚಾಲಕ ಸುನೀಲ್ ಆಚಾರ್ಯ, ಮುಂಬೈ ಉದ್ಯಮಿಗಳಾದ ಬಾಲಕೃಷ್ಣ ಭಂಡಾರಿ, ಉದ್ಯಮಿ ಸುಧಾಕರ ಶೆಟ್ಟಿ, ಶತಾಬ್ಧಿ ಸಮಿತಿ ಗೌರವ ಸಲಹೆಗಾರರಾದ ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಶತಾಬ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ಆರ್. ಕೋಟ್ಯಾನ್ ಸ್ವಾಗತಿಸಿದರು ಮತ್ತೋರ್ವ ಪ್ರಧಾನ ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ ವಂದಿಸಿದರು.. ರಾಜೇಶ್ ಕೊಟ್ಟಾರಿ ಮತ್ತು ರಾಧಾಕೃಷ್ಣ ಅಡ್ಯಂತಾಯ ಕಾರ್ಯಕ್ರಮ ನಿರ್ವಹಿಸಿದರು. ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.
Be the first to comment on "ಕಲ್ಲಡ್ಕ ಶ್ರೀರಾಮ ಮಂದಿರ: ಶ್ರೀವಿದ್ಯಾಗಣಪತಿ ಪ್ರಾಣಪ್ರತಿಷ್ಠೆ, ರಾಮಾಂಗಣ ಲೋಕಾರ್ಪಣೆ"