ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ಸಮೀಪ ಸಾಲುಮರದ ಟ್ರೀಪಾರ್ಕ್ ಮುಂಭಾಗದಲ್ಲಿ ಇರುವ ಮನೆಯೊಂದಕ್ಕೆ ಬೆಳಗ್ಗೆ ಪ್ರವೇಶಿಸಿದ ನಾಲ್ವರು ಮುಸುಕುಧಾರಿಗಳು, ಮನೆಯಲ್ಲಿದ್ದ ಮಹಿಳೆಯರನ್ನು ಬೆದರಿಸಿ, ಬಂಗಾರ, ನಗದು ಸಹಿತ ಸುಮಾರು 3 ಲಕ್ಷ ರೂಗೂ ಅಧಿಕ ಮೌಲ್ಯದ ಸೊತ್ತುಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಆರೋಪಿಗಳಾದ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26), ದಿನೇಶ್ ನಾಯ್ಕ (22), ಸಾಗರ ಶೆಟ್ಟಿ (21) ಮಂಗಳೂರು ಐಕಳ ಗ್ರಾಮದ ರಾಕೇಶ್ ಎಲ್. ಪಿಂಟೋ (29), ಕಡಬ ಬೆಳಂದೂರು ಗ್ರಾಮದ ಎಂ.ಸೀತಾರಾಮ ಯಾನೆ ಪ್ರವೀಣ್ (36), ಸುಧೀರ್ (29) ಹಾಗೂ ದರೋಡೆಗೈದ ಚಿನ್ನಾಭರಣವನ್ನು ಸ್ವೀಕರಿಸಿದ ಮೂಲತಃ ಬಂಟ್ವಾಳ ತಾಲೂಕಿನ ಇರಾ ಗ್ರಾಮದವನಾದ ಪ್ರಸ್ತುತ ಗೌರಿ ಕಾಲುವೆ, ಚಿಕ್ಕಮಗಳೂರು ಜಿಲ್ಲೆ ವಾಸಿ ಮಹಮ್ಮದ್ ಹನೀಫ್ (49) ಎಂಬವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ರೂ.3,15,000 ಮೌಲ್ಯದ ಚಿನ್ನಾಭರಣ ಹಾಗು ದರೋಡೆಗೆ ಬಳಸಿದ ಅಂದಾಜು ರೂ. 8 ಲಕ್ಷ ಮೌಲ್ಯದ ಇನ್ನೋವಾ ಕಾರು ಹಾಗು ಅಂದಾಜು ರೂ. 2 ಲಕ್ಷ ಮೌಲ್ಯದ ಟಾಟಾ ಇಂಡಿಕಾ ಕಾರು ಸ್ವಾಧೀನಪಡಿಸಿದ್ದಾರೆ.
ಜನವರಿ 11ರಂದು ದ.ಕ.ಜಿಲ್ಲೆಯ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ಮುಂಜಾನೆ ಚಿನ್ನಾಭರಣಗಳ ದರೋಡೆ ಪ್ರಕರಣ ನಡೆದಿತ್ತು. ಈ ಸಂಬಂಧ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗಿತ್ತು. ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಧರ್ಮಪ್ಪ, ಮತ್ತು ರಾಜೇಂದ್ರ, ಮುಂದಾಳತ್ವದಲ್ಲಿ, ಡಿವೈಎಸ್ಪಿ ಎಸ್. ವಿಜಯಪ್ರಸಾದ್, ನೇತೃತ್ವದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ, ಪುಂಜಾಲಕಟ್ಟೆ ಎಸ್ಸೈ ನಂದಕುಮಾರ್, ಗ್ರಾಮಾಂತರ ಎಸ್ಸೈ ಹರೀಶ ಎಂ.ಆರ್. ಅವರ 3 ವಿಶೇಷ ಪತ್ತೆ ತಂಡಗಳನ್ನು ರಚಿಸಿದ್ದರು. ತನಿಖಾ ತಂಡದಲ್ಲಿ ಎ.ಎಸ್.ಐ. ಗಿರೀಶ್, ಎಚ್.ಸಿ. ಗಳಾದ ಸುಜು, ರಾಧಾಕೃಷ್ಣ, ಉದಯ ರೈ, ಅದ್ರಾಮ, ಪ್ರವೀಣ್ ರೈ, ಪ್ರವೀಣ್, ಸಂದೀಪ್, ರಾಹುಲ್, ಇರ್ಷಾದ್, ರಾಜೇಶ್, ಹರಿಶ್ಚಂದ್ರ, ಪಿ.ಸಿ.ಗಳಾದ ಪುನೀತ್, ರಮ್ಜಾನ್, ಯೊಗೇಶ್ ಡಿ.ಎಲ್, ಕುಮಾರ್ ಎಚ್. ಕೆ., ವಿನಾಯಕ ಬಾರ್ಕಿ, ಜಗದೀಶ ಅತ್ತಾಜೆ, ಜಮೀರ್ ಕಲಾರಿ, ಎ.ಹೆಚ್.ಸಿ.ಗಳಾದ ಕುಮಾರ್, ಮಹಾಂತೇಶ್, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್, ಸಂಪತ್ ರವರುಗಳು ಕಾರ್ಯನಿರ್ವಹಿಸಿದ್ದರು.
ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ:
ಆರೋಪಿಗಳ ಪೈಕಿ ಗಣೇಶ ನಾಯ್ಕ ಎಂಬಾತನು 2023ನೇ ಸಾಲಿನಲ್ಲಿ ಮಂಗಳೂರು ನಗರ ವ್ಯಾಪ್ತಿಯ ಮುಲ್ಕಿಯಲ್ಲಿ ಐಕಳ ಹರೀಶ್ ಶೆಟ್ಟಿ ಎಂಬವರ ಮನೆಯಿಂದ ಅಪಾರ ಮೊತ್ತದ ನಗದು, ಚಿನ್ನಾಭರಣ, ವಜ್ರ ಕಳವು ಮಾಡಿದ ಮುಖ್ಯ ಆರೋಪಿಯಾಗಿದ್ದು, ಉಳಿದಂತೆ ಸೀತಾರಾಮ ಯಾನೆ ಪ್ರವೀಣ್, ಸುಧೀರ್ ಹಾಗು ಮಹಮ್ಮದ್ ಹನೀಫ್ ವಿರುದ್ದ ದ.ಕ.ಜಿಲ್ಲೆ ಹಾಗು ಇನ್ನಿತರ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿರುತ್ತದೆ. ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.
Be the first to comment on "ವಗ್ಗ ಸಮೀಪ ದರೋಡೆ ಪ್ರಕರಣ: ಆರೋಪಿಗಳ ಬಂಧನ"