ಪುಷ್ಪಾಲಂಕೃತಗೊಂಡ ಬಿಳಿ ಕುದುರೆಗೆ ತೀರ್ಥ ಸಂಪ್ರೋಕ್ಷಣೆ ಮಾಡಿ ಪವಿತ್ರಗೊಳಿಸಲಾಯಿತು. ಮಹಾಲಿಂಗೇಶ್ವರನ ಗಂಧ ಪ್ರಸಾದ ಹಣೆಗೆ ಹಚ್ಚಿ ಅಭಯ ಪ್ರದಾನ ಮಾಡಲಾಯಿತು. ಹೊಸ ಹುಮ್ಮಸ್ಸಿನಿಂದ ಹೊಸ ಜವಾಬ್ದಾರಿ ಧರಿಸಿಕೊಂಡ ಶ್ವೇತಾಶ್ವ ಲವಲವಿಕೆಯಿಂದ ಅಲಂಕೃತ ವಾಹನವನ್ನೇರಿ ಹೊರಟೇ ಬಿಟ್ಟಿತು.
ನಿರಂತರ 3 ದಿನ ಸೀಮೆ ವ್ಯಾಪ್ತಿಯ 22 ಗ್ರಾಮ ದೇವಸ್ಥಾನಗಳಿಗೆ ಪರ್ಯಟನೆ ಮಾಡುವ ಕುದುರೆ, ಅಕ್ಷರಶಃ ಅಯೋಧ್ಯಾ ರಾಮನ ಪ್ರತಿನಿಧಿಯಾಗಿ ಪ್ರತೀ ಊರಿಗೂ ರಾಮತಾಕರ ಯಜ್ಞದ ಆಮಂತ್ರಣ ನೀಡಿ, ಯಜ್ಞಕ್ಕೆ ಬೇಕಾದ ಸಮಿತ್ತುಗಳನ್ನು ಸ್ವೀಕರಿಸಿಕೊಂಡು ಬರಲಿದೆ.
ಜ.22ರಂದು ನಡೆಯಲಿರುವ ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ರಾಮತಾರಕ ಯಜ್ಞ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ 3 ದಿನಗಳ ರಾಮಾಶ್ವ ದಿಗ್ವಿಜಯ ಯಾತ್ರೆ ಶುಕ್ರವಾರ ದೇವಳದ ರಥಬೀದಿಯಿಂದ ಆರಂಭಗೊಂಡಿತು. ಇದಕ್ಕೆಂದೇ ಸಜ್ಜುಗೊಳಿಸಲಾದ ಕುದುರೆಯನ್ನು ಸಾಲಂಕೃತ ವಾಹನದಲ್ಲಿರಿಸಿ ತೆಂಗಿನ ಕಾಯಿ ಒಡೆಯುವ ಮೂಲಕ ಸೀಮಾ ಪರ್ಯಟನೆಗೆ ಚಾಲನೆ ನೀಡಲಾಯಿತು. 22 ಗ್ರಾಮಗಳನ್ನು ಸುತ್ತಲಿರುವ ಕುದುರೆ 22 ಗ್ರಾಮ ದೇವಸ್ಥಾನಗಳನ್ನು ಸಂದರ್ಶಿಸಿ ಗೌರವ ಸ್ವೀಕರಿಸಲಿದೆ.
ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಧಾರ್ಮಿಕ ವಿಧಿ ಪೂರೈಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರಾಮದಾಸ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಡಾ. ಸುಧಾ ಎಸ್. ರಾವ್, ಬಿ.ಕೆ.ವೀಣಾ ಉಪಸ್ಥಿತರಿದ್ದರು.
ಕರಸೇವಕರಿಗೆ ಗೌರವಾರ್ಪಣೆ
1990 ಮತ್ತು 1992ರಲ್ಲಿ ಅಯೋಧ್ಯೆಯ ಕರಸೇವೆಗೆ ತೆರಳಿದ್ದ ಸಂಘದ ಹಿರಿಯ ಕಾರ್ಯಕರ್ತರಾದ ಶೇಖರ್ ನಾರಾವಿ, ರಾಜೇಶ್ ಬನ್ನೂರು, ಸುರೇಂದ್ರ ಆಚಾರ್ಯ, ಪಿ.ಜಿ ಚಂದ್ರಶೇಖರ್, ಅಯೋಧ್ಯೆ ಶ್ರೀರಾಮ ಮಂದಿರ ಶಿಲ್ಪ ಕೆತ್ತನೆಯ ಸಹಾಯಕ ಸುಮಂತ್ ಆಚಾರ್ಯ ಅವರನ್ನು ಈ ಸಂದರ್ಭ ಹಾರಾರ್ಪಣೆ ಮಾಡಿ ಗೌರವಿಸಲಾಯಿತು. ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಪ್ರಮುಖರಾದ ರವೀಂದ್ರ, ಜನಾರ್ದನ ಬೆಟ್ಟ, ರಾಧಾಕೃಷ್ಣ ನಂದಿಲ, ಸುದರ್ಶನ್, ಜಯರಾಜ್ ಮತ್ತಿತರರು ಸಹಕರಿಸಿದರು. ವಿಶಾಖ್ ರೈ ಕಾರ್ಯಕ್ರಮ ನಿರ್ವಹಿಸಿದರು.
ಜ.22ರಂದು ದೇಶದೆಲ್ಲಡೆ ದೇವಸ್ಥಾನಗಳಲ್ಲಿ ನಾನಾ ರೀತಿಯ ಧಾರ್ಮಿಕ ಸೇವೆಗಳು ನಡೆಯಲಿವೆ. ಆದರೆ ಈ ರೀತಿ ರಾಮಾಶ್ವ ದಿಗ್ವಿಜಯ ನಡೆಯುತ್ತಿರುವುದು ಪುತ್ತೂರಿನಲ್ಲೇ ಪ್ರಥಮ ಎಂದು ಹಿರಿಯ ಕರಸೇವಕ ರಾಜೇಶ್ ಬನ್ನೂರು ಹೇಳಿದರು. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ನಡೆಯುತ್ತಿರುವ ಹೊತ್ತಲ್ಲಿ ಕರಸೇವಕರನ್ನು ಗೌರವಿಸುತ್ತಿರುವದು ಶ್ಲಾಘನೀಯ ಕಾರ್ಯ ಎಂದು ಮತ್ತೊಬ್ಬ ಹಿರಿಯ ಕರಸೇವಕ ಪಿ.ಜಿ. ಚಂದ್ರಶೇಖರ ರಾವ್ ಹೇಳಿದರು.
ನಮ್ಮ ಸುಕೃತ..
ಅಯೋಧ್ಯೆಯಲ್ಲಿ ಸುಮಾರು 1 ಸಾವಿರ ಕೋಟಿ ರೂ. ವೆಚ್ಚದ ಭವ್ಯ ಮಂದಿರ ನಮ್ಮ ಜೀವಿತಾವಧಿಯಲ್ಲೇ ನಡೆಯುತ್ತಿರುವುದು ನಮ್ಮ ಸುಕೃತ. 22ರಂದು ದೇವಳದಲ್ಲಿ ನಡೆಯುವ ರಾಮ ತಾರಕ ಯಜ್ಞಕ್ಕೆ ಬೇಕಾದ ಸಮಿತ್ತು, ಆಜ್ಯಗಳನ್ನು ರಾಮಾಶ್ವ ದಿಗ್ವಿಜಯ ಸಂದರ್ಭ ಸಂಗ್ರಹಿಸಲಾಗುವುದು. 22ರಂದು ಬೆಳಗ್ಗಿನಿಂದ ದೇವಳ ದೇವರಮಾರು ಗದ್ದೆಯಲ್ಲಿ ಯಜ್ಞ ನಡೆದು ಮಧ್ಯಾಹ್ನ ಪೂರ್ಣಾಹುತಿ ನಡೆಯಲಿದೆ.ಎಂದು ಈ ಸಂದರ್ಭ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾಧ್ಯಮಗಳಿಗೆ ತಿಳಿಸಿದರು.
Be the first to comment on "ರಾಮ ಪ್ರತಿಷ್ಠೆಗೆ ಅಶ್ವ ಸಂದೇಶ: ಪುತ್ತೂರಿನಲ್ಲಿ ವಿನೂತನ ರಾಮಾಶ್ವ ದಿಗ್ವಿಜಯ ಯಾತ್ರೆ"