ಬಂಟ್ವಾಳ: ಸಂವಿಧಾನ ಇಂದು ಅಪಾಯದ ಸ್ಥಿತಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಂವಿಧಾನದ 75 ವರ್ಷಾಚರಣೆ ಅಂಗವಾಗಿ ರಾಜ್ಯದಲ್ಲಿ ಜನವರಿ 26ರಿಂದ ಒಂದು ತಿಂಗಳ ಕಾಲ ಸಂವಿಧಾನ ಜಾಥಾ ನಡೆಯಲಿದೆ. ಸಂವಿಧಾನ ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಭಾನುವಾರ ಸಂಜೆ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಬಂಟ್ವಾಳ ತಾಲೂಕು ಆಶ್ರಯದಲ್ಲಿ ತಾಲೂಕು ಮಟ್ಟದ ಡಾ. ಬಿ.ಆರ್.ಅಂಬೇಡ್ಕರ್ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಿತರಿಗೆ, ಅವಕಾಶ ವಂಚಿತರಿಗೆ ಅಂಬೇಡ್ಕರ್ ಅವರು ಪ್ರೇರಣಾ ಶಕ್ತಿಯಾಗಿದ್ದಾರೆ. ವೈಚಾರಿಕ ಆಲೋಚನೆಗಳ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕು. ಭಾರತವು ಬಹುತ್ವದ ರಾಷ್ಟ್ರವಾಗಿದ್ದು, ವೈವಿಧ್ಯತೆಯಲ್ಲಿ ಏಕತೆ ಇರುವ ನೆಲವಾಗಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ, ನಮ್ಮನ್ನು ಸಂವಿಧಾನವು ರಕ್ಷಿಸಲಿದೆ. ಪ್ರಜಾಪ್ರಭುತ್ವದ ಕತ್ತು ಹಿಚುಕುವ ಪ್ರಯತ್ನಗಳ ವಿರುದ್ಧ ನಾವು ಜಾಗೃತರಾಗಬೇಕಿದೆ. ಆದರೆ, ಇಂದು ಸಂವಿಧಾನವು ಅಪಾಯದತ್ತ ಸಾಗುತ್ತಿದೆ ಎಂದು ಸಚಿವರು ಹೇಳಿದರು.
ಅಂಬೇಡ್ಕರ್ ನಮ್ಮ ಪ್ರೇರಣಾ ಶಕ್ತಿಯಾಗಿದ್ದು, ಅವರನ್ನು ಪೂಜಿಸುವುದಷ್ಟೇ ಅಲ್ಲ, ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ಧಾರ್ಮಿಕ ವಿಚಾರಗಳು ವೈಯಕ್ತಿಕವಾಗಿದ್ದು, ಸರಕಾರದ ಆಯ್ಕೆಯಾಗಿರುವುದಿಲ್ಲ. ಸೌಹಾರ್ದತೆಯನ್ನು ಕಾಪಾಡುವುದು ನಮ್ಮ ಆಶಯವಾಗಿದ್ದು, ಸಂವಿಧಾನ ಪೀಠಿಕೆಯನ್ನು ಈ ಕಾರಣಕ್ಕಾಗಿಯೇ ಶಾಲೆಗಳಲ್ಲಿ ಓದಲು ಹೇಳಿದ್ದು, ಅದರ ಅರ್ಥವನ್ನೂ ಗ್ರಹಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಇಂದು ಅಂಬೇಡ್ಕರ್ ಭವನ ಸಹಿತ ಸರಕಾರಿ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗಳು ಇಲ್ಲದ ಕಾರಣ ಸಮಸ್ಯೆಗಳು ಉಂಟಾಗುತ್ತಿದ್ದು, ಎಲ್ಲ ಸರಕಾರಿ ಕಚೇರಿಗಳು ಒಂದೇ ಸೂರಿನಲ್ಲಿ ನಿರ್ಮಾಣವಾಗುವಂಥ ವ್ಯವಸ್ಥೆ ಕಲ್ಪಿಸಿದರೆ, ಪಾರ್ಕಿಂಗ್ ವ್ಯವಸ್ಥೆಗೂ ಸರಿಯಾದ ಯೋಜನೆ ರೂಪಿಸಿದರೆ ಅನುಕೂಲವಾಗುತ್ತದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ತಾನು ಮಂತ್ರಿಯಾಗಿ ಅಧಿಕಾರದಲ್ಲಿದ್ದ ಸಂದರ್ಭ, ಡಾ. ಎಚ್.ಸಿ. ಮಹದೇವಪ್ಪ ಅವರು ಬಂಟ್ವಾಳ ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ಒದಗಿಸಿರುವುದನ್ನು ನೆನಪಿಸಿ, ಸೌಹಾರ್ದ ಸೇತುವೆ ಸಹಿತ ಹಲವು ಕೆಲಸಗಳು ಬಾಕಿ ಉಳಿದಿದ್ದು, ಅವುಗಳ ಕಡೆಗೂ ಗಮನಹರಿಸುವಂತೆ ಮನವಿ ಮಾಡಿದರು.
ತನಗೆ ದೊರೆತ ಸನ್ಮಾನವನ್ನು ರೈಗೆ ಮಾಡಿದ ಶಾಸಕ ನಾಯ್ಕ್, ಈ ನಡೆ ಶ್ಲಾಘಿಸಿದ ಸಚಿವ
ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಹಾಗೂ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಪೇಟ, ಶಾಲು ಸಹಿತ ಸನ್ಮಾನ ಮಾಡಲು ಇಲಾಖೆ ಏರ್ಪಡಿಸಿತ್ತು. ಸಚಿವರ ಸನ್ಮಾನದ ಬಳಿಕ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿತ್ತು. ಈ ಸಂದರ್ಭ ತನಗೆ ಸನ್ಮಾನ ಮಾಡುವ ಬದಲು ಮಾಜಿ ಸಚಿವ ರಮಾನಾಥ ರೈ ಅವರಿಗೆ ಮಾಡಲು ಶಾಸಕರು ಸೂಚಿಸಿ, ಅವರೇ ರಮಾನಾಥ ರೈ ಅವರಿಗೆ ಪೇಠ ತೊಡಿಸಿದರು. ಈ ನಡೆಯನ್ನು ಸಚಿವ ಎಚ್.ಸಿ. ಮಹದೇವಪ್ಪ ಶ್ಲಾಘಿಸಿದರು
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ ಬಿ, ಅಧಿಕಾರಿಗಳಾದ ಭಾರತಿ, ಮಂಜುಳಾ, ಶಿಕ್ಷಣಾಧಿಕಾರಿ ಮಂಜುನಾಥನ್ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತ ಕುಮಾರಿ ವಂದಿಸಿದರು. ಶಿಕ್ಷಣ ಇಲಾಖೆಯ ಸುಜಾತಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ವಿವಿಧ ದಲಿತಪರ ಸಂಘಟನೆಗಳಿಂದ ಪೊಳಲಿ ದ್ವಾರದಿಂದ ಅಂಬೇಡ್ಕರ್ ಭವನದವರೆಗೆ ಜಾಥಾ ನಡೆಯಿತು. ತಾಲೂಕಿನ ನಾನಾ ಸಂಘಟನೆಗಳ ಮುಖಂಡರು, ಸದಸ್ಯರು, ಪುರಸಭೆ, ಗ್ರಾಪಂ, ಸದಸ್ಯರು, ಮಾಜಿ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Be the first to comment on "ಬಂಟ್ವಾಳದಲ್ಲಿ ಡಾ. ಅಂಬೇಡ್ಕರ್ ಭವನ ಉದ್ಘಾಟನೆ, ಸಂವಿಧಾನದ ಕುರಿತು ಅರಿತುಕೊಳ್ಳಲು ಜ.26ರಿಂದ ರಾಜ್ಯಾದ್ಯಂತ ಸಂವಿಧಾನ ಜಾಥಾ: ಸಚಿವ ಡಾ. ಮಹಾದೇವಪ್ಪ"