ಬಂಟ್ವಾಳ: ಬಿ.ಸಿ.ರೋಡ್, ಬಂಟ್ವಾಳ ಸಹಿತ ಬಂಟ್ವಾಳ ತಾಲೂಕಿನ ಕೆಲ ಭಾಗದಲ್ಲಿ ಮಂಗಳವಾರ ರಾತ್ರಿ ಹನಿ ಮಳೆಯಾಗಿದ್ದರೆ, ಬೆಳಗಿನ ಜಾವ ಉತ್ತಮ ಮಳೆಯಾಯಿತು. ಕೆಲವೆಡೆ ರಸ್ತೆಯಲ್ಲಿ ನೀರು ಹರಿದುಹೋಗುವಷ್ಟು ಮಳೆ ಸುರಿದಿದೆ.
ಸಣ್ಣ ಕೃಷಿಕರ ಸಹಿತ ಅಂಗಳದಲ್ಲಿ ಅಡಕೆ ಒಣಗಲು ಹಾಕಿದವರಾದಿಯಾಗಿ ಹಲವು ಕೃಷಿಕರು ಇದರಿಂದ ತೊಂದರೆಗೆ ಒಳಗಾದರು. ಅಂಗಳದಲ್ಲಿ ಹಾಕಿದ ಅಡಕೆ ಒದ್ದೆಯಾಗಿ ಅನಿರೀಕ್ಷಿತ ಮಳೆಯಿಂದ ಕಿರಿಕಿರಿ ಅನುಭವಿಸಿದರು. ಇನ್ನು ಬೆಳಗಿನ ಜಾವ ಕಚೇರಿ, ಶಾಲೆ, ಕಾಲೇಜುಗಳಿಗೆ ತೆರಳುವವರೂ ಮಳೆಯಿಂದ ಸಮಸ್ಯೆ ಅನುಭವಿಸಿದರು. ಈಗ ಹಲವು ಶುಭ ಕಾರ್ಯಗಳು ನಿಗದಿಯಾಗಿದ್ದು, ಅಲ್ಲಿಗೆ ತೆರಳುವವರ ಸಹಿತ ಬಸ್ಸುಗಳಲ್ಲಿ ಸಂಚರಿಸುವವರು, ಬಿ.ಸಿ.ರೋಡಿನಂಥ ಸೂರಿಲ್ಲದ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವವರು ತೊಂದರೆಗೆ ಒಳಗಾದರು.
ಇಂದು (ಜ.3) ಬೆಳಗ್ಗೆ 8.30ರಿಂದ ಜನವರಿ 3ರ ಬೆಳಗ್ಗೆ 8.30ರ ತನಕದ ಅವಧಿಒಯಲ್ಲಿ ಕೆಲವು ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಒಣಹವೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಜನವರಿ 1ರಂದು ಮಧ್ಯಾಹ್ನ ಪ್ರಕಟಿಸಿರುವ ವರದಿ ವಿವರ ನೀಡಿದೆ.
ಕರಾವಳಿ ಕರ್ನಾಟಕದ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಆದಾಗ್ಯೂ, ಹವಾಮಾನಕ್ಕೆ ಸಂಬಂಧಿಸಿದ ಯಾವುದೇ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿಲ್ಲ.
Be the first to comment on "ಬಿ.ಸಿ.ರೋಡ್, ಬಂಟ್ವಾಳ ಪರಿಸರದಲ್ಲಿ ಉತ್ತಮ ಮಳೆ, ಕೃಷಿಕರಿಗೆ ಕಿರಿಕಿರಿ, ರಸ್ತೆ ಪಕ್ಕ ಕೆಸರುಮಯ, ಸೂರಿಲ್ಲದ ಪ್ರಯಾಣಿಕರ ತಂಗುದಾಣಲ್ಲಿ ಕಾಯುವವರಿಗೆ ಸಮಸ್ಯೆ"