ಸುಮಾರು 84 ವರ್ಷಗಳಷ್ಟು ಹಿರಿದಾದ ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ.ರೋಡಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಎಂಬಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯಕ್ಕೆ 130ರಷ್ಟು ವಿದ್ಯಾರ್ಥಿಗಳು ಎಲ್.ಕೆ.ಜಿ.ಯಿಂದ ಏಳನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು ಏಳು ವರ್ಷಗಳ ನಂತರ ಶಾಲಾ ಹೊರಾಂಗಣದಲ್ಲಿ ಝಗಮಗಿಸುವ ವಿದ್ಯುದ್ದೀಪಾಲಂಕಾರದೊಂದಿಗೆ ವೇದಿಕೆಯಲ್ಲಿ ನಡೆದ ಶಾಲಾ ಮಕ್ಕಳ ಪ್ರತಿಭಾ ಪ್ರದರ್ಶನ ಮತ್ತು ಪ್ರತಿಭಾ ಪುರಸ್ಕಾರ ಸಹಿತ ವಾರ್ಷಿಕೋತ್ಸವ ಊರ ವಿದ್ಯಾಭಿಮಾನಿಗಳು, ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಶಿಕ್ಷಕರ ಮುತುವರ್ಜಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಾಥ್ ನೊಂದಿಗೆ ಶನಿವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಕಳೆದ ಎರಡು ವರ್ಷಗಳಲ್ಲಿ ಶಾಲೆಗೆ ದಾನಿಗಳ ಹಲವು ಕೊಡುಗೆಗಳು ಬಂದಿದ್ದು, ರೋಟರಿ ಕ್ಲಬ್ ಬಂಟ್ವಾಳ, ಜೇಸಿ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಟೌನ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನಂಥ ಸ್ವಯಂಸೇವಾ ಸಂಸ್ಥೆಗಳ ಸಹಿತ ವಿದ್ಯಾಭಿಮಾನಿಗಳು, ದಾನಿಗಳು ಶಾಲೆಗೆ ಕಂಪ್ಯೂಟರ್, ಶುದ್ಧ ಕುಡಿಯುವ ನೀರು, ಟೈಲ್ಸ್, ಮೈಕ್ ಮತ್ತು ಪೋಡಿಯಂ, ತಂತಿಬೇಲಿ, ಟೇಬಲ್, ಕುರ್ಚಿಗಳು, ಮಕ್ಕಳಿಗೆ ನೋಟ್ ಬುಕ್, ಐಡಿ ಕಾರ್ಡ್, ಬೆಲ್ಟ್ ಸಹಿತ ಶಾಲೆಯ ಭೌತಿಕ ಅವಶ್ಯಕತೆಗಳು ಹಾಗೂ ಮಕ್ಕಳಿಗೆ ಕಲಿಕೆಗೆ ಪೂರಕವಾದ ಕೊಡುಗೆಗಳನ್ನು ನೀಡಿದ್ದಾರೆ. ವಾರ್ಷಿಕೋತ್ಸವ ಸಂದರ್ಭ ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗಾಗಿ ಆರಂಭಗೊಂಡ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಚಾಲನೆ ನೀಡಿದರು. ಟ್ರಸ್ಟ್ ವತಿಯಿಂದ ಹಲವು ನೆರವುಗಳನ್ನು ನೀಡಲಾಗುತ್ತಿದ್ದು, ಶಾಲೆಯ ವಿದ್ಯಾರ್ಥಿಗಳು ಸದುಪಯೋಗಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಇಂದು ವಿಜ್ಞಾನ, ಆಡಳಿತ ಸಹಿತ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ತಾವು ಕಲಿತ ಶಾಲಾಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಸೈನಿಕರು ಮತ್ತು ಶಿಕ್ಷಕರೊಂದಿಗೆ ಗೌರವಪೂರ್ವಕವಾಗಿ ಸಮಾಜ ನಡೆಸಿಕೊಳ್ಳಬೇಕು ಎಂದ ಅವರು, ಶಾಲೆಗಳನ್ನು ದೇವಾಲಯದ ರೂಪದಲ್ಲಿ ನಾವು ಕಾಣಬೇಕು. ಬಂಟ್ವಾಳ ತಾಲೂಕಿನಲ್ಲಿ ಶಾಲಾಭಿವೃದ್ಧಿಗೆ ಸಮಾಜದ ಕೊಡುಗೆ ಅಪಾರವಾಗಿದೆ. ಹಿರಿಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ, ಶಾಲೆಯನ್ನು ಸುಂದರವಾಗಿ ರೂಪಿಸಬಹುದು ಎಂದು ಬಂಟ್ವಾಳ ತಾಲೂಕಿನ ಹಲವು ಶಾಲೆಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಇಂಥ ಶಾಲಾಪ್ರೀತಿ ನಮ್ಮ ನಿಮ್ಮಲ್ಲಿರಲಿ, ಇದು ನಿಜವಾದ ಮಾನವೀಯ ಧರ್ಮ ಎಂದರು. ನಿಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸುವುದು ಒಳ್ಳೆಯದಲ್ಲ. ಪ್ರೀತಿಸುವುದರ ಜೊತೆಗೆ ಧೈರ್ಯವನ್ನು ತುಂಬಿ ಎಂದು ಅವರು ಪೋಷಕರಿಗೆ ಕಿವಿಮಾತು ಹೇಳಿದರು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಕಾಶ್ ಬಾಳಿಗಾ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ, ಶಿಕ್ಷಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಸಮಾಜದಲ್ಲಿ ಉತ್ತಮವಾದ ಪ್ರಜೆಗಳಾಗಬೇಕು ರೋಟರಿ ಕ್ಲಬ್ ಬಂಟ್ವಾಳ ಸದಾ ಶಾಲೆಯೊಂದಿಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪುರಸಭಾ ಸದಸ್ಯೆ ವಿದ್ಯಾವತಿ ಪ್ರಮೋದ್ ಕುಮಾರ್ ಶುಭ ಹಾರೈಸಿ ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಬದ್ಧ ಎಂದು ಹೇಳಿದರು.
ಶಿಕ್ಷಣ ಸಂಯೋಜಕಿ ಸುಜಾತಾ ಕುಮಾರಿ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರೇಮಲತಾ, ಹಿರಿಯ ವಿದ್ಯಾರ್ಥಿ ಹಾಗೂ ದಸ್ತಾವೇಜು ಬರೆಹಗಾರ ಟಿ.ಗಣೇಶ್ ರಾವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನವೀನ್ ಪಿ.ಎಸ್, ಬಿ.ಮೂಡ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಗೀತಾ, ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಕುಶಲಾ ಎ, ನಿವೃತ್ತ ಶಿಕ್ಷಕರಾದ ಶೇಷಪ್ಪ ಮಾಸ್ಟರ್, ನಾರಾಯಣ, ಸುಮಿತ್ರಾ ಕೆ.ಆರ್, ಮೊಡಂಕಾಪು ದೀಪಿಕಾ ಪ್ರೌಢಶಾಲೆ ನಿವೃತ್ತ ಅಧ್ಯಾಪಕ ಎಚ್.ಎನ್.ಹೆಬ್ಬಾರ್, ಎಸ್.ಡಿ.ಎಂ.ಸಿ.ಯ ಮಾಜಿ ಅಧ್ಯಕ್ಷ ಸತೀಶ್ ಕುಲಾಲ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಮಮತಾ, ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ನವೀನ್ ಪಿ.ಎಸ್. ಅವರನ್ನು ಸನ್ಮಾನಿಸಲಾಯಿತು. ಕಲಿಕೆ, ಕ್ರೀಡೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಪೋಷಕರ, ಹಿರಿಯ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಾರ್ಷಿಕ ವರದಿಯನ್ನು ಮುಖ್ಯೋಪಾಧ್ಯಾಯಿನಿ ಕೆ. ಲಕ್ಷ್ಮೀ ಮಂಡಿಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಹೇಮಾವತಿ ಬಹುಮಾನಿತರ ಪಟ್ಟಿ ವಾಚಿಸಿದರು. ಸಹಶಿಕ್ಷಕಿ ತಾಹಿರಾ ಬಿ. ವಂದಿಸಿದರು. ಸಹಶಿಕ್ಷಕಿ ಸುಶೀಲಾ ಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಶಿಕ್ಷಕರಾದ ಪೂರ್ಣಿಮಾ, ನಿಶ್ಮಿತಾ, ಲಾವಣ್ಯ, ಶಿವಮೂರ್ತಿ, ಸಿಬಂದಿಗಳಾದ ಸುನೀತಾ, ಜ್ಯೋತಿ, ಸವಿತಾ, ಹಿರಿಯ ವಿದ್ಯಾರ್ಥಿಗಳಾದ ಸಂದೀಪ್ ಸಾಲ್ಯಾನ್, ದೇವದಾಸ್ ಅಗ್ರಬೈಲ್ ಸಹಕರಿಸಿದರು.
Be the first to comment on "ಬಿ.ಸಿ.ರೋಡ್ ಅಜ್ಜಿಬೆಟ್ಟು ಸರ್ಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ, ಶಾಲೆಗೆ ದಾನಿಗಳ ನೆರವಿನಿಂದ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ"