ಕೆದಿಲ ಮತ್ತು ಪೆರಾಜೆ ಗ್ರಾಮಗಳಲ್ಲಿ ಗೋಮಾಳ ಜಮೀನಿನ ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಿ, ಗಡಿಗುರುತು ನಡೆಸಿ, ಸಂರಕ್ಷಿಸಿ ಉದ್ದೇಶಿತ ಕಾರ್ಯಕ್ಕೆ ಬಳಸುವಂತೆ ಒತ್ತಾಯಿಸಿ ಹಿಂದು ಜಾಗರಣಾ ವೇದಿಕೆ, ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸಹಯೋಗದಲ್ಲಿ ಬಂಟ್ವಾಳದಲ್ಲಿ ಬುಧವಾರ ಉಪತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕೆದಿಲ ಗ್ರಾಮ ಹಾಗು ಪೆರಾಜೆ ಗ್ರಾಮದ ಗಡಿ ಪ್ರದೇಶವಾದ ಗಡಿಯಾರ ಸ್ವಾಗತ ನಗರದ ಬಳಿ, ಹಾಗು ಪೆರಾಜೆ ಗ್ರಾಮದಲ್ಲಿ ಗೋಮಾಳದ ಜಾಗವಿದ್ದು, ಕೆಲವು ವರುಷಗಳಿಂದ ಅತಿಕ್ರಮಣ ನಡೆಯುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಬ.ಗಣರಾಜ ಭಟ್ ಈ ಸಂದರ್ಭ ಆರೋಪಿಸಿದರು.
ಇಲ್ಲಿ ಮನೆಗಳು ತಲೆ ಎತ್ತಿದ್ದು, ವಿದ್ಯುತ್, ನೀರಾವರಿ ವ್ಯವಸ್ಥೆ ಕಲ್ಪಿಸುವ ಕಾರ್ಯವೂ ಆಗುತ್ತಿದ್ದು, ಅತಿಕ್ರಮಣ ಮಾಡುವವರಿಗೆ ರಕ್ಷಣೆಯನ್ನೂ ಮಾಡಲಾಗುತ್ತಿದೆ. ಹೀಗಾಗಿ ಈ ಕುರಿತು ತೆರವು ಕಾರ್ಯವನ್ನು ಶೀಘ್ರವಾಗಿ ನಡೆಸಬೇಕು ಎಂದು ಅವರು ಈ ಸಂದರ್ಭ ಹೇಳಿದರು.
ಗೋಮಾಳ ಜಮೀನಿನಲ್ಲಿ ಇರುವ ಅಕ್ರಮ ಕಟ್ಟಡ ತೆರವುಗೊಳಿಸಿ, ಜಮೀನನ್ನು ಇಲಾಖೆ ವಶಕ್ಕೆ ಪಡೆಯಬೇಕು ಎಂದು ಹೇಳಿದ ಅವರು, ಅತಿಕ್ರಮಣ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಪೆರಾಜೆ ಸಂಚಾಲಕ ಶ್ರೀನಿವಾಸ ಪೆರಾಜೆ, ಕೆದಿಲ ಸಂಚಾಲಕ ವಿಶ್ವನಾಥ ಶೆಟ್ಟಿ ಕೆದಿಲ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ನರಸಿಂಹ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ, ಕುಸುಮಾಧರ, ಸತೀಶ್ , ಲಿಖಿತ್ , ತಿಲಕ್, ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಗುರುರಾಜ್ ಬಂಟ್ವಾಳ, ಬಜರಂಗದಳ ಪ್ರಮುಖರಾದ ರೂಪೇಶ್ ಪೂಜಾರಿ, ಮಹೇಂದ್ರ ಅಶ್ವತ್ತಾಡಿ, ಚಿರಂಜೀವಿ, ಸತೀಶ್ ಮಿತ್ತೂರು, ಉದಯ ಜೋಗಿಬೆಟ್ಟು, ಹೊನ್ನಪ್ಪ ಬಡೆಕೋಡಿ, ನೇರಳಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಾಣಿ, ಗ್ರಾ.ಪಂ.ಸದಸ್ಯರಾದ ಹರೀಶ್ ರೈ ಪೆರಾಜೆ, ರಾಜಾರಾಮ್ ಭಟ್ ಕಾಡೂರು, ಉಮೇಶ್ ಮುರುವ, ಶ್ಯಾಮಪ್ರಸಾದ್ ಭಟ್, ಗ್ರಾಮದ ಪ್ರಮುಖರಾದ ರಾಘವ ಗೌಡ ಪೆರಾಜೆ, ನಟರಾಜ್ ಭಟ್, ವಕೀಲರಾದ ಅರುಣ್ ಭಟ್, ಗಣಪತಿ ಭಟ್ ಮತ್ತಿತರ ಪ್ರಮುಖರು ಹಾಜರಿದ್ದರು.
Be the first to comment on "ಗೋಮಾಳ ಒತ್ತುವರಿ: ಹಿಂಜಾವೇ, ವಿಹಿಂಪದಿಂದ ಮನವಿ ಸಲ್ಲಿಕೆ"