ಬೆಳ್ತಂಗಡಿ ತಾಲೂಕಿನ ನೆರಿಯ-ಕಕ್ಕಿಂಜೆ ರಸ್ತೆಯ ಬಯಲು ಬಸ್ತಿ ಎಂಬಲ್ಲಿ ಒಂಟಿ ಸಲಗವೊಂದು ಕಾರಿಗೆ ಹಾನಿ ಮಾಡಿದ್ದು, ಪ್ರಯಾಣಿಕರು ಗಾಯಗೊಂಡಿದ್ದಾರೆ.
ಆನೆಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು,ಈ ವೇಳೆ ಆಗಮಿಸಿದ ಆಲ್ಟೋ ಕಾರಿನ ಚಾಲಕ ಆತಂಕಗೊಂಡು ನಿಲ್ಲಿಸಿದ್ದಾರೆ. ನಿಂತ ಕಾರಿನ ಬಳಿಗೆ ಆಗಮಿಸಿದ ಆನೆಯು ತನ್ನ ದಾಡೆಯ ಮೂಲಕ ಕಾರನ್ನು ಎತ್ತಿ ಹಾನಿ ಮಾಡಿದೆ. ಕಾರಿನಲ್ಲಿ ಮಗು ಸಹಿತ ಏಳು ಮಂದಿ ಪ್ರಯಾಣಿಸುತ್ತಿದ್ದರು, ನೆರಿಯದ ಸಂಬಂಧಿಕರ ಮನೆಗೆ ಅವರು ಪ್ರಯಾಣಿಸುತ್ತಿದ್ದರು. ಆನೆ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ತಿಳಿದ ಸ್ಥಳೀಯರು ಆಗ ಕಾರನ್ನು ಕಂಡು ನಿಲ್ಲಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಈ ಸಂದರ್ಭ ರಸ್ತೆಯಲ್ಲಿ ಕಾರು ನಿಲ್ಲಿಸುವಷ್ಟರಲ್ಲಿ ಆನೆ ಬಂದಿತ್ತು.
ಆನೆಯು ಘಟನೆಗೆ ಮೊದಲು ಈ ಪರಿಸರದ ಜನನಿಬಿಡ ಪ್ರದೇಶಗಳಲ್ಲಿ ಓಡಾಟ ನಡೆಸಿದ್ದು ಒಬ್ಬರ ಮನೆಯಂಗಳಕ್ಕೂ ಹೋಗಿದೆ. ಅಲ್ಲದೆ ರಸ್ತೆ ಬದಿ ಇರುವ ಮನೆಯೊಂದರ ಗೇಟನ್ನು ಮುರಿಯಲು ಯತ್ನಿಸಿದೆ. ಈ ವೇಳೆ ಸುತ್ತಮುತ್ತಲ ಮನೆಯವರು ಬೊಬ್ಬೆ ಹೊಡೆದಿದ್ದು ಆನೆಯು ಮತ್ತೆ ರಸ್ತೆಗೆ ಬಂದಿತ್ತು. ಕಾರನ್ನು ಎತ್ತಿ ಹಾಕಿದ ಆನೆ ಬಳಿಕ ಸಮೀಪದ ರಬ್ಬರ್ ತೋಟದಲ್ಲಿ ಮತ್ತೆ ಕಂಡು ಬಂದಿದೆ. ಈ ವೇಳೆ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಅಟ್ಟಲು ಕ್ರಮ ಕೈಗೊಂಡರು.
Be the first to comment on "ರಸ್ತೆಯಲ್ಲಿ ಒಂಟಿಸಲಗದ ಪುಂಡಾಟ: ಕಾರನ್ನು ಎತ್ತಿ ನೆಲಕ್ಕೆ ಹಾಕಿದ ಕಾಡಾನೆ"